ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಮಾವು ತಲುಪಿಸುವುದೇ ಕಷ್ಟ

Last Updated 8 ಮೇ 2021, 4:57 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಮಾವು ಇಳುವರಿ ಚೆನ್ನಾಗಿ ಬಂದಿದ್ದು, ಕೊಯ್ಲು ಆರಂಭವಾಗಿದೆ. ರೈತರಿಂದ ಮಂಡಿಗಳಿಗೆ, ವರ್ತಕರಿಗೆ ಮಾವಿನ ಕಾಯಿ ತಲುಪುತ್ತಿದೆ. ಆದರೆ, ವರ್ತಕರಿಂದ ಚಿಲ್ಲರೆ ಮಾರಾಟಗಾರರ ಮೂಲಕ ಜನರಿಗೆ ತಲುಪಿಸುವುದೇ ಕಷ್ಟಕರವಾಗಿದೆ.

ಕೋವಿಡ್–19 ಎರಡನೇ ಅಲೆ ಜೋರಾಗಿದ್ದು, ಹಣ್ಣು ಮಾರಾಟಕ್ಕೆ ಬೆಳಿಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಜನರು ಕಣ್ಣಿಗೆ ಕಂಡಿದ್ದು, ಕೈಗೆ ಸಿಕ್ಕಿದ ಹಣ್ಣು ಕೊಳ್ಳುತ್ತಿದ್ದಾರೆ. ಮಾವಿನ ಹಣ್ಣು ಖರೀದಿಗೆ ಮುಂದಾಗುತ್ತಿಲ್ಲ. ಜನರ ಕೈಗೆ ಸಿಗುವಂತೆ ಮಾಡುವುದು ವರ್ತಕರಿಗೆ ದೊಡ್ಡ ಸವಾಲಾಗಿದೆ.

ಇಳುವರಿ: ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಹಿಂದಿನ ವರ್ಷ 1 ಲಕ್ಷ ಟನ್ ಇಳುವರಿ ಬಂದಿದ್ದು, ಈ ವರ್ಷವೂ ಅಷ್ಟೇಪ್ರಮಾಣದ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ಹವಾಮಾನ ವೈಪರೀತ್ಯ,ಮಳೆ, ಗಾಳಿಯಿಂದಾಗಿ ಇಳುವರಿಮೇಲೆ ಕೊಂಚ ಪರಿಣಾಮ ಬೀರಿದ್ದು, 90 ಸಾವಿರ ಟನ್ ಇಳುವರಿಬರಬಹುದು ಎಂದು ಅಂದಾಜಿಸಲಾಗಿದೆ.

ಬೇಡಿಕೆ: ಈಗಾಗಲೇ ರಾಮನಗರದ ಮಾವು ಮಾರುಕಟ್ಟೆಗೆ ಬಂದಿದ್ದು, ಜಿಲ್ಲೆಯ ಮಾವು ಮಾರುಕಟ್ಟೆಗೆ ಕಾಲಿಟ್ಟಿದೆ. ಇನ್ನೂ ಕೋಲಾರ, ಚಿಕ್ಕಬಳ್ಳಾಪುರ ಭಾಗದ ಮಾವು ಕೊಯ್ಲು ಇನ್ನಷ್ಟೇ ಆರಂಭವಾಗಬೇಕಿದೆ. ಹಾಗಾಗಿ, ಜಿಲ್ಲೆಯ ಮಾವಿಗೆ ಹೊರರಾಜ್ಯಗಳಲ್ಲಿ ಬೇಡಿಕೆ ಕಂಡುಬಂದಿದೆ. ಮಹಾರಾಷ್ಟ್ರ, ಪುಣೆ, ಕೇರಳ, ತಮಿಳುನಾಡು ಹಾಗೂ ರಾಜ್ಯದ ಶಿವಮೊಗ್ಗ, ಬೆಂಗಳೂರು, ದಾವಣಗೆರೆ ಮತ್ತಿತರ ಜಿಲ್ಲೆಗಳಿಗೂ ಹೋಗುತ್ತಿದೆ. ಜಿಲ್ಲೆ ವ್ಯಾಪ್ತಿಯಲ್ಲೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಸಾಕಷ್ಟು ಕಡೆಗಳಲ್ಲಿ ಮಾವಿನ ವ್ಯಾಪಾರಿಗಳು ಮೊದಲೇ ತೋಟವನ್ನು ಗುತ್ತಿಗೆ ಪಡೆದುಕೊಂಡಿರುತ್ತಾರೆ. ಇಂತಿಷ್ಟು ಎಂದು ಬೆಲೆ ನಿಗದಿಪಡಿಸಿ ಮುಂಗಡವಾಗಿ ಹಣ ನೀಡಿರುತ್ತಾರೆ. ಈಗ ಬಾಕಿ ಹಣಕೊಟ್ಟು ಕಾಯಿ ಕಿತ್ತುಕೊಂಡು ಬಂದು ಮಂಡಿಗಳಿಗೆ ಹಾಕುತ್ತಿದ್ದಾರೆ. ಮತ್ತೆ ಕೆಲವು ರೈತರು ನೇರವಾಗಿ ಮಂಡಿಗಳಿಗೆ ತಂದು ಮಾರಾಟ ಮಾಡುತ್ತಿದ್ದಾರೆ. ಲಾಕ್‌ಡೌನ್ ಜಾರಿಯಲ್ಲಿ ಇದ್ದರೂ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದ್ದು, ಮಾವಿನ ಕಾಯಿ ಕೀಳಲು, ಮಾರಾಟ ಮಾಡಲು ಹೆಚ್ಚಿನ ಸಮಸ್ಯೆಯಾಗಿಲ್ಲ. ಸಾಗಣೆಗೂ ಯಾವುದೇ ಅಡ್ಡಿಯಾಗಿಲ್ಲ.

ತುಮಕೂರು ರಿಂಗ್ ರಸ್ತೆ, ಗೂಳೂರು, ಹೆಬ್ಬೂರು, ಕುಣಿಗಲ್, ಗುಬ್ಬಿ, ಚೇಳೂರಿನಲ್ಲಿ ಮಂಡಿಗಳನ್ನು ತೆರೆಯಲಾಗಿದ್ದು, ಇಲ್ಲಿಗೆ ರೈತರು ಮಾವಿನಕಾಯಿ ತಂದು ಮಾರಾಟ ಮಾಡುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೆಲೆಯಲ್ಲಿ ಚೇತರಿಕೆ ಕಂಡುಬಂದಿಲ್ಲ. ಜನರಿಗೆ ತಲುಪಿಸುವುದು ಕಷ್ಟಕರವಾಗಿದ್ದು, ಮಾರಾಟ ಪ್ರಮಾಣ ಕಡಿಮೆ ಇದೆ. ಆ ಕಾರಣಕ್ಕೆ ರೈತರಿಂದ ಖರೀದಿಸುವಾಗಲೂ ಚೌಕಾಸಿ ಮಾಡಲಾಗುತ್ತಿದೆ. ಇಲ್ಲವೆ ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT