ಬುಧವಾರ, ಸೆಪ್ಟೆಂಬರ್ 29, 2021
21 °C

ಸರ್ವೀಸ್ ರಸ್ತೆ ನಿರ್ಮಾಣ: ಮುಂದುವರಿದ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ಬಿ.ಎಚ್. ರಸ್ತೆಗೆ ಹೊಂದಿಕೊಂಡಿರುವ ಎಸ್‌ಐಟಿ ಮುಂಭಾಗದ ವಾಲ್ಮೀಕಿ ನಗರದ ಸರ್ವೀಸ್ ರಸ್ತೆಯನ್ನು ನಿಯಮಾನುಸಾರ ವಿಸ್ತರಣೆ ಮಾಡುವಂತೆ ಬಡಾವಣೆಯ ನಾಗರಿಕರು ಒತ್ತಾಯಿಸಿದರು.

ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸೋಮವಾರ ಬಂದ ವಾಲ್ಮೀಕಿ ನಗರ ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು, ನಾಗರಿಕರು ‘ಈಗಾಗಲೇ ರಸ್ತೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಅದನ್ನು ತೆರವುಗೊಳಿಸಿ ನಿಯಮಾನುಸಾರ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು.

ರಸ್ತೆ ವಿಸ್ತರಣೆ ಕಾರ್ಯ ಮುಖ್ಯರಸ್ತೆಯ ಮಧ್ಯಭಾಗದಿಂದ ನಡೆಯುತ್ತಿದ್ದು, ಈ ಕೆಲಸ ರಸ್ತೆಯ ತುದಿಯಿಂದಲೇ ಆರಂಭಿಸಬೇಕು. ಬಲಾಢ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಧ್ಯಭಾಗದಲ್ಲಿ ಕಾಮಗಾರಿ ಮಾಡುತ್ತಿದ್ದು, ತಾರತಮ್ಯ ಮಾಡಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಟಿ.ಸಿ. ದೊಡ್ಡಬಸಪ್ಪ ಆರೋಪಿಸಿದರು.

ಸಿಡಿಪಿ ಪ್ರಕಾರ ರಸ್ತೆ ವಿಸ್ತರಣೆ ಮಾಡಬೇಕು. ಸರ್ವೀಸ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇಂತಹ ಕಿರಿದಾದ ರಸ್ತೆಯಲ್ಲಿ ಸಾರ್ವಜನಿಕರು, ವಾಹನಗಳ ಓಡಾಟ ಕಷ್ಟಕರವಾಗಿದೆ ಎಂದು ಹೇಳಿದರು.

ತಾರತಮ್ಯ ಮಾಡದೆ ನ್ಯಾಯಯುತವಾಗಿ ಕಾಮಗಾರಿ ಮುಂದುವರಿಸಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಎಂಬ ತಾರತಮ್ಯ ಮಾಡಬಾರದು. ನಮ್ಮ ಅಕ್ಕಪಕ್ಕದ ಅಂಗಡಿಗಳನ್ನು ಮೊದಲು ತೆರವುಗೊಳಿಸಿದರೆ ನಮ್ಮ ಅಂಗಡಿಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ. ತಾರತಮ್ಯ ಮಾಡಿದರೆ ಬಿಟ್ಟು ಕೊಡುವುದಿಲ್ಲ ಎಂದು ಕೆಲವು ಅಂಗಡಿಗಳ ಮಾಲೀಕರು ಎಚ್ಚರಿಸಿದರು.

ರಸ್ತೆಯ ಮೂಲದಿಂದ ಕಾಮಗಾರಿ ನಡೆಸದೆ ಮಧ್ಯದಲ್ಲಿ ಬಂದು ತೊಂದರೆ ಕೊಡುತ್ತಿದ್ದಾರೆ. 1ರಿಂದ 3ರವರೆಗೆ ಬಿಟ್ಟು, 4ನೇ ಪಾಯಿಂಟ್‍ಗೆ ಬಂದು ಕಾಮಗಾರಿ ಮಾಡಲಾಗುತ್ತಿದೆ. ನಮ್ಮ ಅಂಗಡಿಯನ್ನು ಮಾತ್ರ ಗುರಿ ಮಾಡಲಾಗಿದೆ. ರಸ್ತೆಯ ತುದಿಯಿಂದ ಕೆಲಸ ಮಾಡಿಕೊಂಡು ಬಂದರೆ ನಮ್ಮ ಅಂಗಡಿ ಸ್ಥಳವನ್ನು ಬಿಟ್ಟು ಕೊಡಲಾಗುವುದು. ಇಲ್ಲವಾದರೆ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ. ಜೆಸಿಬಿ ಮುಂದೆ ತಲೆ ಕೊಡುತ್ತೇನೆ ಎಂದು ಅಂಗಡಿ ಮಾಲೀಕ ಕೆಂಪನರಸಯ್ಯ ಅಳಲು ತೋಡಿಕೊಂಡರು.

22ನೇ ವಾರ್ಡ್ ಪಾಲಿಕೆ ಸದಸ್ಯ ಶ್ರೀನಿವಾಸ್, ‘ಈ ಭಾಗದಲ್ಲಿ ಓಡಾಡಲು ಜನತೆಗೆ ಇರುವುದು ಇದೊಂದೇ ರಸ್ತೆ. ಒತ್ತುವರಿ ತೆರವುಗೊಳಿಸಲಾಗುವುದು. ಅಂಗಡಿ ತೆರವಿಗೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಮಾಲೀಕರು ಕೇಳುತ್ತಿದ್ದಾರೆ. ಇನ್ನೂ ಸ್ವಲ್ಪ ದಿನ ಕಾಲಾವಕಾಶ ಕೊಟ್ಟು ಒತ್ತುವರಿ ತೆರವು ಮಾಡಿದ ನಂತರ ಕಾಮಗಾರಿ ಆರಂಭವಾಗಲಿದೆ’ ಎಂದು
ತಿಳಿಸಿದರು.

ವಾಲ್ಮೀಕಿ ನಗರ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಪ್ರಸನ್ನಕುಮಾರ್, ಸದಸ್ಯರಾದ ವೆಂಕಟೇಶ್, ಶಿವಕುಮಾರ್, ತೋಂಟದಾರಾಧ್ಯ, ವಿನಯ್, ಟಿ.ಸಿ. ಮಂಜುನಾಥ್, ಒಡೆಯರ್, ಲಕ್ಷ್ಮಣಗೌಡ, ರಾಜೇಶ್, ಮಂಜುನಾಥ್, ಗಿರೀಶ್, ಪ್ರಕಾಶ್ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.