ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇನಹಳ್ಳಿ: ಒಣಗಿದ ಬೆಳೆ, ಕೊಳೆತ ಮೇವು

ರೈತರಿಗೆ ಶಾಪವಾದ ಅಕಾಲಿಕ ಮಳೆ: ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ
Last Updated 10 ಅಕ್ಟೋಬರ್ 2021, 7:48 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಒಂದಡೆ ಹುಲುಸಾಗಿ ಬೆಳೆದಿದ್ದ ಬೆಳೆಗೆ ಕೊನೇ ಹಂತದಲ್ಲಿ ಮಳೆ ಕೊರತೆಯಿಂದ ಬೆಳೆ ಸಂಪೂರ್ಣವಾಗಿ ಹಾಳಾಗಿತ್ತು. ಬೆಳೆ ಅಂತೂ ಹೋಯಿತು ಮೇವಾದರೂ, ಕಟಾವು ಮಾಡಿ ಜಾನುವಾರುಗಳಿಗೆ ಶೇಖರಣೆ ಮಾಡಿಕೊಳ್ಳೋಣ ಎನ್ನುವಷ್ಟರಲ್ಲಿ ನಾಲ್ಕು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಹೊಲದಲ್ಲಿದ್ದ ಮೇವೂ ಕೊಳೆಯುತ್ತಿದೆ. ಈ ಬಾರಿ ಮಧುಗಿರಿ ತಾಲ್ಲೂಕಿನ ರೈತರ ಪಾಲಿಗೆ ಅಕಾಲಿಕ ಮಳೆ ಶಾಪವಾಗಿ ಪರಿಣಮಿಸಿದೆ.

ಪ್ರಾರಂಭದಲ್ಲಿ ಮಳೆಯಿಲ್ಲದೆ ಬೆಳೆ ನಷ್ಟವಾಗಿ, ಹೊಲದಲ್ಲಿದ್ದ ಮೇವು ನೆಲಕಚ್ಚಿತ್ತು. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೊಲದಲ್ಲಿದ್ದ ಮೇವು ಬಣ್ಣ ಕಳೆದುಕೊಂಡು ಕೊಳೆಯುವಂತಾಗಿದೆ.

ಕೋವಿಡ್‌ ಸಂಕಷ್ಟದಿಂದ ಆರ್ಥಿಕವಾಗಿ ಬಸವಳಿದಿದ್ದ ರೈತರ ಜೊತೆಗೆ, ನಗರ ಪ್ರದೇಶಗಳಿಂದ ಬಂದ ಯುವಕರು ಈ ಬಾರಿ ಸುರಿದ ಮುಂಗಾರಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಉತ್ತಮ ಫಸಲಿಗಾಗಿ ಕಂಡಿದ್ದ ಕನಸು ಕಡೆ ಹಂತದಲ್ಲಿ ಕಮರಿದೆ.
ಮಧುಗಿರಿ ತಾಲ್ಲೂಕು ಮಳೆಯಾಶ್ರಿತ ಪ್ರದೇಶ. ಹಾಗಾಗಿ ಇಲ್ಲಿನ ಬಹುತೇಕ ರೈತರು ಶೇಂಗಾ, ಮೆಕ್ಕೆಜೋಳ, ರಾಗಿ, ತೊಗರಿ, ಅಲಸಂದೆ, ಅವರೆ ಮತ್ತು ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. ಇಲ್ಲಿನ ರೈತರಿಗೆ ಒಮ್ಮೆ ಮಳೆ ಜಾಸ್ತಿಯಾಗಿ ಬೆಳೆ ನಷ್ಟವಾದರೆ, ಮತ್ತೊಮ್ಮೆ ಮಳೆಯಿಲ್ಲದೇ ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಹೀಗಿದ್ದರೂ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಿಲ್ಲ.

ಸಕಾಲಕ್ಕೆ ಉತ್ತಮ ಮಳೆಯಾದರೆ ಒಂದಷ್ಟು ಬೆಳೆ, ಜಾನುವಾರುಗಳಿಗೆ ಮೇವು ಮತ್ತು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಕಾಡುವುದಿಲ್ಲ. ಮೆಳೆ ಕೈಕೊಟ್ಟರೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುವುದು, ಖಾಸಗಿ ಕೊಳವೆ ಬಾವಿಗಳಿಂದ ಟ್ಯಾಂಕರ್‌ಗಳಲ್ಲಿ ಗ್ರಾಮಗಳಿಗೆ ನೀರು ಹೊಡೆಯುವುದು ಸಾಮಾನ್ಯವಾಗುತ್ತದೆ. ಜಾನುವಾರುಗಳ ಮೇವಿಗಾಗಿ ಕಳ್ಳತನಗಳು ಮತ್ತು ನೀರಿಗಾಗಿ ಗಲಾಟೆಗಳೂ ನಡೆಯುತ್ತವೆ. ಸರ್ಕಾರ ಮಧುಗಿರಿ ತಾಲ್ಲೂಕಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವುದು ಜನರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT