ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

73 ಮಕ್ಕಳಲ್ಲಿ ಕೋವಿಡ್ ಪತ್ತೆ

Last Updated 18 ಸೆಪ್ಟೆಂಬರ್ 2021, 2:53 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ 6ರಿಂದ 10ನೇ ತರಗತಿ ವರೆಗೆ ಶಾಲೆಗಳು ಆರಂಭವಾಗಿದ್ದು, ಕಳೆದ ಹತ್ತು ದಿನಗಳಲ್ಲಿ 73 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

39 ಬಾಲಕರು, 34 ಬಾಲಕಿಯರಲ್ಲಿ ಕೋವಿಡ್ ದೃಢಪಟ್ಟಿದ್ದು, ಯಾವುದೇ ಆತಂಕಪಡುವ ಸ್ಥಿತಿ ನಿರ್ಮಾಣವಾಗಿಲ್ಲ. ಕೊರೊನಾ ಸೋಂಕು ಪತ್ತೆಯಾಗಿದ್ದರೂ ಮಕ್ಕಳಲ್ಲಿ ತೀವ್ರತರವಾದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಆರೋಗ್ಯದಲ್ಲೂ ಏರುಪೇರು ಉಂಟಾಗಿಲ್ಲ. ಯಾವ ಮಕ್ಕಳೂ ಆಸ್ಪತ್ರೆಗೆ ದಾಖಲಾಗಿಲ್ಲ. ಎಲ್ಲರೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಸುಸ್ತು ಇದ್ದ ಮಕ್ಕಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡಿದ್ದು ಸೋಂಕು ಖಚಿತವಾಗಿದೆ.

ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ. ಸೋಂಕು ಪತ್ತೆಯಾದ ನಂತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಇತರ ವಿದ್ಯಾರ್ಥಿಗಳು, ಮನೆಯವರು, ಸುತ್ತಮುತ್ತಲಿನ ಜನರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಶಾಲೆಗಳಿಗೆ ನಿಯಮಿತವಾಗಿ ಭೇಟಿನೀಡಿ ಕೋವಿಡ್ ಪರೀಕ್ಷೆ ಮಾಡುತ್ತಿದ್ದಾರೆ. ಆತಂಕ ಪಡುವಂತಹ ವಾತಾವರಣ ಕಾಣಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಕೋವಿಡ್ ದೃಢಪಡುವ ಪ್ರಮಾಣ ಶೇ 2ಕ್ಕಿಂತ ಕಡಿಮೆ ಇದುದ್ದರಿಂದ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರಸ್ತುತ ದೃಢ ಪ್ರಮಾಣ ಶೇ 1ಕ್ಕಿಂತ ಕಡಿಮೆ ಇದೆ. ಶಾಲೆ ಆರಂಭವಾದ ನಂತರವೂ ಕೋವಿಡ್ ದೃಢಪಡುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಪ್ರತಿ ದಿನವೂ ಸೋಂಕಿಗೆ ಒಳಗಾದವರ ಸಂಖ್ಯೆ 50ಕ್ಕಿಂತ ಕಡಿಮೆ ಇದೆ. ಆದರೆ ಸೆ. 15ರಂದು ಮಾತ್ರ 60 ಮಂದಿಗೆ ಸೋಂಕು ತಗುಲಿತ್ತು. ನಂತರದ ದಿನಗಳಲ್ಲೂ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ.

ತಗ್ಗಿದ ಸಾವು: ಕೋವಿಡ್‌ನಿಂದ ಸಾವನ್ನಪ್ಪುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಸೆ. 1ರಿಂದ ಈವರೆಗೆ 16 ದಿನಗಳಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಸೆ. 1ರಂದು 1,098ಕ್ಕೆ ಏರಿಕೆಯಾಗಿತ್ತು. ಸೆ. 16ಕ್ಕೆ ಈ ಸಂಖ್ಯೆ 1,104ಕ್ಕೆ ಹೆಚ್ಚಳವಾಗಿದೆ. ಸಾವಿನ ಪ್ರಮಾಣ ಕಡಿಮೆಯಾಗಿರುವುದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಡಿಡಿಪಿಐ ಸ್ಪಷ್ಟನೆ: ‘ಗುಬ್ಬಿ ಜೂನಿಯರ್ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಮಾತ್ರ ಕೋವಿಡ್ ದೃಢಪಟ್ಟಿತ್ತು. ಮಕ್ಕಳಿಗೆ ಚಿಕಿತ್ಸೆ ಕೊಡಿಸಿ, ಇತರ ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ತಾತ್ಕಾಲಿಕವಾಗಿ ಶಾಲೆಗೆ ರಜೆ ನೀಡಲಾಗಿತ್ತು. ನಂತರ ಆರಂಭಿಸಲಾಯಿತು. ಇತರೆ ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್ ದೃಢಪಟ್ಟ ಮಾಹಿತಿ ಲಭ್ಯವಾಗಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT