ಬುಧವಾರ, ಫೆಬ್ರವರಿ 24, 2021
24 °C
ಕೇಂದ್ರ ಬಜೆಟ್‌ ಮೇಲೆ ಬಹು ನಿರೀಕ್ಷೆ ನಿರೀಕ್ಷೆ ಇಟ್ಟುಕೊಂಡಿರುವ ಕಲ್ಪತರು ನಾಡು

ತುಮಕೂರು: ತಿನ್ನುವ ಕೊಬ್ಬರಿ ಸಂಶೋಧನಾ ಕೇಂದ್ರ ಬರಲಿದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೇಂದ್ರ ಸರ್ಕಾರವು ಜುಲೈ 5ರಂದು ಮಂಡಿಸಲಿರುವ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ‘ಕಲ್ಪತರು ನಾಡಿನ’ ಜನ ಬಹು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ರಾಜ್ಯದ 16ಕ್ಕೂ ಹೆಚ್ಚು ಜಿಲ್ಲೆಗಳಿಗೆ ‘ಹೆಬ್ಬಾಗಿಲು’ ಆಗಿರುವ ತುಮಕೂರು ಜಿಲ್ಲೆಗೆ ಹೆಚ್ಚಿನ ಒತ್ತು ಕೊಡಬೇಕು ಎಂಬ ನಿರೀಕ್ಷೆಗಳಿವೆ.

ಕೈಗಾರಿಕೆ, ಉದ್ಯೋಗ ಸೇರಿದಂತೆ ಬೆಂಗಳೂರು ಮಹಾನಗರದ ನಂತರ ಸ್ಥಾನ ತುಮಕೂರಿನದ್ದಾಗಿದ್ದು, ಬೆಂಗಳೂರು– ಮುಂಬೈ ಹೈಪರ್ ಲೂಪ್‌ ರೈಲ್ವೆ ಯೋಜನೆ, ತುಮಕೂರು – ನೆಲಮಂಗಲ 6 ಪಥದ ಹೆದ್ದಾರಿ ನಿರ್ಮಾಣ, ಕೈಗಾರಿಕೆಗಳಿಗೆ ಉತ್ತೇಜನಕ್ಕೆ, ಗಂಗಾ ಕಾವೇರಿ ಯೋಜನೆ ಸೇರಿದಂತೆ ಕೇಂದ್ರದ ಕೊಡುಗೆಗಳನ್ನು ಎದುರು ನೋಡುತ್ತಿದ್ದಾರೆ.

2018ರಲ್ಲಿ ವಿಧಾನ ಸಭೆ ಚುನಾವಣೆ ಪ್ರಚಾರಕ್ಕೆ ಬಂದಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತಿಪಟೂರಿನಲ್ಲಿ ನಡೆದ ತೆಂಗು ಬೆಳೆಗಾರರ ಸಮಾವೇಶದಲ್ಲಿ ಜಿಲ್ಲೆಯ ರೈತರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಆಲಿಸಿದ್ದರು. ತಿನ್ನುವ ಕೊಬ್ಬರಿ (ಬಾಲ್ ಕೊಪ್ರಾ) ಸಂಶೋಧನಾ ಕೇಂದ್ರ ಸ್ಥಾಪನೆ, ಕನಿಷ್ಠ ಬೆಂಬಲ ಬೆಲೆ ನಿಗದಿ ಭರವಸೆ ನೀಡಿದ್ದರು. ಆದರೆ, ಇದಾವುದೂ ಆಗಿಲ್ಲ. ಈ ಬಜೆಟ್‌ನಲ್ಲಿ ನಿರೀಕ್ಷೆಗಳು ಗರಿಗೆದರಿವೆ.

ಬಾಲ್‌ ಕೊಪ್ರಾ ಸಂಶೋಧಾನಾ ಕೇಂದ್ರ ಸ್ಥಾಪನೆ ಸೇರಿದಂತೆ ತೆಂಗು ಬೆಳೆ ಮೌಲ್ಯ ವರ್ಧನ ಚಟುವಟಿಕೆಗೆ ಪ್ರೋತ್ಸಾಹ, ತೆಂಗು ಬೆಳೆಗೆ ಗರಿಷ್ಠ ಬೆಲೆ ನಿಗದಿ ಬಗ್ಗೆಯೂ ಭರವಸೆ ನೀಡಿದ್ದರು. ಕಳೆದ ಬಾರಿ ಇದೇ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಈ ನಿರೀಕ್ಷೆ ಹುಸಿಯಾಗಿದೆ. ಈ ಬಾರಿಯ ಪೂರ್ಣ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಒತ್ತು ಕೊಡಬೇಕು ಎಂದು ತೆಂಗು ಬೆಳೆಗಾರರ ಒಕ್ಕೂಟದ ವಿಶ್ವನಾಥ್ ಅಣೆಕಟ್ಟೆ ಹೇಳುತ್ತಾರೆ.

ತೆಂಗಿನ ಎಣ್ಣೆ ಉತ್ಪಾದನೆಗೆ ಬಳಸು ಕೊಬ್ಬರಿಗಿಂತ (ಮಿಲ್ಲಿಂಗ್ ಕೊಪ್ರಾ ) ತುಮಕೂರು ಜಿಲ್ಲೆಯಲ್ಲಿ ಬೆಳೆಯುವ ತಿನ್ನುವ ಕೊಬ್ಬರಿ (ಬಾಲ್ ಕೊಪ್ರಾ) ಅತ್ಯುತ್ತಮ ದರ್ಜೆಯದ್ದಾಗಿ ಔಷಧಿ, ಧಾರ್ಮಿಕ, ಆಹಾರ ಕ್ಕೆ ಆದ್ಯತೆಯ ಮೇಲೆ ಬಳಕೆ ಮಾಡಲಾಗುತ್ತದೆ. ಮಿಲ್ಲಿಂಗ್ ಕೊಪ್ರಾಗಿಂತ ಬಾಲ್ ಕೊಪ್ರಾ ಬೆಳೆ ವೆಚ್ಚದಾಯಕ. ಕನಿಷ್ಠ 10 ತಿಂಗಳಾದರೂ ಕೂಡಿಟ್ಟು ಮಾರಾಟ ಮಾಡಬೇಕು, ಹೀಗೆ ಮಾಡಿದಾಗ ಕರಟು ಸೇರಿದಂತೆ ತ್ಯಾಜ್ಯ ಪ್ರಮಾಣ ಜಾಸ್ತಿ ಆಗುತ್ತದೆ( ವೇಸ್ಟೇಜ್). ರೈತರು ಇದನ್ನು ಅನುಭವಿಸಿ ಗುಣಮಟ್ಟದ ಕೊಬ್ಬರಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದೆ. ಸಂಶೋಧನಾ ಕೇಂದ್ರ ಪ್ರಾರಂಭಿಸಿದರೆ ಈ ಸಮಸ್ಯೆ ಗಳಿಗೆ ಪರಿಹಾರ ಸಿಗಲಿದೆ ಎಂಬ ಆಶಾಭಾವ ವ್ಯಕ್ತಪಡಿಸುತ್ತಾರೆ.

ರೈತ ಉತ್ಪಾದಕ ಕಂಪನಿಗಳನ್ನು ಉತ್ತೇಜನಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು. ಇದರಿಂದ ರೈತರಿಗೂ ಅನುಕೂಲ ಮತ್ತು ಅವರು ಬೆಳೆದ ಉತ್ಪನ್ನಕ್ಕೆ ನ್ಯಾಯಯುತ ಬೆಲೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳುತ್ತಾರೆ.

ವಸಂತನರಸಾಪುರ ಸೇರಿದಂತೆ ಜಿಲ್ಲೆಯಲ್ಲಿ ಕೈಗಾರಿಕೆ ಉತ್ತೇಜನ ಮಾಡಲಾಗುತ್ತಿದೆ. ಆದರೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಯೋಜನೆಗಳ ಅಗತ್ಯವಿದೆ. ಉತ್ಪಾದಿತ ವಸ್ತುಗಳ ಮಾರುಕಟ್ಟೆ ಕಲ್ಪಿಸುವುದು, ಉತ್ಪಾದನಾ ಚಟುವಟಿಕೆಗಳಿಗೆ ಪ್ರೋತ್ಸಾಹ, ಸಶಕ್ತಗೊಳಿಸುವ ಯೋಜನೆ ನಿರೀಕ್ಷೆಯಲ್ಲಿದ್ದೇವೆ ಎಂದು ವಸಂತನರಸಾಪುರ ಕೈಗಾರಿಕೆ ಮಾಲೀಕರ ಸಂಘದ ಅಧ್ಯಕ್ಷ ಶಿವಶಂಕರ್ ಕೇಂದ್ರ ಬಜೆಟ್‌ ಬಗೆಗಿನ ನಿರೀಕ್ಷೆಗಳನ್ನು ಬಿಚ್ಚಿಟ್ಟರು.

ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಅಷ್ಟೊಂದು ಗಮನ ಹರಿಸಿಲ್ಲ. ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉದ್ಯಮಿಗಳು ಒತ್ತಾಯಿಸುತ್ತಾರೆ.

ಬೆಂಗಳೂರು– ತುಮಕೂರು ಉಪನಗರ ರೈಲು ಪ್ರಾರಂಭಿಸಬೇಕು ಎಂಬ ಬೇಡಿಕೆ ಬಹು ಕಾಲದ್ದು. ಅದರ ನಿರೀಕ್ಷೆಯನ್ನೂ ಜನ ಇಟ್ಟುಕೊಂಡಿದ್ದಾರೆ. ಸಂಸದರಿಗೂ ಮನವಿ ಮಾಡಿದ್ದು, ಸಂಸದರೂ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ತುಮಕೂರು– ರಾಯದುರ್ಗ ರೈಲ್ವೆ ಯೋಜನೆ ಮತ್ತು ತುಮಕೂರು– ದಾವಣಗೆರೆ ರೈಲ್ವೆ ಮಾರ್ಗ ಯೋಜನೆ ಅನುಷ್ಠಾನ ಆಮೆ ವೇಗದಲ್ಲಿ ಸಾಗುತ್ತಿದೆ. ಪಾವಗಡದಿಂದ ರಾಯದುರ್ಗದವರೆಗೆ ಈಗಾಗಲೇ ರೈಲುಗಳ ಸಂಚಾರ ಮಾಡುತ್ತಿವೆ. ಆದರೆ, ಪಾವಗಡದಿಂದ ತುಮಕೂರುವೆಗೆ ಕಾಮಗಾರಿ ಆಮೆ ವೇಗದಲ್ಲಿ ಇದೆ. ಆದಷ್ಟು ಬೇಗ ಇದನ್ನು ಪೂರ್ಣಗೊಳಿಸಲು ಒತ್ತು ನೀಡಬೇಕು, ತುಮಕೂರು– ದಾವಣಗೆರೆ ರೈಲ್ವೆ ಮಾರ್ಗವು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ರಾಜಧಾನಿ ಸಂಪರ್ಕದ ಕೊಂಡಿ ಎಂದೇ ಕರೆಯಲಾಗುತ್ತಿದೆ. ಆದರೆ, ನಿಧಾನ ಗತಿಯ ಭೂ ಸ್ವಾಧೀನ, ಕಾಮಗಾರಿ ತ್ವರಿತಗೊಳಿಸಿಲ್ಲ. ಆದಷ್ಟು ಬೇಗ ಈ ಕಾಮಗಾರಿ ಪೂರ್ಣಗೊಳಿಸಬೇಕು. ಅದೇ ರೀತಿ ಚಿಕ್ಕಬಾಣವಾರ– ತುಮಕೂರು ರೈಲ್ವೆ ಮಾರ್ಗ ವಿದ್ಯುದ್ದೀಕರಣ( ಎಲೆಕ್ಟ್ರೀಫಿಕೇಶನ್) ಆಗಿದ್ದು, ಆದರೆ ರೈಲು ಸಂಚಾರ ಆರಂಭ ಆಗಿಲ್ಲ. ಹೆಚ್ಚಿನ ಅನುದಾನ ದೊರಕಿಸಿ ಅನುಕೂಲ ಮಾಡಿಕೊಡಬೇಕು ಎಂದು ತುಮಕೂರು–ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಕಾರ್ಯದರ್ಶಿ ಕರಣಂ ರಮೇಶ್ ಹೇಳುತ್ತಾರೆ.

ರೈಲ್ವೆಯ ಭವಿಷ್ಯದ ಸಾರಿಗೆ ವ್ಯವಸ್ಥೆಯಾದ ಗಂಟೆಗೆ 900 ಕಿ.ಮೀ ವೇಗದಲ್ಲಿ ಸಾಗುವ ಹೈಪರ್ ಲೂಪ್‌ ರೈಲನ್ನು ಬೆಂಗಳೂರ– ಮುಂಬೈ ನಡುವೆ ಸಂಚಾರಕ್ಕೆ ಒದಗಿಸುವ ಪ್ರಸ್ತಾವ ಕೇಂದ್ರ ಸರಕಾರದ ಮುಂದಿದೆ. ಈ ಬಗ್ಗೆಯೂ ಜಿಲ್ಲೆಯ ಜನರಲ್ಲಿ ನಿರೀಕ್ಷೆಗಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು