‘ಪ್ರಸಾದ ಚೆಲ್ಲಿದ್ರೆ ಏನೂ ಸಿಗದ ಕಾಲ ಬರುತ್ತೆ’: ಸ್ವಾಮೀಜಿ ಪಾಠ ನೆನಪಿಸಿದ

7

‘ಪ್ರಸಾದ ಚೆಲ್ಲಿದ್ರೆ ಏನೂ ಸಿಗದ ಕಾಲ ಬರುತ್ತೆ’: ಸ್ವಾಮೀಜಿ ಪಾಠ ನೆನಪಿಸಿದ

Published:
Updated:

ತುಮಕೂರು: ಸಿದ್ಧಗಂಗೆ ಮಠದ ಆವರಣದಲ್ಲಿ ಮಂಗಳವಾರ ಸಂಜೆ ನಡೆದ ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾಸಮಾಧಿಗೆ ಬಂದಿದ್ದ ಭಕ್ತರೊಬ್ಬರಿಗೆ ಮಠದ ವಿದ್ಯಾರ್ಥಿ ಅನ್ನದ ಮಹತ್ವ ತಿಳಿಸಿದ ಎನ್ನಲಾದ ವಿಡಿಯೊ ವೈರಲ್ ಆಗಿದೆ. ಬೆಂಗಳೂರಿನ ಭಕ್ತರಾದ ಅಂಬಿಕಾ ಎಚ್‌.ಬಿ. ಅವರು ತಮ್ಮ ಮೊಬೈಲ್‌ನಲ್ಲಿ ಶೂಟ್ ಮಾಡಿ, ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ವಿಡಿಯೊ ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಉಂಡ ಎಲೆಗಳನ್ನು ಕಸದ ಬುಟ್ಟಿಗೆ ಹಾಕಲು ಭಕ್ತರಿಗೆ ವಿದ್ಯಾರ್ಥಿಯೊಬ್ಬ ಮಾರ್ಗದರ್ಶನ ಮಾಡುತ್ತಿದ್ದ. ಬಿಸಾಡಿದ ಎಲೆಯಲ್ಲಿ ಆಹಾರ ಉಳಿದಿದ್ದರೆ ಗಮನಿಸುತ್ತಿದ್ದ. ಅವನ ಅಂಗಿಯ ಮೇಲೆ ಶಿವಕುಮಾರ ಸ್ವಾಮೀಜಿ ಚಿತ್ರವಿದೆ. ಭಕ್ತರೊಬ್ಬರು ಪೂರ್ತಿ ಊಟ ಮಾಡದೆ ಬಿಸಾಡಿದ ಎಲೆಯನ್ನು ಅವರಿಗೇ ಮರಳಿಸಿದ ಬಾಲಕ ‘ಅನ್ನ ಚೆಲ್ಲಬಾರದು’ ಎಂದು ಶಿವಕುಮಾರ ಸ್ವಾಮೀಜಿಯವರ ಮಾತನ್ನು ಪುನರುಚ್ಚರಿಸಿದ.

‘ಈಗ ಪ್ರಸಾದ ಚೆಲ್ಲಿದ್ರೆ ಇನ್ನೊಂದು ಕಾಲಕ್ಕೆ ಪ್ರಸಾದ ಸಿಗದಂತೆ ಆಗುತ್ತೆ’ ಎಂದು ಎಚ್ಚರಿಕೆಯ ಮಾತನ್ನೂ ಆಡಿದ. ‘ನನ್ನ ಬಿಡೋ ಮಾರಾಯ. ನನಗೆ ಇದನ್ನು ತಿನ್ನೋಕೆ ಶಕ್ತಿಯಿಲ್ಲ’ ಎಂದಾಗ, ‘ಪ್ರಸಾದ ತಿನ್ರೀ, ಶಕ್ತಿ ಬರುತ್ತೆ’ ಎಂದು ಪ್ರತ್ಯುತ್ತರ ಕೊಟ್ಟಿದ್ದಾನೆ.
ಶಿವಕುಮಾರ ಸ್ವಾಮೀಜಿ ಅವರ ‘ತುತ್ತು ಅನ್ನದ ಹಿಂದೆ ಸಾವಿರ ಕೈಗಳ ಶ್ರಮವಿದೆ’ ಎಂಬ ಮಾತಿನ ಆಶಯವನ್ನೂ ವಿಡಿಯೊ ಬಿಂಬಿಸಿದೆ.

ಭಕ್ತರಲ್ಲಿ ಅನುಮಾನಗಳಿದ್ದವು

ಲಕ್ಷಾಂತರ ಜನರು ಬಂದಾಗ ಊಟ ವ್ಯವಸ್ಥೆಯ ನಿರ್ವಹಣೆಗೆ ಮಠದ ಆವರಣದಲ್ಲಿ ಮಕ್ಕಳನ್ನು ಸಾಮಾನ್ಯವಾಗಿ ನಿಯೋಜಿಸುವುದಿಲ್ಲ. ಮಕ್ಕಳು ಈರುಳ್ಳಿ ಕತ್ತರಿಸುವಂಥ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು ಅಷ್ಟೇ. ಕ್ರಿಯಾಸಮಾಧಿ ಕಾರ್ಯಕ್ರಮದಲ್ಲಿ ಮಠದ ಹಳೆಯ ವಿದ್ಯಾರ್ಥಿಗಳೇ ಎಲ್ಲ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಹಾಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹಿರಿಯ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸ್ವಯಂಸೇವಕರು ಊಟದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು ಎಂದು ಕ್ರಿಯಾಸಮಾಧಿಗೆ ತೆರಳಿದ್ದವರು ಪ್ರತಿಕ್ರಿಯಿಸಿದ್ದರು.

ಮಠದ ಆವರಣದಲ್ಲಿ ಇಲ್ಲಿರುವಂತೆ ತಟ್ಟೆಗಳನ್ನು ಬೇಕಾಬಿಟ್ಟಿ ಎಸೆಯುವ ವ್ಯವಸ್ಥೆ ಇಲ್ಲವೇ ಇಲ್ಲ. ಊಟ ಮಾಡಿದ ತಟ್ಟೆಗಳನ್ನು ಹಾಕಲು ಟ್ರಾಕ್ಟರ್‌ಗಳನ್ನು ನಿಲ್ಲಿಸಲಾಗಿತ್ತು. ಊಟದ ವ್ಯವಸ್ಥೆಯನ್ನು ಹೊರಭಾಗದಲ್ಲಿ, ಅಂದರೆ ಬಯಲಿನಲ್ಲಿ ಮಾಡಲಾಗಿತ್ತು. ವಿಡಿಯೊದಲ್ಲಿ ಕಂಡುಬರುವಂತೆ ಕಟ್ಟಡಗಳ ಪಕ್ಕದಲ್ಲಿ ಅಲ್ಲ. ಎಲ್ಲಿಯೂ ಪ್ಲಾಸ್ಟಿಕ್ ಲೋಟಗಳನ್ನೂ ಬಳಸಿರಲಿಲ್ಲ ಎಂದು ನಿನ್ನೆ (ಮಂಗಳವಾರ) ಮಠಕ್ಕೆ ತೆರಳಿದ್ದವರು ತಿಳಿಸಿದ್ದರು.

‘ನಾನೇ ವಿಡಿಯೊ ಶೂಟ್ ಮಾಡಿದ್ದು’

ತಮ್ಮ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಗ್ಗೆ ಅಂಬಿಕಾ ಫೇಸ್‌ಬುಕ್‌ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಪ್ರತಾಪ್ ಸಿಂಹ ಅವರ ಕಾಮೆಂಟ್‌ಗೆ ಪ್ರತಿಕ್ರಿಯಿಸುತ್ತಾ, ಈ ಮೂಲಕ ವಿಡಿಯೊ ಶೂಟ್ ಮಾಡಿದ್ದು ತಾವೇ ಎಂಬುದನ್ನೂ ಒಪ್ಪಿಕೊಂಡಿದ್ದಾರೆ. ಶಿವಕುಮಾರ ಸ್ವಾಮೀಜಿ ತಮ್ಮ ಬದುಕಿನುದ್ದಕ್ಕೂ ವ್ರತದಂತೆ ಪಾಲಿಸಿಕೊಂಡು ಬಂದ ಅನ್ನ ದಾಸೋಹದ ಮಹತ್ವ ಮತ್ತು ಅನ್ನ ಚೆಲ್ಲಬಾರದು ಎನ್ನುವ ಸಂದೇಶವನ್ನು ಬಾಲಕ ಅಳವಡಿಸಿಕೊಂಡಿರುವ ರೀತಿಯನ್ನು ವಿಡಿಯೊ ಕಟ್ಟಿಕೊಡುತ್ತದೆ.

 

ಬರಹ ಇಷ್ಟವಾಯಿತೆ?

 • 184

  Happy
 • 0

  Amused
 • 2

  Sad
 • 3

  Frustrated
 • 8

  Angry

Comments:

0 comments

Write the first review for this !