ಮಂಗಳವಾರ, ಅಕ್ಟೋಬರ್ 26, 2021
23 °C
ಕುಣಿಗಲ್ ಪುರಸಭೆ ಕಚೇರಿ ಉದ್ಘಾಟನೆ

ಅಭಿವೃದ್ಧಿ ಮುಖ್ಯವೇ ಹೊರತು ರಾಜಕಾರಣವಲ್ಲ: ಸಚಿವ ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಸರ್ಕಾರದ ಜವಾಬ್ದಾರಿ ಸ್ಥಾನದ ಜತೆಗೆ ಜಿಲ್ಲೆಯ ಉಸ್ತುವಾರಿ ಸಚಿವನಾಗಿರುವುದರಿಂದ ಎಲ್ಲಾ ತಾಲ್ಲೂಕುಗಳ ಅಭಿವೃದ್ಧಿ ಮತ್ತು ನೀರಾವರಿ ವಿಚಾರದಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುವುದೆ ನನ್ನ ಕರ್ತವ್ಯ ಹೊರತು ರಾಜಕಾರಣ ಅಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪುರಸಭೆ ಕಚೇರಿ ಮತ್ತು ₹2.5 ಕೋಟಿ ವೆಚ್ಚದ ಮೇಲ್ಮಟ್ಟದ ನೀರು ಸಂಗ್ರಹಗಾರಗಳನ್ನು ಉದ್ಘಾಟಿಸಿ ಮಾತನಾಡಿದರು.

ಪುರಸಭೆಗಳು ಆರ್ಥಿಕ ಸಂಪನ್ಮೂಲಗಳನ್ನು ಕ್ರೂಢಿಕರಿಸುವಲ್ಲಿ ವಿಫಲವಾಗುತ್ತಿವೆ. ಅಭಿವೃದ್ಧಿಯ ಅನುದಾನಗಳನ್ನು ನಿರ್ವಹಣೆಗೆ ಬಳಸಿಕೊಳ್ಳುತ್ತಿರುವುದರಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಅಂತರ್ಜಲ ಅಭಿವೃದ್ಧಿ ಜತೆಗೆ ನೀರನ್ನು ಸಂರಕ್ಷಿಸಿ, ಎಲ್ಲರಿಗೂ ವಿತರಣೆ ಮಾಡಲು ಕ್ರಮತೆಗೆದುಕೊಳ್ಳಲು ಜಲ ಜೀವನ್ ಮಿಷನ್ ಯೋಜನೆ ಪ್ರಾರಂಭಿಸಿದೆ. ಸಾಕಷ್ಟು ಅನುದಾನ ಸಹ ನೀಡಿದೆ. 2023ರಲ್ಲಿ ಶೇ 100 ಗುರಿ ನಿಗದಿಪಡಿಸಲಾಗಿದ್ದು, ಅಧಿಕಾರಿಗಳು ಶ್ರಮವಹಿಬೇಕು ಎಂದರು.

ಕುಣಿಗಲ್ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯ ಅವ್ಯವಸ್ಥೆಗೆ ವ್ಯವಸ್ಥಿತವಾದ ಕಾರ್ಯತಂತ್ರ ರೂಪಿಸದಿರುವುದು ಕಾರಣ. ಶುದ್ಧೀಕರಣ ಘಟಕಗಳಿಗೆ ಜಮೀನು ಪಡೆಯದೆ, ಘಟಕಗಳನ್ನು ನಿರ್ಮಿಸದೆ ₹28 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಕಾಮಗಾರಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಪಟ್ಟಣದ ದೊಡ್ಡಕೆರೆಗೆ ಚರಂಡಿ ನೀರು ಸೇರಿ ಕುಲುಷಿತಗೊಳ್ಳುತ್ತಿರುವುದರಿಂದ ಪುನಶ್ಚೇತನಕ್ಕಾಗಿ ಮನವಿ ಮಾಡಿದರು. ಮಂಗಳ– ಮಾರ್ಕೋನಹಳ್ಳಿ ಜಲಾಶಯದ ಸಂಪರ್ಕ ಕಾಲುವೆಗೆ ₹ 7 ಕೋಟಿ ಅನುಮೋದನೆ ಸಿಕ್ಕಿದ್ದರೂ ಶೀಘ್ರ ಕಾಮಗಾರಿಗಾಗಿ ಮನವಿ ಮಾಡಿದರು. ಜನಪ್ರತಿನಿಧಿಗಳ ಗುರಿ ಜನಪರ ಸೇವೆಗಳತ್ತ ಇರಬೇಕೇ ಹೊರತು ಪಕ್ಷಾಧಾರಿತ ರಾಜಕಾರಣವನ್ನು ಕೈಬಿಡಬೇಕು ಎಂದರು.

ಶಾಸಕ ಡಾ.ರಂಗನಾಥ್, ತಾಲ್ಲೂಕಿನ ಅಭಿವೃದ್ಧಿಗಾಗಿ ಸಂಸದ ಡಿ.ಕೆ.ಸುರೇಶ್ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಬಿಜೆಪಿ ಸದಸ್ಯರ ಬಹಿಷ್ಕಾರ: ಪುರಸಭೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ.

ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಅವರನ್ನು ಕಡೆಗಣಿಸಲಾಗಿದೆ. ಕಾಮಗಾರಿ ವ್ಯಾಪ್ತಿಯ ಸದಸ್ಯರ ಹೆಸರನ್ನು ದಾಖಲಿಸುವಲ್ಲಿ ಮುಖ್ಯಾಧಿಕಾರಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಪುರಸಭೆ ಸದಸ್ಯರು ಕಾರ್ಯಕ್ರಮ ಬಹಿಷ್ಕರಿಸಿದರು.

ಕಪ್ಪು ಬಾವುಟ ಪ್ರದರ್ಶನ
ಪುರಸಭೆ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಕಚೇರಿ ಮುಂಭಾಗದ ಹಳೆ ರಾಷ್ಟ್ರೀಯ ಹೆದ್ದಾರಿಯನ್ನು ಅತಿಕ್ರಮಿಸಿ ವೇದಿಕೆ ನಿರ್ಮಿಸಲಾಗಿತ್ತು. ಪುರಸಭೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಕಾರ್ಯಕ್ರಮಕ್ಕೂ ಮುನ್ನ ಕೆಆರ್‌ಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಮತ್ತು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್ ಹಾಗೂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದರು. ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಸಂಪರ್ಕ ಕಾಲುವೆ ಯೋಜನೆ ಪ್ರಾರಂಭಿಸಿ
ತಾಲ್ಲೂಕಿನ ನೀರಾವರಿ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಡಾ.ರಂಗನಾಥ್ ಅವರು ಸಭೆಯಲ್ಲಿ ₹614 ಕೋಟಿ ವೆಚ್ಚದ ಸಂಪರ್ಕ ಕಾಲುವೆ ವಿಚಾರ ಮಂಡಿಸಿದರು. ಕುಣಿಗಲ್ ತಾಲ್ಲೂಕಿನ ಪಾಲಿನ ಹೇಮಾವತಿ ನೀರನ್ನು ನೇರವಾಗಿ ಪಡೆಯಲು ಸಮಿಶ್ರ ಸರ್ಕಾರ ಇದ್ದಾಗ ಜಲಸಂಪನ್ಮೂಲ ಸವಚಿವರಾಗಿದ್ದ ಡಿ.ಕೆ.ಶಿವಕುಮಾರ್ ₹614 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ನೀಡಿದ್ದರು. ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದ ಸಮಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯೋಜನೆಯನ್ನು ತಡೆಹಿಡಿದಿದೆ. ರಾಜಕಾರಣ ಮಾಡದೆ ಸಂಪರ್ಕ ಕಾಲುವೆ ಯೋಜನೆ ಪ್ರಾರಂಭಿಸಿ ಎಂದು ಸಚಿವ ಮಾಧುಸ್ವಾಮಿಯವರಲ್ಲಿ ವಿನಂತಿಸಿದರು.

ಸಚಿವ ಮಾಧುಸ್ವಾಮಿ, ಯಾವುದೇ ಕಾರಣಕ್ಕೂ ಸಂಪರ್ಕ ಕಾಲುವೆಯ ಯೋಜನೆ ಸರ್ಕಾರದ ಮುಂದೆ ಇಲ್ಲ. ನಿರೀಕ್ಷೆ ಮಾಡಬೇಡಿ. ಹೇಮಾವತಿ ನಾಲಾ ವಲಯದ ಆಧುನೀಕರಣ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನೀರು ಸರಾಗವಾಗಿ ಹರಿದು ಬರುತ್ತದೆ. ಆಗ ತಾಲ್ಲೂಕಿನ ಪಾಲಿನ ನೀರು ಹರಿಯುತ್ತದೆ ಎಂದರು.

ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಉಪವಿಭಾಗಾಧಿಕಾರಿ ಅಜೇಯ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ, ತಹಶೀಲ್ದಾರ್ ಮಹಬಲೇಶ್ವರ್, ಪುರಸಭೆ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಮುಖ್ಯಾಧಿಕಾರಿ ರವಿಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.