ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್‌ ನಿರ್ಧಾರದ ವಿರುದ್ಧ ವೈದ್ಯರ ಪ್ರತಿಭಟನೆ

Last Updated 9 ಡಿಸೆಂಬರ್ 2020, 5:27 IST
ಅಕ್ಷರ ಗಾತ್ರ

ತುಮಕೂರು: ಆಯುರ್ವೇದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎಂ.ಎಸ್ ಜನರಲ್ ಸರ್ಜರಿ ಪದವಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ವೈದ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರಕಾರದ ಆಯುಷ್ ಇಲಾಖೆಯ ಸೆಂಟ್ರಲ್ ಕೌನ್ಸಿಲ್ ಫಾರ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ತನ್ನ ವಿದ್ಯಾರ್ಥಿಗಳಿಗೆ ಆಧುನಿಕ ಔಷಧ ಶಸ್ತ್ರಚಿಕಿತ್ಸೆ ಮತ್ತು ಅಭ್ಯಾಸವನ್ನು ಸ್ವತಂತ್ರವಾಗಿ ಮಾಡಲು ಅವಕಾಶ ನೀಡಿ ಆದೇಶ ಹೊರಡಿಸಿರುವುದು ಅವೈಜ್ಞಾನಿಕವಾಗಿದೆ. ಈ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.

ಆಯುರ್ವೇದ ಮತ್ತು ಆಧುನಿಕ ವೈದ್ಯ ಪದ್ಧತಿಯನ್ನು ಸಮ್ಮಿಶ್ರಗೊಳಿಸಿ ಹೈಬ್ರಿಡ್ ವೈದ್ಯರನ್ನು ನಿರ್ಮಿಸಲು ಹೊರಟಿದೆ ಎಂದುಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ಶ್ರೀನಾಥ್ ಆರೋಪಿಸಿದರು.

ಆಯುರ್ವೇದ ವೈದ್ಯರು ಮಾಡಬಹುದಾದ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ ಪಟ್ಟಿಯನ್ನೂ ನೀಡಲಾಗಿದೆ. ಕೆಲವು ಆಯುರ್ವೇದ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಿದ್ದು ಇನ್ನು ಮುಂದೆ ಅಧಿಕೃತವಾಗಿ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ. ಇದು ಹಿಮ್ಮುಖ ಹೆಜ್ಜೆಯಾಗಿದ್ದು, ಆಧುನಿಕ ವೈದ್ಯ ಪ್ರಕಾರಕ್ಕೆ ಹಿನ್ನಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವೈದ್ಯಕೀಯೇತರರಿಗೆ ಸಮುದಾಯ ಆರೋಗ್ಯ ರಕ್ಷಕರ ಹೆಸರಿನಲ್ಲಿ ಸ್ವತಂತ್ರವಾಗಿ ಪ್ರಾಥಮಿಕ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿದರೆ ನಕಲಿ ವೈದ್ಯರ ಸೃಷ್ಟಿಗೆ ಕಾರಣವಾಗುತ್ತದೆ. ಆಯುರ್ವೇದ, ಯುನಾನಿ ಚಿಕಿತ್ಸೆಗಳು ತಮ್ಮದೇ ಆದ ಇತಿಹಾಸ, ಪರಂಪರೆ ಹೊಂದಿವೆ. ಪ್ರಾಚೀನ ವೈದ್ಯ ಪದ್ಧತಿಯ ಸಂರಕ್ಷಣೆ ಅಗತ್ಯವಿದೆ. ಅದೇ ಉದ್ದೇಶದಿಂದ ಆಯುಷ್ ಸಚಿವಾಲಯ ಸ್ಥಾಪಿಸಲಾಗಿದೆ. ಆದರೆ ಶಸ್ತ್ರ ಚಿಕಿತ್ಸೆಗೆ ಅವಕಾಶ ನೀಡಿದರೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದರು.

ಸಂಘದ ಮುಖಂಡರಾದ ಡಾ.ಜಿ.ಕೆ.ಸನತ್‍ ಕುಮಾರ್, ಡಾ.ಜಿ.ಎನ್.ಪ್ರಭಾಕರ್, ವೈದ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT