ಸೋಮವಾರ, ಮೇ 17, 2021
21 °C
ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಚರ್ಚೆ

ತುಮಕೂರು: 20 ಸಾವಿರ ಕ್ವಿಂಟಲ್ ಧಾನ್ಯ ಹಾಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸರಬರಾಜು ಮಾಡಿದ್ದ 20 ಸಾವಿರ ಕ್ವಿಂಟಲ್ ಆಹಾರ ಧಾನ್ಯ ಹಾಳಾಗುವ ಸ್ಥಿತಿ ತಲುಪಿದೆ.

ಕಳೆದ ವರ್ಷ ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಬಳಕೆಗೆ ಒಂದು ವರ್ಷಕ್ಕೆ ಬೇಕಾಗುವಷ್ಟು ಆಹಾರ ಧಾನ್ಯ ಸರಬರಾಜು ಮಾಡಲಾಗಿತ್ತು. ಆದರೆ ಕೋವಿಡ್–19 ಲಾಕ್‌ಡೌನ್ ಸಮಯದಲ್ಲಿ ಬಳಕೆ ಮಾಡದೆ ದಾಸ್ತಾನು ಮಾಡಲಾಗಿತ್ತು. ಈಗ ಅಕ್ಕಿ, ಬೇಳೆ ಸಹಿತ ಆಹಾರ ಧಾನ್ಯಗಳಿಗೆ ಹುಳು ಬಿದ್ದು ಹಾಳಾಗಿವೆ.

ಮುನ್ನೆಚ್ಚರಿಕೆ ಕೈಗೊಂಡು, ಸಂರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ವಿಚಾರ ಶನಿವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿಷಯ ಪ್ರಸ್ತಾಪಿಸಿ, ‘ಒಂದು ವರ್ಷಕ್ಕೆ ಬೇಕಾಗುವಷ್ಟು ಆಹಾರ ಧಾನ್ಯ ಸರಬರಾಜು ಮಾಡಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ಜಿಲ್ಲಾ ಆಡಳಿತದ ವಶಕ್ಕೆ ನೀಡಿದ್ದರೆ ಬಳಸಿಕೊಂಡು ಹಾಳಾಗುವುದನ್ನು ತಪ್ಪಿಸಬಹುದಿತ್ತು. ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಕೊಳ್ಳಲು ಹುಳು ಬಿದ್ದ ಅಕ್ಕಿಯಲ್ಲೇ ಅನ್ನಮಾಡಿ ಮಕ್ಕಳಿಗೆ ಬಡಿಸಿದ್ದಾರೆ. ಮಕ್ಕಳನ್ನು ದನಗಳಂತೆ ನೋಡಿಕೊಂಡಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುಬ್ರಾನಾಯಕ್, ‘10 ಸಾವಿರ ಕ್ವಿಂಟಲ್ ಮಾತ್ರ ಹಾಳಾಗಿದೆ’ ಎಂದು ಸಮಜಾಯಿಸಿ ನೀಡಲು ಮುಂದಾದರು. ಇದರಿಂದ ಆಕ್ರೋಶಗೊಂಡ ಸಚಿವರು, ‘ಸಮಾಜ ಕಲ್ಯಾಣ ಇಲಾಖೆಯವರು ಆಹಾರ ಧಾನ್ಯ ವಾಪಸ್ ಮಾಡಿದ್ದಾರೆ. ನಿಮಗೇನು ಬಂದಿತ್ತು. ಮಕ್ಕಳ ಒಂದು ವರ್ಷದ ಅನ್ನವನ್ನು ಕಿತ್ತುಕೊಂಡಿದ್ದೀರಿ. 20 ಸಾವಿರ ಕ್ವಿಂಟಲ್ ಆಹಾರ ಧಾನ್ಯ ಹಾಳುಮಾಡುವುದು ಸುಲಭದ ಕೆಲಸವಲ್ಲ. ಇದಕ್ಕಿಂತ ಕಳಪೆಯಾಗಿ ಜಿಲ್ಲಾ ಆಡಳಿತ ನಡೆಸಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 3,300 ಕ್ವಿಂಟಲ್ ಬಂದಿತ್ತು. ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸೇರಿ
ಒಟ್ಟು 20 ಸಾವಿರ ಕ್ವಿಂಟಲ್ ಆಹಾರ ಧಾನ್ಯ ಸರಬರಾಜಾಗಿತ್ತು. ಜಿಲ್ಲೆಯ ಹುಳಿಯಾರು ಸೇರಿದಂತೆ ಕೆಲವು ಕಡೆಗಳಲ್ಲಿ ಅಕ್ಕಿಗೆ ಹುಳು ಬಿದ್ದಿರುವುದು ಪತ್ತೆಯಾಗಿದೆ. ಬಳಕೆಗೆ ಯೋಗ್ಯವಾಗಿದೆಯೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಸುಬ್ರಾನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಯಸ್ಕರ ಶಿಕ್ಷಣ ಇಲಾಖೆ ಮುಚ್ಚಬೇಕು: ವಯಸ್ಕರ ಶಿಕ್ಷಣ ಇಲಾಖೆ ಪ್ರಯೋಜನಕ್ಕೆ ಬಾರದಾಗಿದೆ. ಇದನ್ನು ಮುಚ್ಚುವುದೇ ಒಳಿತು ಎಂದು ಸಚಿವರು ಸಲಹೆ ಮಾಡಿದರು. ಕೋವಿಡ್ ಸಮಯದಲ್ಲಿ ಚಟುವಟಿಕೆ ನಡೆಸದಂತೆ ನಿರ್ದೇಶನ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು