ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಸ್ಐ ವೆಸ್ಲಿ ಚರ್ಚ್‌ಗೆ 175 ವರ್ಷ: ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

Published 16 ಅಕ್ಟೋಬರ್ 2023, 7:58 IST
Last Updated 16 ಅಕ್ಟೋಬರ್ 2023, 7:58 IST
ಅಕ್ಷರ ಗಾತ್ರ

ತುಮಕೂರು: ನಗರದ ಸಿಎಸ್ಐ ವೆಸ್ಲಿ ಚರ್ಚ್‌ ಪ್ರಾರಂಭವಾಗಿ 175 ವರ್ಷಗಳು ಕಳೆದಿದ್ದು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಚರ್ಚ್‌ನ ಸಭಾ ಪಾಲಕ ಮಾರ್ಗನ್‌ ಸಂದೇಶ್‌ ಇಲ್ಲಿ ಭಾನುವಾರ ಹೇಳಿದರು.

1848ರಲ್ಲಿ ಚರ್ಚ್‌ ಆರಂಭಿಸಲಾಯಿತು. ಇದುವರೆಗೆ 97 ಸಭಾ ಪಾಲಕರು ಸೇವೆ ಸಲ್ಲಿಸಿದ್ದಾರೆ. ಕೈಸ್ತ ಮಿಷನರಿಗಳು ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರಗಳ ಮೂಲಕ ಜನರಿಗೆ ಅಗತ್ಯ ನೆರವು ನೀಡಿವೆ. ನಗರದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಿವೆ. ಕ್ಷಾಮ, ಪ್ಲೇಗ್, ಬರಗಾಲದ ಸಮಯದಲ್ಲಿ ಮಿಷನರಿಗಳು ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದವು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

1877-80ರ ಅವಧಿಯಲ್ಲಿ ತೀವ್ರ ಬರಗಾಲವನ್ನು ಎದುರಿಸಲು ನಗರದ ಬಿಷಪ್ ಸಾರ್ಜೆಂಟ್‌ ಶಾಲೆಯ ಆವರಣದಲ್ಲಿ ಗಂಜಿ ಕೇಂದ್ರ ಶುರು ಮಾಡಲಾಗಿತ್ತು. ಇದರ ಜೊತೆಗೆ ಸಾರ್ವಜನಿಕರಿಗೆ ವೃತ್ತಿಪರ ಕೌಶಲಗಳ ತರಬೇತಿ ನೀಡಿ, ಸ್ವಯಂ ಉದ್ಯೋಗ ಕಂಡುಕೊಳ್ಳಲು ಮಿಷನರಿಗಳು ಹಲವು ಯೋಜನೆಗಳನ್ನು ರೂಪಿಸಿದ್ದವು. ಆಯ್ದ ಭಾಗಗಳಲ್ಲಿ ಚರ್ಚ್‌ಗಳನ್ನು ಪ್ರಾರಂಭಿಸಿ, ಜನ ಸೇವೆಯಲ್ಲಿ ನಿರತವಾಗಿದ್ದವು ಎಂದು ತಿಳಿಸಿದರು.

175ನೇ ವರ್ಷಾಚರಣೆ ಅಂಗವಾಗಿ ಭಾನುವಾರದಿಂದ ಒಂದು ವಾರದ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಜ್ಯ ಮಟ್ಟದ ಗಾಯನ ಸ್ಪರ್ಧೆ, ಅ.16ರಂದು ಮುಖಂಡರ ಸಭೆ, 17ರಂದು ಮಕ್ಕಳಿಗಾಗಿ ಮ್ಯಾಜಿಕ್ ಶೋ, 18ರಂದು ನಗರದ ಎಲ್ಲ ಚರ್ಚ್‌ನ ಸಭಾ ಪಾಲಕರ ಜತೆ ಸಭೆ ನಡೆಯಲಿದೆ. 20ರಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಅ.22 ರಂದು ಚರ್ಚ್‌ನ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ, 75 ವರ್ಷ ಮೇಲ್ಪಟ್ಟವರನ್ನು ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.

ಸಿಎಸ್‌ಐ ವೆಸ್ಲಿ ಚರ್ಚ್‌ನ ಸುರೇಶ್‌ಬಾಬು, ವಿಲಿಯಂ ಸುಂದರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT