ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೇಘಟ್ಟ: ಪರಿಶಿಷ್ಟರಿಗೆ ಸಿಗದ ಪೂಜೆಯ ಅವಕಾಶ

ಠಾಣೆ ಮೆಟ್ಟಿಲೇರಿದ ಪ್ರಕರಣ: ಗ್ರಾಮದಲ್ಲಿ ಪೊಲೀಸ್‌ ಭಧ್ರತೆ
Last Updated 26 ಏಪ್ರಿಲ್ 2022, 17:34 IST
ಅಕ್ಷರ ಗಾತ್ರ

ತಿಪಟೂರು (ತುಮಕೂರು): ತಾಲ್ಲೂಕಿನ ನೊಣವಿನಕೆರೆ ಹೋಬಳಿ ಹುಣಸೇಘಟ್ಟ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರು ವಾಸಿಸುವ ಕಾಲೊನಿಗೆ ದೇವರ ಉತ್ಸವ ಮೂರ್ತಿ ಕರೆದುಕೊಂಡು ಹೋಗುವ ವಿಚಾರದಲ್ಲಿ ಪರಿಶಿಷ್ಟ ಜಾತಿಯವರು ಹಾಗೂ ಒಕ್ಕಲಿಗರು, ಲಿಂಗಾಯತರ ನಡುವೆ ಜಗಳ ನಡೆದಿದ್ದು, ವಿವಾದ ಈಗ ಪೊಲೀಸ್ ಠಾಣೆ ಮಟ್ಟಿಲೇರಿದೆ.

‘ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಲಾಗಿದೆ. ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ’ ಎಂದು ಆರೋಪಿಸಿ ತಹಶೀಲ್ದಾರ್ ಹಾಗೂ ನೊಣವಿನಕೆರೆ ಪೊಲೀಸರಿಗೆ ಪರಿಶಿಷ್ಟ ಜಾತಿಯ ಮುಖಂಡರು ದೂರು ಸಲ್ಲಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಎರಡು ಸಮುದಾಯದವರ ಜತೆಗೆ ಮಾತುಕತೆ ನಡೆಸಿ ವಿವಾದ ಬಗೆಹರಿಸಲು, ತಹಶೀಲ್ದಾರ್, ಪೊಲೀಸರು ಮುಂದಾಗಿದ್ದಾರೆ.

ಹಿನ್ನೆಲೆ: ಗ್ರಾಮದಲ್ಲಿ ಭಾನುವಾರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ತಮ್ಮ ಕಾಲೊನಿಗೆ ತೆಗೆದುಕೊಂಡು ಬರುವಂತೆಪರಿಶಿಷ್ಟ ಜಾತಿಯವರು ಮನವಿ ಮಾಡಿದ್ದಾರೆ. ಇದಕ್ಕೆ ಗ್ರಾಮದ ಮುಖಂಡರು ಒಪ್ಪದೆ ಇದ್ದಾಗ ಮಾತಿನ ಚಕಮಕಿ, ವಾದ ವಿವಾದ ನಡೆದಿದೆ.

‘ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ದೇವರನ್ನು ನಮ್ಮ ಕಾಲೊನಿಗೂ ಕರೆದುಕೊಂಡು ಬರಲು ಯಾವುದೇ ಸಮಸ್ಯೆ ಇಲ್ಲ. ನಮ್ಮ ಭಾಗಕ್ಕೂ ಬಂದರೆ ನಾವೂ ಪೂಜೆ ಸಲ್ಲಿಸುತ್ತೇವೆ. ಆದರೆ ಗ್ರಾಮದ ಮುಖಂಡರು ಇದಕ್ಕೆ ಅವಕಾಶ ನೀಡುತ್ತಿಲ್ಲ. ಉತ್ಸವದ ಸಂದರ್ಭದಲ್ಲಿ ದೇವರನ್ನು ನಮ್ಮ ಕಾಲೊನಿಗೆ ಕರೆದುಕೊಂಡು ಬರದೆ ಅವಮಾನ ಮಾಡಿದ್ದಾರೆ. ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ’ ಎಂದು ಪರಿಶಿಷ್ಟ ಜಾತಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಾತ್ರೆ ಹಾಗೂ ಉತ್ಸವದ ಸಮಯದಲ್ಲಿ ಹಿಂದಿನಿಂದಲೂ ಉತ್ಸವ ಮೂರ್ತಿಯನ್ನು ಕಾಲೊನಿಗೆ ಕರೆದುಕೊಂಡು ಹೋಗುವ ಪದ್ಧತಿ ಇರಲಿಲ್ಲ. ಹಿಂದಿನಂತೆ ನಡೆದುಕೊಂಡು ಬಂದಿದ್ದೇವೆ. ಈಗಲೂ ಅದೇ ರೀತಿ ಉತ್ಸವ ನೆರವೇರಿಸಿದ್ದೇವೆ. ಅನಗತ್ಯವಾಗಿ ಕೆಲವರು ಗ್ರಾಮದಲ್ಲಿ ಅಶಾಂತಿ ನೆಲೆಸುವಂತೆ ಮಾಡುತ್ತಿದ್ದಾರೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ಹಿಂದಿನಂತೆ ಜಾತ್ರೆ: ‘ಜಾತ್ರೆ ನಡೆಯುವ ಮುನ್ನ ಯಾವುದೇ ರೀತಿಯ ಮನವಿ, ದೂರು ಬಂದಿಲ್ಲ. ಹಿಂದಿನ ಸಂಪ್ರದಾಯದಂತೆ ಜಾತ್ರೆ ನಡೆಸಿದ್ದಾರೆ. ಇದೀಗ ಮನವಿ ಬಂದಿದ್ದು, ಶಾಂತಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಮಾತಿನ ಚಕಮಕಿ ಬಿಟ್ಟರೆ ಅಹಿತಕರ ಘಟನೆ ನಡೆದಿಲ್ಲ’ ಎಂದು ತಹಶೀಲ್ದಾರ್ ಆರ್.ಜೆ.ಚಂದ್ರಶೇಖರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT