ಶುಕ್ರವಾರ, ಜೂನ್ 18, 2021
28 °C

ಸ್ವಂತ ಕಟ್ಟಡದಲ್ಲಿ ಕೋವಿಡ್ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಅವರು ಕೊರೊನಾ ಸೋಂಕಿತರ ನೆರವಿಗೆ ಬಂದಿದ್ದು, ತಮ್ಮ ಸ್ವಂತ ಕಟ್ಟಡದಲ್ಲಿ ಕೋವಿಡ್ ಆಸ್ಪತ್ರೆ ಸಿದ್ಧಗೊಳಿಸಿದ್ದಾರೆ.

‘ಲೈಕ್ ಮೈಂಡೆಡ್ ಆರ್ಗನೈಸೇಷನ್ ಫೋರಂ’ ಎಂಬ ಹೆಸರಿನಲ್ಲಿ ಸಂಘಟನೆ ರಚಿಸಿಕೊಂಡು ತಾತ್ಕಾಲಿಕವಾಗಿ 50 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಿದ್ದಾರೆ. 25 ಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕೆ ‘ಸಲಾಂ’ ಆಸ್ಪತ್ರೆ ಎಂದು ಹೆಸರಿಟ್ಟಿದ್ದು, ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಕಾರ್ಯ ನಿರ್ವಹಿಸಲಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ವ್ಯವಸ್ಥೆ ಮಾಡಿದ್ದು ಮೊಬೈಲ್ 77952 63312, 77952 93312 ಸಂಪರ್ಕಿಸಬಹುದು.

‘ಕೊರೊನಾ ಸೋಂಕಿನ ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಕಡಿಮೆ ಮಾಡಿ, ಜನರ ಪ್ರಾಣ ರಕ್ಷಿಸುವುದು ನಮ್ಮ ಆಶಯ. ಸಾಧಾರಣ, ಮಧ್ಯಮ ಹಂತದ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸಾಧಾರಣ ಪ್ರಕರಣವಾಗಿದ್ದರೆ ಧೈರ್ಯ ತುಂಬಿ, ಮಾರ್ಗದರ್ಶನ ಮಾಡಿ ಮನೆಗೆ ಕಳುಹಿಸಲಾಗುವುದು. ಅವರ ದೂರವಾಣಿ ಸಂಖ್ಯೆ ಪಡೆದುಕೊಂಡು ನಿರಂತರ ಸಂಪರ್ಕ ಸಾಧಿಸಲಾಗುವುದು. ಒಂದು ವೇಳೆ ರೋಗಿ ಗಂಭೀರ ಸ್ಥಿತಿಯಲ್ಲಿ ಇರುವುದು ಕಂಡುಬಂದರೆ ಆಮ್ಲಜನಕ ಒದಗಿಸಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಇಕ್ಬಾಲ್ ಅಹಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

ವೈದ್ಯರಾದ ಇಂತಿಯಾಜ್, ಮುದಸೀರ್, ಅಸ್ಗರ್ ಬೇಗ್, ಇಮ್ರಾನ್, ಅಮೀನ್ ಒಬೇದ್ ಅವರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇಲ್ಲಿ ನಾಲ್ವರು ನರ್ಸ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ತರಬೇತಿ ಪಡೆದುಕೊಂಡು ಫೀವರ್ ಕ್ಲಿನಿಕ್‌ನಲ್ಲಿ ಸೇವೆ ಸಲ್ಲಿಸುತ್ತಿರುವ 15 ಮಂದಿ ಸ್ವಯಂಸೇವಕರ ತಂಡ ನೆರವಾಗಲಿದೆ.

ದಾನಿಗಳಾದ ಕೈಗಾರಿಕೋದ್ಯಮಿ ಅಬ್ದುಲ್ ಹಫೀಜ್, ವರ್ತಕ ಮುದಸೀರ್ ಅಹಮದ್ ರೂಬಿ, ಜಮಾತ್ ಮುಖ್ಯಸ್ಥರಾದ ಮಹಮದ್ ಆಸಿಫ್, ಮುಕರಂ ಸೈಯಿದ್ ನೆರವು ನೀಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.