ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಟ್ಟದಷ್ಟು ಸಮಸ್ಯೆ

ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಕೊರತೆ
Last Updated 5 ಜೂನ್ 2021, 1:33 IST
ಅಕ್ಷರ ಗಾತ್ರ

ತುಮಕೂರು: ಗುಬ್ಬಿ ಆಸ್ಪತ್ರೆಯಲ್ಲಿ ಯುಪಿಎಸ್ ಹಾಳಾಗಿದ್ದರೂ ಒಂದು ವಾರ ದುರಸ್ತಿ ಮಾಡಿಸಲಿಲ್ಲ. ಈ ಅವಧಿಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೊರೊನಾ ಸೋಂಕಿತರಿಗೆ ಆಮ್ಲನಜಕ ಪೂರೈಕೆಯಾಗದೆ ಸಾಕಷ್ಟು ಜನರ ಉಸಿರು ನಿಂತಿತು. ಕೊನೆಗೂ ದುರಸ್ತಿ ಮಾಡಿಸಿದರೂ, ಆಗಾಗ ಕೈಕೊಡುತ್ತಿರುವುದು ಮುಂದುವರಿದಿದೇ ಇದೆ. ಕತ್ತಲೆಯಲ್ಲಿ ಪರದಾಡುವುದು ಮಾತ್ರ ರೋಗಗಳಿಗೆ ತಪ್ಪಿಲ್ಲ.

ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿರುವ ಈ ತಾಲ್ಲೂಕು ಕೇಂದ್ರದ ಆಸ್ಪತ್ರೆಯ ಸ್ಥಿತಿಯೇ ಈ ರೀತಿಯಾದರೆ ಉಳಿದ ಕಡೆಗಳಲ್ಲಿ ಕೇಳುವಂತಿಲ್ಲ. ಹೆಸರಿಗೆ ತಾಲ್ಲೂಕು ಆಸ್ಪತ್ರೆ. ಆದರೆ ಚಿಕಿತ್ಸೆ ಮರೀಚಿಕೆ. ಕೋವಿಡ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಕಾಡುತ್ತಿದೆ. ಕೆಲವೊಮ್ಮೆ ನರ್ಸ್‌ಗಳು ಸಹ ಇರುವುದಿಲ್ಲ. ರಾತ್ರಿ 12 ಗಂಟೆ ನಂತರ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ. ಕುಡಿಯುವ ನೀರು ಸಿಗುವುದಿಲ್ಲ. ಶೌಚಾಲಯದಲ್ಲಿ ದುರ್ವಾಸನೆ. ಈ ಬಗ್ಗೆ ವೈದ್ಯರನ್ನು ಪ್ರಶ್ನಿಸಿದರೆ ‘ನೋಡುತ್ತೇವೆ’ ಎನ್ನುತ್ತಾರೆ. ಯಾರ ಬಳಿಯೂ ಸ್ಪಷ್ಟ ಉತ್ತರ ಇಲ್ಲ.

ಇರುವ ಆಂಬುಲೆನ್ಸ್‌ಗಳು ಸರಿಯಾಗಿ ಬಳಕೆಯಾಗುತ್ತಿಲ್ಲ. ಕೊರೊನಾ ಸೋಂಕಿತರನ್ನು ಕರೆತರಲು, ಮೃತಪಟ್ಟವರನ್ನು ಸಾಗಿಸಲು ಕೊಡುವುದಿಲ್ಲ. ಮೃತರ ಶವ ಸಾಗಿಸಲುಖಾಸಗಿಯವರಿಗೆ ₹12 ಸಾವಿರ ಕೊಡಬೇಕಾಯಿತು ಎಂದು ರೋಗಿಯೊಬ್ಬರ ಸಂಬಂಧಿ ಮಹೇಶ್ ದೂರಿದರು.

ಸೌಲಭ್ಯ ಬಳಕೆಯಾಗುತ್ತಿಲ್ಲ: ಎಂ.ಎನ್.ಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಲ್ಲೂಕು ಆಸ್ಪತ್ರೆಗೆ ಸರಿಸಮಾನವಾಗಿ ಸೌಕರ್ಯ ಕಲ್ಪಿಸಲಾಗಿದೆ. 5 ಮಂದಿ ವೈದ್ಯರು, ಇತರೆ ಸಿಬ್ಬಂದಿ ಇದ್ದಾರೆ. 30 ಹಾಸಿಗೆಗಳ ಸೌಲಭ್ಯವಿದ್ದು, ಅದರಲ್ಲಿ 24 ಹಾಸಿಗೆಗೆ ಆಮ್ಲಜನಕ ಸಂಪರ್ಕ ಕಲ್ಪಿಸಲಾಗಿದೆ. ಆಮ್ಲಜನಕ ಸರಬರಾಜು ಮಾಡಿಲ್ಲ. ಇರುವ ಸೌಲಭ್ಯ ಬಳಕೆಯಾಗುತ್ತಿಲ್ಲ. ಆಸ್ಪತ್ರೆಗೆ ಭೇಟಿ ನೀಡಿದ ಸಮಯದಲ್ಲಿ ಸಿಬ್ಬಂದಿ ಬಿಟ್ಟರೆ ಐವರಲ್ಲಿ ಒಬ್ಬ ವೈದ್ಯರೂ ಇರಲಿಲ್ಲ!

‘ಶಿರಾ ಕೋವಿಡ್ ಆಸ್ಪತ್ರೆಯಲ್ಲಿ ರಾತ್ರಿ 10 ಗಂಟೆ ನಂತರ ಸಿಬ್ಬಂದಿ ಇರುವುದಿಲ್ಲ. 50 ಹಾಸಿಗೆಗೆ ಸರಬರಾಜು ಮಾಡಬೇಕಿದ್ದ ಆಮ್ಲಜನಕವನ್ನು 88 ಹಾಸಿಗೆಗಳಿಗೆ ನೀಡಲಾಗುತ್ತಿದೆ. ತೀವ್ರ ಉಸಿರಾಟದ ಸಮಸ್ಯೆಗೆ ಸಿಲುಕಿದವರು ಆಮ್ಲಜನಕ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆದಿಲ್ಲ’ ಎನ್ನುತ್ತಾರೆ ದೊಡ್ಡಬಾಣಗೆರೆ ಗ್ರಾಮದ ದಯಾನಂದಗೌಡ.

ಒಂದು ಲೋಟ ನೀರೂ ಸಿಗಲ್ಲ: ‘ಕೊರಟಗೆರೆ ಆಸ್ಪತ್ರೆಯ ಅವ್ಯವಸ್ಥೆ ಕೇಳುವಂತಿಲ್ಲ. ಹಾಸಿಗೆ ಮೇಲೆವಿಲವಿಲ ಒದ್ದಾಡುತ್ತಿದ್ದರೂ ಕುಡಿಯಲು ಒಂದು ಲೋಟ ಕೂಡ ನೀರು ಕೊಡುವುದಿಲ್ಲ. ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರಾಗಿದ್ದ ನಮ್ಮ ತಂದೆಯನ್ನು ಕೋವಿಡ್ ಚಿಕಿತ್ಸೆಗೆ ಸೇರಿಸಲಾಗಿತ್ತು. ರೆಮ್‌ಡಿಸಿವಿರ್ ಚುಚ್ಚುಮದ್ದು ನೀಡಲು ₹5 ಸಾವಿರ ಹಣ ಕೇಳಿದರು. ತಕ್ಷಣಕ್ಕೆ ಇರಲಿಲ್ಲ. ಹಣ ಹೊಂದಿಸಿಕೊಂಡು ಸಂಜೆ ಬಂದೆ. ಬೆಳಿಗ್ಗೆ ಚುಚ್ಚುಮದ್ದು ನೀಡಲಾಗುವುದು ಎಂದರು. ರಾತ್ರಿಯೇ ತಂದೆ ಸಾವನ್ನಪ್ಪಿದರು’ ಎಂದು ಹೇಳುತ್ತಲೇ ಕಿರಣ್ ಕುಮಾರ್ ಕಣ್ಣೀರಾದರು.

ಪಾವಗಡ ಕೋವಿಡ್ ಕೇಂದ್ರದಲ್ಲಿ ಮೂಲ ಸೌಕರ್ಯಗಳಿಲ್ಲ. ತಿರುಮಣಿ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕದ ಪೈಪ್‌ಲೈನ್ ಅಳವಡಿಸಿದ್ದರೂ ಆಮ್ಲಜನಕ ಬೆಡ್ ಆರಂಭಿಸಿಲ್ಲ. ಚಿಕಿತ್ಸೆಗೆ 30 ಕಿ.ಮೀ ದೂರದ ಪಾವಗಡಕ್ಕೆ ಹೋಗಬೇಕು. ಅಲ್ಲೂ ಹಾಸಿಗೆ ಸಿಗುವುದು ಅನುಮಾನ.

‘ಕೊರೊನಾ ಸೋಂಕಿತರ ಆಮ್ಲಜನಕದ ಪ್ರಮಾಣ ಪರೀಕ್ಷಿಸುವ ಆಕ್ಸಿಮೀಟರ್‌ಗಳು ಕೆಲವು ಕಡೆಗಳಲ್ಲಿ ಕೆಲಸ ಮಾಡುತ್ತಿಲ್ಲ. ಗ್ರಾಮ ಪಂಚಾಯಿತಿಯವರು ಕೊಟ್ಟ ಎರಡೇ ದಿನಕ್ಕೆ ಹಾಳಾಗುತ್ತಿವೆ. ಏನು ಮಾಡುವುದೆಂದು ತೋಚುತಿಲ್ಲ’ ಎಂದು ಹುಲಿಕುಂಟೆ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ತಿಳಿಸಿದರು.

ಕೋವಿಡ್ ಹಾಟ್‌ಸ್ಪಾಟ್ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಸೋಂಕು, ಸಾವಿನ ಪ್ರಮಾಣ ತಗ್ಗಿಸುವಂತೆ ಸೂಚಿಸಿದ್ದರು. ಮುಖ್ಯಮಂತ್ರಿ ಎಚ್ಚರಿಕೆ ನಂತರವೂ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ.

ಲಸಿಕೆ ಇಲ್ಲ: ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಕೊರತೆ ಇದೆ. ಮೊದಲೇ ನೋಂದಣಿ ಮಾಡಿಸಿದವರಿಗೆ ಲಸಿಕೆ ಬಂದ ದಿನ ದೂರವಾಣಿ ಕರೆಮಾಡಿ ತಿಳಿಸಲಾಗುತ್ತದೆ. ಹಳ್ಳಿಗಳಲ್ಲಿ ಇನ್ನೂ ಸಾಕಷ್ಟು ಜನರು ಲಸಿಕೆಗೆ ಕಾಯುತ್ತಿದ್ದಾರೆ. ಗುಬ್ಬಿ ಪಟ್ಟಣದಲ್ಲಿ ಲಸಿಕೆಗೆಉದ್ದನೆಯ ಸಾಲು ಕಂಡುಬಂತು. ಕೆಲವರಿಗಷ್ಟೇ ಲಸಿಕೆ ಹಾಕಿ ‘ಮಗಿಯಿತು. ನಾಳೆ ಬನ್ನಿ. ಲಸಿಕೆ ಬಂದರೆ ಹಾಕುತ್ತೇವೆ’ ಎಂದು ಸಿಬ್ಬಂದಿ ಹೇಳಿಕಳುಹಿಸಿದರು.

ಕೊರಟಗೆರೆ ತಾಲ್ಲೂಕು ಅಕ್ಕಿರಾಂಪುರ ಗ್ರಾಮದಲ್ಲಿ ಲಸಿಕೆ ಇದ್ದರೂ ಜನರು ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಗ್ರಾಮದಲ್ಲಿ ಕ್ಯಾಂಪ್ ಮಾಡಿ ಲಸಿಕೆ ಹಾಕುತ್ತೇವೆ ಎಂದು ಕಾದು ಕುಳಿತರೂ ಹಾಕಿಸಿಕೊಳ್ಳಲಿಲ್ಲ ಎಂದು ವೈದ್ಯ ಪ್ರಕಾಶ್‌ಗೌಡ ಅಸಹಾಯಕತೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಎಲ್ಲೂ ಆಂಬುಲೆನ್ಸ್, ವೈದ್ಯರು, ಸಿಬ್ಬಂದಿ, ಲಸಿಕೆ ಕೊರತೆ ಇಲ್ಲ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ಹೇಳುತ್ತಾರೆ. ಆದರೆ ಆಂಬುಲೆನ್ಸ್ ಸಿಗದೆ, ವೈದ್ಯರಿಲ್ಲದೆ, ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಗಳು ಬಳಲಿವೆ. ಕೆಲವು ಕಡೆ ಶಾಸಕರು, ದಾನಿಗಳು ಆಂಬುಲೆನ್ಸ್ ನೀಡದಿದ್ದರೆ ರೋಗಿಗಳು ಪರದಾಡಬೇಕಿತ್ತು.

ಹೆಸರಿಗಷ್ಟೇ 24X7 ಆಸ್ಪತ್ರೆ

ನಿಟ್ಟೂರು ಆರೋಗ್ಯ ಕೇಂದ್ರಕ್ಕೆ ಮಧ್ಯಾಹ್ನ 12.30 ಗಂಟೆಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಸಿಬ್ಬಂದಿಯೊಬ್ಬರು ಮಾತ್ರ ಇದ್ದರು. ಆ ವೇಳೆಗಾಗಲೇ ವೈದ್ಯರು ಆಸ್ಪತ್ರೆಯಿಂದ ತೆರಳಿದ್ದರು. ಇತರ ಯಾವ ಸಿಬ್ಬಂದಿಯೂ ಇರಲಿಲ್ಲ. ಇಲ್ಲಿನ ಅವ್ಯವಸ್ಥೆ ನೋಡಿದ ಜನರು ಲಸಿಕೆ ಹಾಕಿಸಿಕೊಳ್ಳಲು, ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿಲ್ಲ. 24X7 ಆಸ್ಪತ್ರೆ ಎಂದು ಗೋಡೆ ಮೇಲೆ ಬರೆಯಲಾಗಿದೆ!

‘ಸಾಮಾನ್ಯ ದಿನಗಳಲ್ಲಿ ವೈದ್ಯರು 11 ಗಂಟೆ ನಂತರ ಬರುತ್ತಾರೆ. ಮಧ್ಯಾಹ್ನದ ವೇಳೆಗೆ ವಾಪಸಾಗುತ್ತಾರೆ. ಕಾದು ಸುಸ್ತಾದವರು ಆಸ್ಪತ್ರೆ ಕಡೆಗೆ ಬರುವುದನ್ನೇ ಬಿಟ್ಟಿದ್ದಾರೆ. ಹೆಸರಿಗಷ್ಟೇ ಆರೋಗ್ಯ ಕೇಂದ್ರ ಇದೆ’ ಎಂದು ರಾಜಾರಾಮ್ ಹೇಳುತ್ತಾರೆ.

ಕೊರಟಗೆರೆ ತಾಲ್ಲೂಕಿನ ಬುಕ್ಕಪಟ್ಟಣ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸುಮಾರು 35 ಗ್ರಾಮಗಳು ಸೇರುತ್ತವೆ. 10 ಗಂಟೆಯಾದರೂ ವೈದ್ಯರೇ ಬಂದಿರಲಿಲ್ಲ. ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬಂದವರು ಯಾವಾಗ ಲಸಿಕೆ ಬರುತ್ತದೆ ಎಂದು ಕೇಳಿಕೊಂಡು ವಾಪಸ್‌ ಹೋಗುತ್ತಿದ್ದ ದೃಶ್ಯ ಕಂಡುಬಂತು.

ಜಟ್ಟಿಅಗ್ರಹಾರದಲ್ಲಿರುವ ಉಪ ಆರೋಗ್ಯ ಕೇಂದ್ರ, ಹೂಲಿಕುಂಟೆ ಗ್ರಾಮದ ಉಪ ಆರೋಗ್ಯ ಕೇಂದ್ರಗಳು ಬಾಗಿಲು ತೆರೆದಿರಲಿಲ್ಲ. ಸಿಬ್ಬಂದಿ ಕೊರತೆ ಎಂಬ ಉತ್ತರವನ್ನು ಅಲ್ಲಿನ ಜನರು ನೀಡುತ್ತಾರೆ. ಮಧುಗಿರಿ ತಾಲ್ಲೂಕಿನ ಮರುವೇಕೆರೆ ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ವೈದ್ಯರು ಮನೆಗೆ ತೆರಳಿದ್ದರು. 24X7 ಸೇವೆ ಎಂದಿದ್ದರೂ ‘ಸೇವೆ’ ಸಲ್ಲಿಸಲು ಸಿಬ್ಬಂದಿಯೇ ಇಲ್ಲ.

ತುರುವೇಕೆರೆ ತಾಲ್ಲೂಕು ಸಂಪಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ರಜೆಯಲ್ಲಿದ್ದು, ಇರುವ ಇಬ್ಬರು ಸಿಬ್ಬಂದಿ ಲಸಿಕೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು. ಸುತ್ತಮುತ್ತಲಿನ 10–15 ಕಿ.ಮೀ ವ್ಯಾಪ್ತಿಯ ಜನರಿಗೆ ಒಂದೊಂದೇ ಆರೋಗ್ಯ ಕೇಂದ್ರ ಆಸರೆಯಾಗಿದೆ. ಸಿಬ್ಬಂದಿ, ಸೌಲಭ್ಯಗಳಿಲ್ಲದೆ ಸೊರಗಿದೆ. ಮಧ್ಯಾಹ್ನದ ನಂತರ ಆಸ್ಪತ್ರೆಗೆ ಬೀಗ ಬೀಳುತ್ತದೆ.

ವರದಿಗೆ ಈಗಲೂ ಕಾಯಬೇಕು: ತುಮಕೂರು ಜಿಲ್ಲೆ ಕೋವಿಡ್ ಹಾಟ್‌ಸ್ಪಾಟ್ ಆಗಿದ್ದರೂ ಕೋವಿಡ್ ವರದಿಗಾಗಿ ಈಗಲೂ 2ರಿಂದ 3 ದಿನ ಕಾಯಬೇಕಿದೆ. ವರದಿ ತಡವಾಗುತ್ತಿದೆ ಎಂಬ ಆಕ್ಷೇಪಗಳು ವ್ಯಕ್ತವಾದ ನಂತರ ಪರೀಕ್ಷೆ ಸಂಖ್ಯೆಯನ್ನೇ ಕಡಿಮೆ ಮಾಡಲಾಗಿದೆ.

***
ವೈದ್ಯರ ನಡೆ ಹಳ್ಳಿ ಕಡೆಗೆ ಜಾರಿಯಾಗಿದೆ. ಮನೆಗಳಿಗೆ ಹೋಗಿ ಪರೀಕ್ಷೆ ಮಾಡಲಾಗುತ್ತಿದೆ. ಮೂರು ಮೊಬೈಲ್ ಯುನಿಟ್ ಬಳಸಲಾಗುತ್ತಿದೆ. ಸೋಂಕಿತರು ತಡವಾಗಿ ಆಸ್ಪತ್ರೆಗೆ ಬರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ

-ಡಾ.ಇ.ರಮೇಶ್ ಬಾಬು, ತಾಲ್ಲೂಕು ವೈದ್ಯಾಧಿಕಾರಿ, ಮಧುಗಿರಿ

***
ಹಣ ಇಲ್ಲದೆ ಚಿಕಿತ್ಸೆ ನೀಡುವುದಿಲ್ಲ. ಐಸಿಯುನಲ್ಲಿ ರೋಗಿಗಳನ್ನು ಮುಟ್ಟಿಯೂ ನೋಡುವುದಿಲ್ಲ. ಲಸಿಕೆಗೆ ಹಣ ಕೊಡಬೇಕು. ಸಿ.ಟಿ ಸ್ಕ್ಯಾನ್ ಮಾಡಿಸಲು ಹೊರಗೆ ರೋಗಿ ಕರೆದುಕೊಂಡು ಹೋಗಲು ಆಂಬುಲೆನ್ಸ್ ಬೇಕಾದರೆ ಹಣ ಕೇಳುತ್ತಾರೆ

-ಕಿರಣ್ ಕುಮಾರ್, ಕೊರಟಗೆರೆ

***
ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ ಸಾವು ಹೆಚ್ಚುತ್ತಿದೆ. ನಿಟ್ಟೂರು ಆಸ್ಪತ್ರೆಗೆ ವೈದ್ಯರೇ ಸರಿಯಾಗಿ ಬರುತ್ತಿಲ್ಲ. ಬದಲಿಸುವಂತೆ ಸಾಕಷ್ಟು ಸಲ ಹೇಳಿದ್ದರೂ ಕೇಳುತ್ತಿಲ್ಲ. ಹಳ್ಳಿಗಳಲ್ಲಿ ಸೋಂಕು ಹರಡುತ್ತಲೇ ಇದೆ

-ಡಾ.ನವ್ಯಾ ಬಾಬು, ಜಿ.ಪಂ ಮಾಜಿ ಸದಸ್ಯೆ, ನಿಟ್ಟೂರು

***

ಕೋವಿಡ್‌ನಿಂದ ಮೃತಪಟ್ಟವರ ಶವ ಸಾಗಿಸಲು ಆಂಬುಲೆನ್ಸ್ ಕೊಡುವುದಿಲ್ಲ. 10 ಕಿ.ಮೀ ದೂರ ಶವ ಸಾಗಿಸಲು ಖಾಸಗಿಯವರಿಗೆ ₹12 ಸಾವಿರ ಕೊಡಬೇಕು. ಆರೈಕೆ ಕೇಂದ್ರಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲ

-ನರಸಿಂಹಮೂರ್ತಿ, ಗ್ರಾ.ಪಂ ಸದಸ್ಯ, ಜಿ.ಹೊಸಹಳ್ಳಿ

***

ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ ಸಾವು ಹೆಚ್ಚುತ್ತಿದೆ. ನಿಟ್ಟೂರು ಆಸ್ಪತ್ರೆಗೆ ವೈದ್ಯರೇ ಸರಿಯಾಗಿ ಬರುತ್ತಿಲ್ಲ. ಬದಲಿಸುವಂತೆ ಸಾಕಷ್ಟು ಸಲ ಹೇಳಿದ್ದರೂ ಕೇಳುತ್ತಿಲ್ಲ. ಹಳ್ಳಿಗಳಲ್ಲಿ ಸೋಂಕು ಹರಡುತ್ತಲೇ ಇದೆ
-ಡಾ.ನವ್ಯಾ ಬಾಬು,<span class="Designate"> ಜಿ.ಪಂ ಮಾಜಿ ಸದಸ್ಯೆ, ನಿಟ್ಟೂರು</span></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT