ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ‘ಸಂಚಾರಿ ಆರೋಗ್ಯ ಘಟಕ’ ಸ್ಥಗಿತ

Published 8 ಫೆಬ್ರುವರಿ 2024, 4:31 IST
Last Updated 8 ಫೆಬ್ರುವರಿ 2024, 4:31 IST
ಅಕ್ಷರ ಗಾತ್ರ

ತುಮಕೂರು: ಗ್ರಾಮೀಣ ಭಾಗದಲ್ಲಿ ಜನರಿದ್ದ ಸ್ಥಳಗಳಿಗೆ ಹೋಗಿ ಆರೋಗ್ಯ ಸೇವೆ ನೀಡುತ್ತಿದ್ದ ‘ಸಂಚಾರಿ ಆರೋಗ್ಯ ಘಟಕ’ಗಳು ಸದ್ಯ ಸಂಚಾರ ನಿಲ್ಲಿಸಿವೆ. ಕೋವಿಡ್‌ ಸಮಯದಲ್ಲಿ ಸ್ಥಗಿತಗೊಂಡಿದ್ದ ಸೇವೆ ಇನ್ನೂ ಆರಂಭವಾಗಿಲ್ಲ.

ಬಸ್‌ಗಳ ಸಂಪರ್ಕ ಇಲ್ಲದ ಗ್ರಾಮಗಳಿಗೆ ತೆರಳಿ, ಅಲ್ಲಿನ ಜನರಿಗೆ ಅಗತ್ಯ ಸೇವೆ ನೀಡುವ ಉದ್ದೇಶದಿಂದ ಸರ್ಕಾರ ಸಂಚಾರಿ ಆರೋಗ್ಯ ಘಟಕಗಳನ್ನು ಆರಂಭಿಸಿತ್ತು. ಸದ್ಯ ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಸಂಚಾರಿ ಘಟಕಗಳಿಲ್ಲ. ಒಬ್ಬ ವೈದ್ಯರು, 2 ಶುಶ್ರೂಷಕಿಯರು, ಒಬ್ಬರು ಸಹಾಯಕರು ಆಂಬುಲೆನ್ಸ್‌ ಮೂಲಕ ಗ್ರಾಮಾಂತರ ಭಾಗಕ್ಕೆ ತೆರಳಿ ಅಲ್ಲಿನ ಜನರ ಆರೋಗ್ಯ ಪರೀಕ್ಷಿಸುತ್ತಿದ್ದರು.

ಸಾರ್ವಜನಿಕರಿಗೆ ಅಗತ್ಯ ಔಷಧಿ ವಿತರಿಸಿ, ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದರು. ಕೋವಿಡ್‌ ನಂತರ ಈ ಸೇವೆ ಸಂಪೂರ್ಣವಾಗಿ ನಿಂತಿದೆ. ಈ ಕೆಲಸಕ್ಕೆ ಬಳಸುತ್ತಿದ್ದ ಆಂಬುಲೆನ್ಸ್‌ಗಳು ಬೆಂಗಳೂರು ಸೇರಿದ್ದು, ಮತ್ತೆ ಜಿಲ್ಲೆಯ ಕಡೆ ಮುಖ ಮಾಡಿಲ್ಲ.

ಜಿಲ್ಲಾ ಕೇಂದ್ರದಿಂದ ತುಂಬಾ ದೂರ ಇರುವ ತಾಲ್ಲೂಕುಗಳಿಗೆ ಸಂಚಾರಿ ಆರೋಗ್ಯ ಘಟಕಗಳ ಅವಶ್ಯಕತೆ ತುಂಬಾ ಇದೆ. ಜಿಲ್ಲಾ ಕೇಂದ್ರದಿಂದ ಸಾಕಷ್ಟು ದೂರದಲ್ಲಿ ಇರುವ ಪಾವಗಡ, ಶಿರಾ, ಮಧುಗಿರಿ ತಾಲ್ಲೂಕುಗಳ ಹಲವು ಗ್ರಾಮಗಳು ಆಂಧ್ರಪ್ರದೇಶದ ಜತೆಗೆ ಗಡಿ ಹಂಚಿಕೊಂಡಿದ್ದು, ಅಲ್ಲಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗುತ್ತಿಲ್ಲ. ಚಿಕಿತ್ಸೆ ಪಡೆಯಲು ನೂರಾರು ಕಿ.ಮೀ ಕ್ರಮಿಸಿ ಜಿಲ್ಲಾ ಆಸ್ಪತ್ರೆಗೆ ಬರಬೇಕಿದೆ. ಇದರಿಂದ ತುಂಬಾ ಜನ ಕಾಲ ಕಾಲಕ್ಕೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದನ್ನೇ ಮರೆತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದಂತೆ ಕಾಣುತ್ತಿಲ್ಲ.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿಯಿಂದ ಪ್ರಸ್ತುತ ಜಿಲ್ಲೆಯಾದ್ಯಂತ ಸಮಗ್ರ ಆರೋಗ್ಯ ತಪಾಸಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಹುಶಃ ಸಂಚಾರಿ ಆರೋಗ್ಯ ಘಟಕಗಳು ಚಾಲನೆಯಲ್ಲಿ ಇದ್ದಿದ್ದರೆ ಈ ಕಾರ್ಯಕ್ಕೆ ಸಾಕಷ್ಟು ನೆರವಾಗುತಿತ್ತು. ನಿಗದಿತ ಸಮಯಕ್ಕೆ ವೈದ್ಯರೇ ಹಳ್ಳಿಗಳಿಗೆ ಹೋಗಿ ಜನರ ಆರೋಗ್ಯ ಪರೀಕ್ಷೆ ಮಾಡುತ್ತಿದ್ದರು ಎಂದು ಜಿಲ್ಲಾ ಆಸ್ಪತ್ರೆ ವೈದ್ಯರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದ ವಿವಿಧ ಕಡೆಗಳಲ್ಲಿ ಸಂಚಾರಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿಯೂ ಅಗತ್ಯ ಇರುವ ತಾಲ್ಲೂಕುಗಳಲ್ಲಿ ಮತ್ತೆ ಸಂಚಾರಿ ಆರೋಗ್ಯ ಘಟಕ ಶುರು ಮಾಡಿದರೆ ತುಂಬಾ ಜನರಿಗೆ ಪ್ರಯೋಜನವಾಗಲಿದೆ. ಹಳ್ಳಿಗಾಡಿನಿಂದ ನಗರಕ್ಕೆ ಬರಲು ಆಗದೆ ಸಮಸ್ಯೆ ಅನುಭವಿಸುವವರಿಗೆ ಇದು ಸಹಾಯಕವಾಗಲಿದೆ. ಇದರಿಂದ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಲಿ ಎಂಬುವುದು ಜಿಲ್ಲೆಯ ಸಾರ್ವಜನಿಕರು ಒತ್ತಾಯವಾಗಿದೆ.

ನಾನು ಡಿಎಚ್‌ಒ ಆಗಿ ಅಧಿಕಾರ ವಹಿಸಿಕೊಂಡಾಗ ಜಿಲ್ಲೆಯಲ್ಲಿ ಯಾವುದೇ ಸಂಚಾರಿ ಆರೋಗ್ಯ ಘಟಕಗಳು ಇರಲಿಲ್ಲ. ಜಿಲ್ಲೆಯ ಯಾವ ತಾಲ್ಲೂಕಿನಲ್ಲಿ ಘಟಕಗಳ ಅವಶ್ಯಕತೆ ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಕೇಳಿದೆ. ಪಾವಗಡದ ವ್ಯಾಪ್ತಿಯಲ್ಲಿ ಆರಂಭಿಸಬಹುದು ಎಂದು ಇಲಾಖೆಗೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ.
ಡಾ.ಡಿ.ಎನ್‌.ಮಂಜುನಾಥ್‌ ಡಿಎಚ್‌ಒ ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT