ಮಂಗಳವಾರ, ಮೇ 24, 2022
30 °C

ಅಡುಗೆ ಎಣ್ಣೆ, ಕೋಳಿ ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಳೆದ ಎರಡು ವಾರದಿಂದ ಇಳಿಕೆ ಕಂಡಿದ್ದ ಅಡುಗೆ ಎಣ್ಣೆ ಬೆಲೆ ಮತ್ತೆ ದುಬಾರಿಯಾಗಿದ್ದರೆ, ಕೋಳಿ ಬೆಲೆ ಸಹ ಹೆಚ್ಚಳವಾಗಿದೆ. ಹಣ್ಣಿನ ಬೆಲೆ ಕಡಿಮೆಯಾಗುತ್ತಿಲ್ಲ. ಆದರೆ ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಸನ್‌ಫ್ಲವರ್ ಕೆ.ಜಿ.ಗೆ ₹10 ಹೆಚ್ಚಳವಾಗಿ ₹155ಕ್ಕೆ ಏರಿಕೆ ಕಂಡಿದೆ. ಪಾಮಾಯಿಲ್ ಕೆ.ಜಿ ₹5 ಹೆಚ್ಚಳವಾಗಿದ್ದು, ₹120ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಎಣ್ಣೆ ಆಮದು ಕಡಿಮೆಯಾಗಿದ್ದು, ನಿಧಾನವಾಗಿ ಬೆಲೆ ಹೆಚ್ಚಳವಾಗುತ್ತಿದೆ ಎಂದು ವರ್ತಕರು ಹೇಳುತ್ತಾರೆ. ಧಾನ್ಯಗಳ ಬೆಲೆ ಅಲ್ಪಮಟ್ಟಿಗೆ ತಗ್ಗಿದ್ದು, ಆಷಾಢ ಆರಂಭವಾಗಿದ್ದು, ವಹಿವಾಟಿನ ಬಿಸಿ ಕಾಣುತ್ತಿಲ್ಲ.

ಸೇಬು, ದಾಳಿಂಬೆ ಬೆಲೆ ಕೊಂಚ ಕಡಿಮೆಯಾಗಿದ್ದು, ಏರಿಕೆಯಾಗಿದ್ದ ಬಾಳೆ ಹಣ್ಣಿನ ಬೆಲೆ ಅಲ್ಪ ಇಳಿಕೆಯಾಗಿದೆ. ಪೈನಾಪ್‌ ಹಣ್ಣಿನ ಬೆಲೆಯೂ ಸ್ವಲ್ಪ ತಗ್ಗಿದೆ. ಇತರ ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಹಾಗಲಕಾಯಿ ದುಬಾರಿ: ದುಬಾರಿಯಾಗಿದ್ದ ಬೀನ್ಸ್ ಬೆಲೆ ಇಳಿಕೆಯಾಗಿದ್ದು, ಜನರ ಕೈಗೆಟಕುವಂತಾಗಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹಾಗಲಕಾಯಿ ಬೆಲೆ ಕೆ.ಜಿ ₹40ಕ್ಕೆ ಹೆಚ್ಚಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹50 ದಾಟಿದೆ. ಹಸಿಮೆಣಸಿನಕಾಯಿ ಕೆ.ಜಿ 40–45ಕ್ಕೆ ಮಾರಾಟವಾಗುತ್ತಿದೆ.

ಸೌತೆಕಾಯಿ ಬೆಲೆ ಸ್ವಲ್ಪ ಕಡಿಮೆಯಾಗಿದ್ದರೂ ಇನ್ನೂ ಒಂದು ಕಾಯಿಗೆ ₹5–6ಕ್ಕೆ ಮಾರಾಟ ಮಾಡಲಾಗುತ್ತಿದೆ. ಸೊಪ್ಪಿನ ಬೆಲೆ ಬಹುತೇಕ ಸ್ಥಿರವಾಗಿದ್ದು, ಮೆಂತ್ಯ ಸೊಪ್ಪಿನ ಬೆಲೆ ಅಲ್ಪ ಏರಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹25–30, ಸಬ್ಬಕ್ಕಿ ಕೆ.ಜಿ ₹25–30, ಮೆಂತ್ಯ ಸೊಪ್ಪು ಕೆ.ಜಿ ₹30, ಪಾಲಕ್
ಸೊಪ್ಪು ಕೆ.ಜಿ ₹20–25ಕ್ಕೆ ಹೆಚ್ಚಳವಾಗಿದೆ.

ಕೋಳಿ ದುಬಾರಿ: ಬ್ರಾಯ್ಲರ್ ಕೋಳಿ ಈ ವಾರ ಕೆ.ಜಿ.ಗೆ 30 ದುಬಾರಿಯಾಗಿದ್ದು, ಕೆ.ಜಿ ₹180ಕ್ಕೆ, ರೆಡಿ ಚಿಕನ್ ಕೆ.ಜಿ ₹260ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹140ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಸ್ಥಳೀಯವಾಗಿ ಬರುತ್ತಿದ್ದ ಕೋಳಿ ಈಗ ಮಾರುಕಟ್ಟೆಗೆ ಬರುತ್ತಿಲ್ಲ. ಹೊರ ಜಿಲ್ಲೆಗಳಿಂದ ತರಿಸಬೇಕಿದ್ದು, ಬೆಲೆ ಏರಿಕೆಯಾಗಿದೆ. ಶ್ರಾವಣ ಮಾಸದಲ್ಲಿ ಕೋಳಿ, ಮಾಂಸ ಬಳಕೆ ಕಡಿಮೆ. ಆ ವೇಳೆಗೆ ಕೋಳಿ ವಾಟಿವಾಟು ತಗ್ಗುತ್ತದೆ. ಆದರೆ ಈ ಬಾರಿ ಆಷಾಢದಲ್ಲೇ ಕೋಳಿ ಸರಬರಾಜು ಇಲ್ಲವಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಮೀನು ಬೆಲೆ ಏರಿಕೆ: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಿದ್ದು, ಬೆಲೆ ತೀವ್ರವಾಗಿ ಏರಿಕೆ ಕಂಡಿದೆ. ಮಾರುಕಟ್ಟೆಗೆ ಮೀನು ಬರುವುದು ಕಡಿಮೆಯಾಗಿದೆ. ಬಿಳಿಮಾಂಜಿ ಕೆ.ಜಿ ₹1,120, ಅಂಜಲ್ ಕೆ.ಜಿ ₹850, ಕೊಡ್ಡಾಯಿ ಕೆ.ಜಿ ₹480, ಕಾಣೆ ಕೆ.ಜಿ 720, ಸೀಗಡಿ ಕೆ.ಜಿ 720ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.