ತುಮಕೂರು: ಜ್ಞಾನ, ಕೌಶಲ ಹೆಚ್ಚಿಸಿಕೊಂಡು ನಾಳಿನ ಸಮಾಜ, ಸಮಸ್ಯೆಗಳನ್ನು ಎದುರುಗೊಳ್ಳಬೇಕು ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಸಲಹೆ ಮಾಡಿದರು.
ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ಸೋಮವಾರ ಘಟಿಕೋತ್ಸವ ಭಾಷಣ ಮಾಡಿದರು.
ಮುಂಬರುವ ಸಮಸ್ಯೆ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಈಗಿನಿಂದಲೇ ಸಜ್ಜಾಗಬೇಕು. ತಂತ್ರಜ್ಞಾನವನ್ನು ಮತ್ತಷ್ಟು ಸಮರ್ಥವಾಗಿ ಬಳಸಿಕೊಂಡರೆ ಸವಾಲುಗಳನ್ನು ಎದುರಿಸಲು ನೆರವಾಗುತ್ತದೆ. ಹೊಸ ತಂತ್ರಜ್ಞಾನಗಳ ಅಳವಡಿಕೆ ಜತೆಗೆ ಆವಿಷ್ಕಾರ ಮುಂದುವರಿಸಬೇಕು. ಜ್ಞಾನದಿಂದ ಮಾತ್ರ ವಿಕಸಿತ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
‘ಅಸಾಧ್ಯ’ ಎಂಬುದನ್ನು ನಾವು ‘ಸಾಧ್ಯ’ವಾಗಿಸಿದ್ದೇವೆ. ಅಸಾಧ್ಯ ಎಂಬುದನ್ನು ವಿಜ್ಞಾನಿಗಳು ಈಗ ಮರು ವ್ಯಾಖ್ಯಾನ ಮಾಡುವ ಹಂತಕ್ಕೆ ಸಾಧನೆಯ ಮೆಟ್ಟಿಲು ಹತ್ತಿದ್ದೇವೆ. ಪ್ರಕೃತಿ ವಿಕೋಪದಂತಹ ಮಾಹಿತಿಯನ್ನು ಕರಾರುವಕ್ಕಾಗಿ ನೀಡುವಂತಹ ಮಟ್ಟಕ್ಕೆ ಬೆಳೆದು ನಿಂತಿದ್ದೇವೆ. ಜತೆಗೆ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಆಗಿರುವ ಪ್ರಗತಿಯು ನಮ್ಮ ಕೆಲಸದ ವಿಧಾನವನ್ನೇ ಬದಲಿಸಿದೆ. ಆರೋಗ್ಯ, ವಾಣಿಜ್ಯ, ಸಾರಿಗೆ, ಸಂವಹನ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಹೊಸ ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ತಿಳಿಸಿದರು.
ಭೂಮಿ, ಸಾಗರ, ವಾಯುಮಂಡಲದ ನಂತರ ಬಾಹ್ಯಾಕಾಶ ಕ್ಷೇತ್ರ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಬಾಹ್ಯಾಕಾಶ ಅನ್ವೇಷಣೆ, ಸಾಹಸ, ಬಾಹ್ಯಾಕಾಶ ಪ್ರವಾಸೋದ್ಯಮ, ವಸತಿ, ಇಂಧನ, ಭೂಮಿಗಾಗಿ ಬಾಹ್ಯಾಕಾಶ ಮೊದಲಾದ ಪರಿಕಲ್ಪನೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಪ್ರಗತಿ ಸಾಧಿಸುತ್ತಿದೆ. ಬಾಹ್ಯಾಕಾಶ ನಿಲ್ದಾಣ ನಿರ್ಮಾಣ, ಚಂದ್ರನ ಮೇಲೆ ಮಾನವರನ್ನು ಇಳಿಸಲು ಯೋಜನೆ ರೂಪಿಸಲಾಗುತ್ತಿದೆ. ಭಾರತವು ಈ ಕ್ಷೇತ್ರದಲ್ಲಿ ಸಮರ್ಥ ದೇಶವಾಗಿ ಹೊರ ಹೊಮ್ಮಿದ್ದು, ಹೊರ ರಾಷ್ಟ್ರಗಳಿಗೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮುನ್ನಡೆದಿದೆ ಎಂದು ಹೆಮ್ಮೆಪಟ್ಟರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ‘ಶಿಕ್ಷಣ ಪಡೆದು ಹೊರ ಬಂದವರಿಗೆ ನೇರವಾಗಿ ಉದ್ಯೋಗ ಸಿಗುವಂತಹ ಶಿಕ್ಷಣ ವ್ಯವಸ್ಥೆ ರೂಪಿಸಬೇಕಿದೆ. ಅದರ ಮೊದಲ ಹೆಜ್ಜೆಯಾಗಿ ರಾಜ್ಯದ ವಿವಿಧ 45 ಕಾಲೇಜುಗಳಲ್ಲಿ ಉದ್ಯೋಗ ಆಧಾರಿತ ಕೋರ್ಸ್ ಆರಂಭಿಸಿದ್ದು, 1,500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆ, ಸುಧಾರಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ’ ಎಂದು ತಿಳಿಸಿದರು.
ಪದವಿ ಪ್ರದಾನ ಮಾಡಿದ ರಾಜ್ಯಪಾಲ ಥಾವರಚಂದ್ ಗೆಹಲೋತ್, ‘ವಿಕಸಿತ ಭಾರತ ನಿರ್ಮಾಣಕ್ಕೆ ದೇಶದಲ್ಲೇ ನಿರ್ಮಾಣ ಎಂಬ ಪರಿಕಲ್ಪನೆ ಮತ್ತಷ್ಟು ವೇಗ ಪಡೆದುಕೊಳ್ಳಬೇಕು. ಶಿಕ್ಷಣ ಕ್ಷೇತ್ರ ವಿಕಸಿತವಾದರೆ ಇಡೀ ರಾಷ್ಟ್ರವೇ ವಿಕಾಸ ಹೊಂದಲಿದೆ’ ಎಂದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವರಾದ (ಆಡಳಿತ) ನಹಿದಾ ಜಮ್ ಜಮ್, ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.
ಇಬ್ಬರಿಗೆ ಡಾಕ್ಟರೇಟ್
ತುಮಕೂರು: ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್ ಕ್ರೀಡಾಪಟು ಎಸ್.ಸಿ.ನಾಗಾನಂದಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದ ಮತ್ತೊಬ್ಬರಾದ ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಗೈರು ಹಾಜರಾಗಿದ್ದರು.
ಅರ್ಧ ಗಂಟೆ ಬೇಗ ಆರಂಭ
ತುಮಕೂರು: ವಿ.ವಿ ಘಟಿಕೋತ್ಸವ ನಿಗದಿತ ಸಮಯಕ್ಕೆ ಸರಿಯಾಗಿ ನಡೆಯುವುದು ಸಂಪ್ರದಾಯ. ಆದರೆ ಈ ಬಾರಿ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಬೇಗ ಆರಂಭವಾಗಿದ್ದು ವಿಶೇಷ. ಬೆಳಗ್ಗೆ 11.30 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ 11 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಿ ಮಧ್ಯಾಹ್ನ 12.30ಕ್ಕೆ ಮುಕ್ತಾಯ ಕಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.