ಮಂಗಳವಾರ, ಮೇ 17, 2022
26 °C
ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು

ಕೊಡಿಗೇನಹಳ್ಳಿ: ಬಸ್ ಸೌಕರ್ಯವಿಲ್ಲದೆ ನಿತ್ಯ ನಡಿಗೆ

ಗಂಗಾಧರ್ ವಿ ರೆಡ್ಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: (ಮಧುಗಿರಿ ತಾ) ಬಸ್ಸು ಸೌಕರ್ಯವಿಲ್ಲದೆ ತಿಪಾಪುರ ಗ್ರಾಮದ ಸುಮಾರು 35 ರಿಂದ 40 ವಿದ್ಯಾರ್ಥಿಗಳು ಪ್ರತಿದಿನ ಸುಮಾರು 10 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಓಡಾಡಬೇಕಾಗಿದೆ.

ಈ ವಿಷಯದ ಬಗ್ಗೆ ಪೋಷಕರು ಹಲವು ಬಾರಿ ಮನವಿ ಮಾಡಿದರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಷ್ಟ ಅರ್ಥ ಮಾಡಿಕೊಳ್ಳದೆ ವಿದ್ಯಾರ್ಥಿಗಳನ್ನು ಗೋಳಾಡಿಸುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ತಿಪಾಪುರ ಗ್ರಾಮದಲ್ಲಿ ಸುಮಾರು 500 ಮನೆಗಳಿವೆ. ಆದರೆ ಈ ಗ್ರಾಮಕ್ಕೆ ಯಾವುದೇ ವಾಹನಗಳ ಸೌಲಭ್ಯವಿಲ್ಲ. ಇಲ್ಲಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬೇರೆ ಗ್ರಾಮಕ್ಕೆ ತೆರಳಬೇಕಾದರೆ ಪ್ರತಿದಿನ ಐಡಿಹಳ್ಳಿ ವೃತ್ತ ಅಥವಾ ಐಡಿಹಳ್ಳಿ ಗ್ರಾಮಕ್ಕೆ ತೆರಳಬೇಕಾಗಿದೆ. ದ್ವಿಚಕ್ರ ವಾಹನ ಸೌಲಭ್ಯ ಇರುವವರು ತಮ್ಮ ಮಕ್ಕಳನ್ನು ತಮ್ಮ ವಾಹನಗಳಲ್ಲಿ, ಇನ್ನು ಕೆಲವರು ಆಟೋಗಳಲ್ಲಿ ತೆರಳಿದರೆ, ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರು ವಿಧಿಯಿಲ್ಲದೇ ನಡೆದೇ ಹೋಗುವಂತಾಗಿದೆ. ಬಹುತೇಕ ವಿದ್ಯಾರ್ಥಿಗಳು ವಾಹನ ಸೌಲಭ್ಯವಿಲ್ಲದೇ ಕಾಲ್ನಡಿಗೆ ಮಾಡುತ್ತಿರುವುದು ಸಾಮಾನ್ಯ ಎಂಬಂತಾಗಿದೆ.

ತಿಪಾಪುರ ಗ್ರಾಮ ಮೂಲಸೌಲಭ್ಯವಿಲ್ಲದೇ ಇರುವುದರಿಂದ ಕೆಲ ಪೋಷಕರು ಧೈರ್ಯ ಮಾಡಿ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಐಡಿಹಳ್ಳಿ ಅಥವಾ ಮಧುಗಿರಿಗೆ ಕಳುಹಿಸುತ್ತಾರೆ. ಕೆಲವು ಪೋಷಕರು ಸಮಸ್ಯೆಗಳನ್ನು ಅರಿತು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ. ಮೂಲಸೌಲಭ್ಯಗಳೇ ಸಿಗಲಿಲ್ಲವೆಂದರೆ ಉನ್ನತ ವಿದ್ಯಾಭ್ಯಾಸ ಮಾಡುವುದು ಹೇಗೆ ಎಂದು ವಿದ್ಯಾರ್ಥಿಗಳಾದ ಸುಮಾ, ಗಗನ, ಎನ್. ನಂದಿನಿ, ಎಚ್.ಗಂಗೋತ್ರಿ, ಶಿಲ್ಪ, ಅಂಕಿತಾ, ಪಲ್ಲವಿ, ನವೀನ್ ಕುಮಾರ್, ಅಖಿಲೇಶ್ ಹಾಗೂ ಆಶಾ ಕಾರ್ಯಕರ್ತೆ ಮಂಜುಳಾ ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು