ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲೆಕಡಕಲು: 80 ಮನೆಗಳ ವಿದ್ಯುತ್ ಉಪಕರಣ ನಾಶ

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ: ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
Published 30 ಜುಲೈ 2023, 14:00 IST
Last Updated 30 ಜುಲೈ 2023, 14:00 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆಕಡಕಲು ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ವಿದ್ಯುತ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದಾಗಿ ಗ್ರಾಮದ 80ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಉಪಕರಣ ನಾಶವಾಗಿವೆ. ಎಮ್ಮೆಯೊಂದು ಮೃತಪಟ್ಟಿದೆ.

ಬೆಳಿಗ್ಗೆ 8.30ರ ವೇಳೆಗೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಮನೆಗಳ ವೈರಿಂಗ್, ಪಂಪ್ ಮೋಟರ್, ಟಿ.ವಿ, ಫ್ರಿಡ್ಜ್ ಸೇರಿದಂತೆ ವಿದ್ಯುತ್ ಮೀಟರ್‌ಗಳು ಸುಟ್ಟು ಭಸ್ಮವಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಗ್ರಾಮಸ್ಥರು ಮನೆಗಳಿಂದ ಹೊರಬಂದಿದ್ದಾರೆ.

ವಿದ್ಯುತ್ ಕಂಬದ ಬಳಿ ಕಟ್ಟಿಹಾಕಿದ್ದ ಚಿಕ್ಕತಾಯಮ್ಮ ಅವರಿಗೆ ಸೇರಿದ ಎಮ್ಮೆ ಮೃತಪಟ್ಟಿದೆ. ಗ್ರಾಮಸ್ಥರಿಗೆ ಕರೆಂಟ್ ಶಾಕ್ ತಗುಲಿ ಆತಂಕಗೊಂಡಿದ್ದರು. ಗ್ರಾಮ ಪಂಚಾಯಿತಿಯಿಂದ ಅಳವಡಿಸಲಾಗಿದ್ದ ₹2.50 ಲಕ್ಷ ಮೌಲ್ಯದ ಬೀದಿ ದೀಪ ನಾಶವಾಗಿವೆ.

ಉಜ್ಜನಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಮ್ಮ, ಸದಸ್ಯ ವೈ.ಕೆ.ಶ್ರೀನಿವಾಸ್, ಮುಖಂಡ ಉಜ್ಜನಿ ಚನ್ನೆಗೌಡ ಅವರು ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿಗಳ ಮೂಲಕ ಮನವಿ ಮಾಡಿದ್ದರೂ, ಸ್ಪಂದಿಸದ ಕಾರಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಮಧ್ಯಾಹ್ನ ಎಇಇ ವೀರಭದ್ರಾಚಾರ್ ಮತ್ತು ಎಸ್‌ಒ ಗೌಸ್ ಸ್ಥಳಕ್ಕೆ ಭೇಟಿ ನೀಡಿದಾಗ, ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ತೀವ್ರ ತರಾಟೆ ತೆಗೆದುಕೊಂಡರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಸಮಸ್ಯೆ ಬಗ್ಗೆ ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿ, ಪರಿಹಾರಕ್ಕೆ ಆಗ್ರಹಿಸಿ ಅಧಿಕಾರಿಗಳಿಗೆ ಘೆರಾವ್ ಹಾಕಿದರು.

ಪ್ರತಿ ಮನೆಗೂ ಸುಮಾರು ಎರಡು ಲಕ್ಷ ನಷ್ಟವಾಗಿದೆ. ಅಧಿಕಾರಿಗಳು ಸೂಕ್ತ ಪರಿಹಾರ ಮತ್ತು ಘಟನೆಗಳು ಮರುಕಳಿಸದಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದ್ದಾರೆ.

ವಿದ್ಯುತ್ ಅವಘಡದಲ್ಲಿ 80 ಮನೆಗಳ ವಿದ್ಯುತ್ ಪರಿಕರ ನಾಶವಾಗಿವೆ. ಗ್ರಾಮಸ್ಥರು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದರು. ಪಿಎಸ್ಐ ಸುನಿಲ್ ಕುಮಾರ್, ಬೆಸ್ಕಾಂ ಅಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿದ ನಂತರ ಬೆಸ್ಕಾಂ ಎಇಇ ವೀರಭದ್ರಾಚಾರ್ ಸೋಮವಾರ ಗ್ರಾಮದ ಪ್ರತಿ ಮನೆಗಳಿಗೆ ಭೇಟಿ ನೀಡಿ ಪರಿಶಿಲಿಸಿ ಪರಿಹಾರ ನೀಡಲಾಗುವುದು ಮತ್ತು ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಎಲೆಕಡಕಲು ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯದಿಂದ ಮನೆಯೊಂದರ ಮೀಟರ್ ಬೋರ್ಡ್ ಮತ್ತು ವೈರಿಂಗ್ ವ್ಯವಸ್ಥೆ ಸುಟ್ಟುಹೋಗಿದೆ
ಎಲೆಕಡಕಲು ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯದಿಂದ ಮನೆಯೊಂದರ ಮೀಟರ್ ಬೋರ್ಡ್ ಮತ್ತು ವೈರಿಂಗ್ ವ್ಯವಸ್ಥೆ ಸುಟ್ಟುಹೋಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT