ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತೀಯ ದ್ವೇಷ ಹರಡುವ ಬಿಜೆಪಿ ಸೋಲಿಸಿ: ಸೈಯದ್ ಮುಜೀಬ್

Published 21 ಏಪ್ರಿಲ್ 2024, 5:13 IST
Last Updated 21 ಏಪ್ರಿಲ್ 2024, 5:13 IST
ಅಕ್ಷರ ಗಾತ್ರ

ತುಮಕೂರು: ‘ಕಾರ್ಪೊರೇಟ್‌ ಪರವಾದ, ಮತೀಯ ದ್ವೇಷ ಹರಡುವ ಬಿಜೆಪಿ ಸೋಲಿಸಲು ಕಾಂಗ್ರೆಸ್‌ಗೆ ಮತ ನೀಡಬೇಕು’ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ ಮುಜೀಬ್‌ ಇಲ್ಲಿ ಶನಿವಾರ ಮನವಿ ಮಾಡಿದರು.

ಬಿಜೆಪಿ ಸರ್ಕಾರ ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ನಿರ್ನಾಮ ಮಾಡಲು ಹೊರಟಿದೆ. ಹಣ, ಜಾತಿ, ಧರ್ಮದ ಅಮಲನ್ನೇರಿಸಿ ಬಡವರ ಬದುಕು ಕಿತ್ತು ತಿನ್ನುತ್ತಿದೆ. ಬಂಡವಾಳಗಾರರ ಬಾಲಂಗೋಚಿಯಾದ ಮೋದಿ ಸರ್ಕಾರ ಮಣಿಸಲು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೋದಿ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಪ್ರತಿ ನಿತ್ಯ 30 ರೈತರಂತೆ 1 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರದ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನ ಕಡಿಮೆಯಾಗುತ್ತಿದೆ. ಕನಿಷ್ಠ ಬೆಂಬಲಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದ 750ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಸರ್ಕಾರ ಅರೆ ಸೈನಿಕ ಪಡೆಗಳನ್ನು ಬಳಸಿ ರೈತರ ಮೇಲೆ ದಾಳಿ ಮಾಡಿಸಿದೆ. ರೈತರು ಈ ದೇಶದ ಶತ್ರುಗಳೇ? ಎಂದು ಪ್ರಶ್ನಿಸಿದರು.

ಚುನಾವಣಾ ಬಾಂಡ್‌ಗಳ ಮೂಲಕ ಮೋದಿ ಸರ್ಕಾರ ₹6,500 ಕೋಟಿ ಅಕ್ರಮವಾಗಿ ಗಳಿಸಿದೆ. ಕೇಂದ್ರ ಸರ್ಕಾರ 2014-2023ರ ಮಧ್ಯೆ ಬಂಡವಾಳದಾರರ ₹15.23 ಲಕ್ಷ ಕೋಟಿ ಬ್ಯಾಂಕ್‌ ಸಾಲ ಮನ್ನಾ ಮಾಡಿದೆ. ಇದರ ಋಣ ತೀರಿಸಲು ಚುನಾವಣಾ ಬಾಂಡ್‌ ಹೆಸರಿನಲ್ಲಿ ಬಿಜೆಪಿಗೆ ದೇಣಿಗೆ ನೀಡುತ್ತಿದ್ದಾರೆ ಎಂದು ದೂರಿದರು.

ವಿಶ್ವಸಂಸ್ಥೆಯ ‘ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ’ ಕುರಿತ 2023ರ ವರದಿಯು ದೇಶದಲ್ಲಿ 100 ಕೋಟಿ ಜನರಿಗೆ ಆರೋಗ್ಯಕರ ಆಹಾರ ಸೇವಿಸಲು ಆಗುತ್ತಿಲ್ಲ ಎಂದಿದೆ. ಆದರೆ ಮೋದಿ ಸರ್ಕಾರ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ಸುಳ್ಳು ಹೇಳುತ್ತಿದೆ ಎಂದರು.

ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ ನಡೆಸಲು ‘ಒಂದು ದೇಶ ಒಂದು ಚುನಾವಣೆ’ ಜಾರಿಗೊಳಿಸಲು ಸಂಚು ನಡೆಸುತ್ತಿದೆ. ಚುನಾವಣಾ ಆಯೋಗವನ್ನು ಕೈಗೊಂಬೆ ಮಾಡಿಕೊಳ್ಳಲು ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರನ್ನು ಕೈಬಿಡುವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್‌, ಪದಾಧಿಕಾರಿಗಳಾದ ಸಿ.ಅಜ್ಜಪ್ಪ, ಅಬ್ದುಲ್ ಮುನಾಫ್‌, ಆರ್.ಎಸ್.ಚನ್ನಬಸವಣ್ಣ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT