ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರು, ವಿದ್ಯುತ್ ಸಂಪರ್ಕಕ್ಕೆ ಒತ್ತಾಯ: ಮೂರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

Published 20 ಜೂನ್ 2024, 6:01 IST
Last Updated 20 ಜೂನ್ 2024, 6:01 IST
ಅಕ್ಷರ ಗಾತ್ರ

ತುಮಕೂರು: ನೀರು, ವಿದ್ಯುತ್‌, ನಿವೇಶನ, ವಸತಿಗಾಗಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೊನಿ, ಹೊಳವನಹಳ್ಳಿ ಗ್ರಾಮಗಳ ಗುಡಿಸಲು ವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿಯೇ ತೊಟ್ಟಿಲು ಕಟ್ಟಿ ಮಕ್ಕಳನ್ನು ಮಲಗಿಸಿರುವ ದೃಶ್ಯ ಕಂಡು ಬಂತು.

‘ನೀರು, ವಿದ್ಯುತ್‌, ಮನೆಗಾಗಿ ಬೀದಿಗೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಆಡಳಿತಕ್ಕೆ ಕನಿಷ್ಠ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಕಾನೂನು ಪ್ರಕಾರ ನಮ್ಮ ಹಕ್ಕು ಕೇಳಲು ಹೋದರೆ ಯಾರೊಬ್ಬರೂ ಗಮನ ಹರಿಸುವುದಿಲ್ಲ. ಹಾಗಾಗಿ ಈ ಹೋರಾಟ ಅನಿವಾರ್ಯವಾಗಿದೆ’ ಎಂದು ಧರಣಿ ನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ಕಳೆದ ವರ್ಷ ಅನಿರ್ದಿಷ್ಟಾವಧಿ ಧರಣಿ ನಡೆಸಿದಾಗ ಕೆಲವೊಂದು ಬೇಡಿಕೆ ಈಡೇರಿಸಿದ್ದರು. ಆದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ. ಇದರಿಂದ ಮತ್ತೆ ಧರಣಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ನಮ್ಮ ಕಷ್ಟ ಕೇಳಲು ಬರುತ್ತಿಲ್ಲ’ ಎಂದು ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಹಂದ್ರಾಳ್‌ ನಾಗಭೂಷಣ್‌ ಹೇಳಿದರು.

ಒಂದು ತಿಂಗಳಲ್ಲಿ ಮೂರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅರ್ಜಿ ಸಲ್ಲಿಕೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿ ತುರ್ತು ಸಭೆ ಕರೆಯಬೇಕು. ಹೊಳವನಹಳ್ಳಿ, ಇರಕಸಂದ್ರ ಗ್ರಾಮಗಳ ಗುಡಿಸಲು ವಾಸಿಗಳಿಗೆ ಕುಡಿಯುವ ನೀರು, ವಿದ್ಯುತ್‌ ಪೂರೈಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT