ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾವಿಗೆ ಜಿಲ್ಲಾಸ್ಪತ್ರೆ ಅಧಿಕಾರಿಗಳೇ ಹೊಣೆ’

ರಾಜಣ್ಣ ಸಾವು; ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ ಆಕ್ರೋಶ
Last Updated 15 ಸೆಪ್ಟೆಂಬರ್ 2020, 16:17 IST
ಅಕ್ಷರ ಗಾತ್ರ

ತುಮಕೂರು: ‘ಎಷ್ಟೇ ವಿನಂತಿಸಿದರೂ ವೆಂಟಿಲೇಟರ್ ನೀಡದೆ ಗೌತಮ ವಿದ್ಯಾಸಂಸ್ಥೆ ಅಧ್ಯಕ್ಷ ರಾಜಣ್ಣ ಅವರನ್ನು ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಸಾಯಿಸಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ ಆರೋಪಿಸಿದ್ದಾರೆ.

ಸೆ. 13ರಂದು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ಸೂಕ್ತ ಸಮಯಕ್ಕೆ ವೆಂಟಿಲೇಟರ್ ನೀಡಿದ್ದರೆ ಬದುಕುತ್ತಿದ್ದರು. ಆದರೆ, ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರು ವೆಂಟಿಲೇಟರ್ ಇದ್ದರೂ ಬೆಡ್‌ಗಳು ಖಾಲಿ ಇಲ್ಲ ಎಂಬ ನೆಪವೊಡ್ಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ ಎಂದು ಅವರು ಹೇಳಿಕೆಯಲ್ಲಿ ದೂರಿದ್ದಾರೆ.

‘ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆಸ್ಪತ್ರೆಗೆ ದಾಖಲಿಸಿಕೊಂಡು ಜೀವ ಉಳಿಸುವಂತೆ ಮನವಿ ಮಾಡಿದೆ. ಆದರೂ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಇಲ್ಲ ಎಂದು ಚಿಕಿತ್ಸೆ ನೀಡಲಿಲ್ಲ. ಕೊನೆಗೆ ರಾಜಣ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿಯೂ ವೆಂಟಿಲೇಟರ್ ಸಿಗದೆ ತೀವ್ರ ಉಸಿರಾಟದ ತೊಂದರೆಯಿಂದಾಗಿ ಸಾವನ್ನಪ್ಪಿದರು. ಇದು ಒಂದು ರೀತಿಯಲ್ಲಿ ಅಧಿಕಾರಿಗಳು ಮತ್ತು ವೈದ್ಯರು ಮಾಡಿರುವ ಕೊಲೆಯಾಗಿದೆ’ ಎಂದು ಹುಚ್ಚಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಜಿಲ್ಲೆಗೆ ಒದಗಿಸಿ ಕೋವಿಡ್ ರೋಗಿಗಳ ರಕ್ಷಣೆಗಾಗಿ ವಿಶೇಷ ವೈದ್ಯಕೀಯ ವ್ಯವಸ್ಥೆ ಮಾಡಿದ್ದರೂ ಆಸ್ಪತ್ರೆಗಳು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳು ಕೇವಲ ಖರ್ಚುವೆಚ್ಚದ ಲೆಕ್ಕ, ರೋಗದಿಂದ ಮುಕ್ತರಾದವರ ಲೆಕ್ಕದ ವಿವರ ಬಿಡುಗಡೆಮಾಡಿ ಹಣ ದೋಚುವಲ್ಲಿ ನಿರತರಾಗಿದ್ದಾರೆ. ಕೆಲಸ ಮಾಡಿ, ಜನರ ಪ್ರಾಣ ಉಳಿಸುವ ಬದಲು ಕೇವಲ ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಖರ್ಚು ಮಾಡುತ್ತಾ, ಖಾಸಗಿ ಆಸ್ಪತ್ರೆಗಳಲ್ಲಿ ಹಣ ಸಂಪಾದಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದರೆ ರಾಜಣ್ಣ ಬದುಕುತ್ತಿದ್ದರು. ಆದರೆ, ವೆಂಟಿಲೇಟರ್ ನೀಡದೆ ಅವರ ಸಾವಿಗೆ ಅಧಿಕಾರಿಗಳು ಹೊಣೆಯಾಗಿದ್ದಾರೆ ಎಂದು ತಿಳಿಸಿದರು.

5 ಮಂದಿ ಸಾವು

ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿದ್ದ ಐದು ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ತುಮಕೂರು ಕ್ಯಾತ್ಸಂದ್ರದ 35 ವರ್ಷದ ಪುರುಷ, ತುಮಕೂರು ತಾಲ್ಲೂಕು ಬೆಳದಾರ ಗ್ರಾಮದ 56 ವರ್ಷದ ಮಹಿಳೆ, ಗೂಳೂರು ಗ್ರಾಮದ 77 ವರ್ಷದ ವೃದ್ಧೆ, ಶಿರಾ ಪಟ್ಟಣದ 55 ವರ್ಷದ ಮಹಿಳೆ, ತಿಪಟೂರು ನಗರದ 83 ವರ್ಷದ ವೃದ್ಧ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮಂಗಳವಾರ 233 ಮಂದಿಗೆ ಸೋಂಕು ತಗುಲಿದ್ದು, ಅವರಲ್ಲಿ 137 ಪುರುಷರು ಹಾಗೂ 96 ಮಂದಿ ಮಹಿಳೆಯರಿದ್ದಾರೆ. ಅವರಲ್ಲಿ 5 ವರ್ಷದೊಳಗಿನ ಇಬ್ಬರು ಮಕ್ಕಳು, 60 ವರ್ಷ ಮೇಲ್ಪಟ್ಟ 44 ಮಂದಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT