ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಗಂಗಾ ಕಲ್ಯಾಣ ಯೋಜನೆ ಜಾರಿ ವಿಳಂಬ: ರೈತರ ಹೊಲಕ್ಕೆ ಹರಿಯದ ನೀರು

ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆ ಜಾರಿ ವಿಳಂಬ
Last Updated 1 ಜೂನ್ 2020, 20:00 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯ ಲಾಭ ಪಡೆದುಕೊಳ್ಳಲು ರೈತರು ಹೈರಾಣಾಗುತ್ತಿದ್ದಾರೆ. ವರ್ಷಗಟ್ಟಲೇ ಕಾದು ಕುಳಿತು ಯೋಜನೆಯ ಆಸೆಯನ್ನೇ ಕೈ ಚೆಲ್ಲುತ್ತಿದ್ದಾರೆ.

ವಿವಿಧ ಅಭಿವೃದ್ಧಿ ನಿಗಮಗಳಲ್ಲಿನ ಅಂಕಿ ಅಂಶ ಗಮನಿಸಿದರೆ ವಿಳಂಬ ನೀತಿ ಸ್ಪಷ್ಟವಾಗುತ್ತದೆ. ಸರ್ಕಾರವು ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಅತಿ ಸಣ್ಣ ರೈತರು ನೀರಾವರಿ ಸೌಲಭ್ಯ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆಯೊಂದಿಗೆ ಜಾರಿಗೆ ತಂದ ಯೋಜನೆ ನಿಗದಿತ ಸಮಯದಲ್ಲಿ ಕೈಗೆಟುಕದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಳಂಬ ನೀತಿ ಕೇವಲ ಒಂದು ನಿಗಮಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 2018–19ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 167, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ 132, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ 140, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ 12, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ 12 ಕೊಳವೆ ಬಾವಿಗಳನ್ನು ಕೊರೆಸುವುದು ಬಾಕಿ ಉಳಿದುಕೊಂಡಿವೆ.

2018–19ನೇ ಸಾಲಿನಲ್ಲಿ ಮಂಜೂರಾದ ಕೊಳವೆಗಳನ್ನೇ ಇನ್ನೂ ಕೊರೆಸಲು ಬಾಕಿ ಉಳಿಸಿಕೊಂಡಿರುವಾಗ 2019–20, 2020–21ನೇ ಸಾಲಿನ ಯೋಜನೆ ಪೂರ್ಣಗೊಳ್ಳುವುದು ಯಾವಾಗ. ಇದಕ್ಕೆ ಇನ್ನೆಷ್ಟು ಸಮಯ ಬೇಕಾಗಬಹುದು. ಅಷ್ಟರಲ್ಲಿ ರೈತರ ಸ್ಥಿತಿಗತಿ ಏನಾಗಬಹುದು ಎಂಬ ಯಕ್ಷಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಡಿಸಿಎಂ ಸೂಚನೆ: ಗಂಗಾ ಕಲ್ಯಾಣ ಯೋಜನೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿಯೂ ಆಗಿರುವ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ.ಕಾರಜೋಳ ಅವರು ಮಾರ್ಚ್‌ನೊಳಗೆ ಈ ಯೋಜನೆ ಪೂರ್ಣಗೊಳಿಸುವಂತೆ ರಾಜ್ಯಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಜೂನ್ ಬಂದರೂ ಕಾರ್ಯರೂಪಕ್ಕೆ ಬಂದಿಲ್ಲ.

ವರ್ಷಗಟ್ಟಲೇ ಅಲೆದಾಟ: ಅಧಿಕಾರಿಗಳಲ್ಲಿ ಸಮನ್ವಯದ ಕೊರತೆಯಿಂದಾಗಿ ಅರ್ಜಿ, ಆಯ್ಕೆ ಪ್ರಕ್ರಿಯೆ, ದಾಖಲೆ ಸಂಗ್ರಹ, ಪತ್ರ ವ್ಯವಹಾರ, ಸಬ್ಸಿಡಿ ವಿತರಣೆ, ಕೊಳವೆ ಬಾವಿ ಕೊರೆಸುವುದು, ವಿದ್ಯುತ್ ಸಂಪರ್ಕ– ಹೀಗೆ ಪ್ರತಿಯೊಂದು ಪ್ರಕ್ರಿಯೆಯೂ ತಡವಾಗುತ್ತಿದೆ. ಈ ನಡುವೆ ರೈತರು ಕಚೇರಿಗಳಿಗೆ ವರ್ಷಗಟ್ಟಲೇ ಅಲೆದಾಡಿ ಸುಸ್ತಾಗುತ್ತಿದ್ದಾರೆ. ಇನ್ನೂ ಎಲ್ಲವೂ ಮುಗಿಯುತ್ತಿದೆ ಎನ್ನುವಷ್ಟರಲ್ಲಿ ವಿದ್ಯುತ್ ಇಲಾಖೆ ಸಂಪರ್ಕ ನೀಡುವುದು ತಡವಾಗುತ್ತದೆ. ಇಂತಹ ಒಂದಲ್ಲ ಒಂದು ಕಾರಣದಿಂದಾಗಿ ಸಕಾಲಕ್ಕೆ ರೈತರ ಹೊಲದಲ್ಲಿ ನೀರು ಚುಮ್ಮುತ್ತಿಲ್ಲ.

ಪ್ರಕ್ರಿಯೆ ತ್ವರಿತವಾಗಲಿ
ಜಿಲ್ಲೆಯಲ್ಲಿ ಫಲಾನುಭವಿಗಳ ಆಯ್ಕೆ, ದಾಖಲೆಗಳ ನಿರ್ವಹಣೆ, ಸಬ್ಸಿಡಿ ಬಿಡುಗಡೆ, ಕೊಳವೆ ಬಾವಿ ಕೊರೆಸುವುದು, ಪೈಪ್‌ಗಳನ್ನು ಅಳವಡಿಸುವುದು, ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮುಗಿಯಲು 2 ವರ್ಷಕ್ಕೂ ಹೆಚ್ಚು ಅವಧಿ ವ್ಯಯವಾಗುತ್ತಿದ್ದು, ಈ ಪ್ರಕ್ರಿಯೆ ತ್ವರಿತವಾಗಬೇಕು. ವಿವಿಧ ನಿಗಮ ಹಾಗೂ ಬೆಸ್ಕಾಂ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದರೆ ಸಕಾಲಕ್ಕೆ ಯೋಜನೆ ಕಾರ್ಯ ರೂಪಕ್ಕೆ ಬರುತ್ತದೆ ಎನ್ನುವುದು ರೈತ ಮುಖಂಡರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT