ಭಾನುವಾರ, ಮಾರ್ಚ್ 7, 2021
28 °C
ಗುಜರಿ ಹೆಕ್ಕಿ ಜೀವನ ನಿರ್ವಹಿಸುವ ಕುಟುಂಬಕ್ಕೆ ಮೋರಿಯೇ ಅರಮನೆ

ಮೋರಿಯೊಳಗೆ ಮುದುಡಿದ ಬದುಕು

ವಿಠಲ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಒಂದೆಡೆ ರಸ್ತೆ ಕಾಮಗಾರಿಗೆ ತಂದು ಹಾಕಿರುವ ಸಿಮೆಂಟ್ ಪೈಪ್‌ಗಳು, ಅವುಗಳ ಪಕ್ಕದಲ್ಲೇ ಆಗತಾನೇ ತಂದಿದ್ದ ಪ್ಲಾಸ್ಟಿಕ್‌ ಬಾಟಲಿಗಳು, ಇತರೆ ಗುಜರಿ ಸಾಮಾನುಗಳನ್ನು ಸುತ್ತಿಗೆಯಲ್ಲಿ ಜಜ್ಜುತ್ತಿದ್ದರು.

ಜಜ್ಜುತ್ತಲೇ ಮಾತು ಮುಂದುವರಿಸಿದರು. ‘ನಾನು ಮತ್ತು ನನ್ನ ತಾಯಿ ಈ ಮನೆಯಲ್ಲೇ ವಾಸಿಸುತ್ತಿದ್ದೇವೆ. ಮೊದಲು ಪೈಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದೆ. ದಿನಕ್ಕೆ ₹ 500 ಸಿಗುತಿತ್ತು. ಈಗ ಲಾಕ್‌ಡೌನ್‌ನಿಂದಾಗಿ ಕೆಲಸಕ್ಕೆ ಯಾರೂ ಕರೆಯುತ್ತಿಲ್ಲ. ಅನಿವಾರ್ಯವಾಗಿ ಗುಜರಿ ವಸ್ತುಗಳನ್ನು ಆಯ್ದು ತಂದು ಇಲ್ಲೇ ಸಮೀಪದ ಅಂಗಡಿಗೆ ಮಾರಿ ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಸಂಘ ಸಂಸ್ಥೆಗಳವರು ಬಂದು ಊಟ ಕೊಡುತ್ತಾರೆ. ಅದರಲ್ಲೇ ಹೊಟ್ಟೆ ತುಂಬಿಸಿಕೊಳ್ಳುತ್ತೇನೆ. ಕೆಲವೊಮ್ಮೆ ನಾನೇ ಅಡುಗೆ ಮಾಡಿಕೊಳ್ಳುತ್ತೇನೆ’ ಎಂದು ಕೋತಿತೋಪು– ಬೆಳಗುಂಗ ರಸ್ತೆ ಮಧ್ಯದಲ್ಲಿರುವ ಎನ್‌.ಆರ್‌.ಕಾಲೊನಿ ರಸ್ತೆ ಬದಿಯ ಪೈಪ್‌ನಲ್ಲಿ ವಾಸವಾಗಿರುವ ಪ್ರಕಾಶ್‌ ನಿಟ್ಟುಸಿರಾದರು.

ಅಲ್ಲೇ ಸಮೀಪದಲ್ಲಿ ಇನ್ನೊಂದು ನಾಲ್ಕು ಸಿಮೆಂಟ್ ಪೈಪ್‌ಗಳು ಕಾಣಲು ಸಿಗುತ್ತವೆ. ಸಮೀಪದಲ್ಲೇ ಪ್ಲಾಸ್ಟಿಕ್ ಬಾಟಲಿ, ಪೇಪರ್‌ ರಾಶಿ, ಸಣ್ಣ ಒಲೆ, ನೀರಿನ ಕ್ಯಾನ್‌ಗಳು, ಬಟ್ಟೆಬರೆ, ಜತೆಗೊಬ್ಬರು ಹೆಂಗಸು ಕಾಣಸಿಗುತ್ತಾರೆ. ಅವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಪ್ರತಿದಿನವೂ ಪೇಪರ್, ಗುಜರಿ ಆಯ್ದು ಜೀವನ ಸಾಗಿಸುತ್ತಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಹೇಗೆ ಜೀವನ ನಿರ್ವಹಣೆ ಮಾಡುತ್ತೀರಿ ಎಂದರೆ ಬಾಟಲಿ, ಪೇಪರ್‌ ಕಡೆಗೆ ಕೈ ತೋರಿಸುತ್ತಾರೆ. ಮೋರಿಯೊಳಗೆ ಬದುಕು ಕಟ್ಟಿಕೊಂಡಿದ್ದಾರೆ. ಹಿಂದಿ, ತೆಲುಗು ಬಿಟ್ಟರೆ ಬೇರೆ ಭಾಷೆ ಬರಲ್ಲ.

ಸಮೀಪದಲ್ಲಿ ಇನ್ನೆರಡು ಹೊಸ ಪೈಪ್‌ಗಳು. ಒಂದು ಬದಿಗೆ ಹರುಕು ಮುರುಕು ರಟ್ಟಿನ ತುಂಡುಗಳನ್ನು ಜೋಡಿಸಿ ಇನ್ನೊಂದು ತುದಿ ಕಾಣದಂತೆ ಮುಚ್ಚಲಾಗಿದೆ. ಸುತ್ತಮುತ್ತ ಸಣ್ಣ ಪುಟ್ಟ ಪಾತ್ರೆಗಳು, ಹರಕು ಬಟ್ಟೆಗಳು, ಚಾಪೆ, ನೀರು ತುಂಬಿಸಲು ಬಣ್ಣ ಮಾಸಿದ ನೀರಿನ ಕ್ಯಾನ್. ರಾತ್ರಿಯಾದರೆ ನಿದ್ದೆಗೆ ಒಂದಿಷ್ಟು ಜಾಗ. ಇದು ನಗರದ ಬೆಳಗುಂಬ ರಸ್ತೆಯಲ್ಲಿರುವ ಪ್ರಕಾಶ್‌ ಅವರ ವಾಸದ ಮನೆ.

‘ಮೊದಲು ಇಲ್ಲೇ ಗುಡಿಸಲು ಇತ್ತು. ಅದನ್ನು ಅಧಿಕಾರಿಗಳು ತೆರವುಗೊಳಿಸಿದರು. ಅನಿವಾರ್ಯವಾಗಿ ಇಲ್ಲಿರುವ ಅಂಗಡಿ ಸಮೀಪ ಜೀವನ ನಡೆಸಲು ಆರಂಭಿಸಿದೆ. ಮಳೆಗಾಲದಲ್ಲಿ ಅಂಗಡಿ ಬಳಿಯೂ ನೀರು ಸೋರುತ್ತಿತ್ತು. ಇಲ್ಲೇ ಪಕ್ಕದಲ್ಲಿ ಮೋರಿ ಇತ್ತು. ಈಗ ಅದರಲ್ಲೇ ನಿದ್ದೆ ಮಾಡುತ್ತೇನೆ’ ಎನ್ನುತ್ತಾರೆ.

‘ಪಡಿತರ ಪಡೆಯಲು ಪಡಿತರ ಚೀಟಿ ಇಲ್ಲ. ಆಧಾರ್‌ ಕಾರ್ಡ್‌ ಇದೆ. ಎದುರು ಬದಿಯ ಗುಜರಿ ಅಂಗಡಿ ತೆರೆಯದಿದ್ದರೆ ನಮಗೆ ಅನ್ನವಿಲ್ಲ. ದಿನಕ್ಕೆ ಅಷ್ಟೋ ಇಷ್ಟೋ ಸಂಪಾದಿಸಿ ಬದುಕುತ್ತಿದ್ದೆವು. ಈಗ ಗುಜರಿ ಅಂಗಡಿಯೂ ಬಾಗಿಲು ಮುಚ್ಚಿದೆ’ ಎಂದು ಅತ್ತಕಡೆ ಕೈ ತೋರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು