ಬುಧವಾರ, ಜನವರಿ 29, 2020
26 °C

ವೈಭವದ ಜಾರುಗಂಬ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೈ.ಎನ್.ಹೊಸಕೋಟೆ: ಹೋಬಳಿಯ ದೊಡ್ಡಹಳ್ಳಿ ಗ್ರಾಮದಲ್ಲಿ ಭಾನುವಾರ ವರದಾಂಜನೇಯಸ್ವಾಮಿ ಜಾತ್ರೆಯ ಅಂಗವಾಗಿ ಜಾರುಗಂಭ ಉತ್ಸವ ನಡೆಯಿತು.

ಪ್ರತಿವರ್ಷ ಪುಷ್ಯಮಾಸದಲ್ಲಿ 5 ದಿನಗಳ ಕಾಲ ಇಲ್ಲಿ ಜಾತ್ರೋತ್ಸವ ನಡೆಯುತ್ತದೆ. ಬುಧವಾರದ ಗಂಗಾಪೂಜೆಯೊಂದಿಗೆ ಆರಂಭವಾದ ಜಾತ್ರೆಯು ಭಾನುವಾರದ ಜಾರುಗಂಭದ ಉತ್ಸವದೊಂದಿಗೆ ಕೊನೆಗೊಂಡಿತು.

ಗ್ರಾಮದ ಹೆಣ್ಣುಮಕ್ಕಳು ಪೂರ್ಣಕುಂಭಗಳನ್ನು ಹೊತ್ತು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಭಕ್ತಾಧಿಗಳು ಸ್ವಾಮಿಯ ಬ್ರಹ್ಮರಥೋತ್ಸವವನ್ನು ಎಳೆದು ಭಕ್ತಿ ಸಮರ್ಪಿಸಿದರು.

5ನೇ ದಿನವಾದ ಭಾನುವಾರದಂದು ಜಾತ್ರೆಯ ವಿಶೇಷತೆಯಾದ ಜಾರುಗಂಭ ಉತ್ಸವ ನೆರವೇರಿತು. ದೇವಾಲಯದ ಆವರಣದಲ್ಲಿ ನೆಟ್ಟಿದ್ದ ಜಾರುಗಂಭಕ್ಕೆ ವೈಷ್ಣವ ಮತಸ್ಥರಿಂದ ಔಡಲಎಣ್ಣೆ ಸೇವೆ ಮಾಡಲಾಯಿತು. ನಂತರ ವಾಲ್ಮೀಕಿ ಜನಾಂಗದ ಯುವಜನರು ಮರ ಏರುವ ಮೂಲಕ ಉತ್ಸವ ನಡೆಸಿಕೊಟ್ಟರು. ಈ ವರ್ಷ ಗ್ರಾಮದ ಯುವಕ ಹನುಮಂತರಾಯಪ್ಪ ಜಾರುಗಂಭವನ್ನು ಏರಿ ಗುರಿಮುಟ್ಟಿ ಗೌರವ ಸನ್ಮಾನ ಪಡೆದರು. ಈ ಉತ್ಸವದಲ್ಲಿ ಯುವಕರು ಕಂಬವನ್ನು ಏರುವ ಮತ್ತು ಜಾರುವ ಸನ್ನಿವೇಶಗಳು ನೆರೆದಿದ್ದ ಜನರ ಮನೋರಂಜನೆ ನೀಡಿ ನಗೆಗಡಲಲ್ಲಿ ತೇಲಿಸಿತು.

ಆಂಧ್ರಪ್ರದೇಶ ಸೇರಿದಂತೆ ದೂರದ ದಾವಣಗೆರೆ, ಮೈಸೂರು, ಬಳ್ಳಾರಿ, ಬೆಂಗಳೂರು ಇತ್ಯಾದಿ ನಗರಗಳ ಹಾಗೂ ತಾಲ್ಲೂಕಿನ ವಿವಿಧ ಹಳ್ಳಿಗಳ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಅನ್ನಸಂತರ್ಪಣೆ, ಗುಗ್ಗರಿ ಹಂಚುವ ಮೂಲಕ ಹರಕೆ ತೀರಿಸಿದರು.

ವರದಾಂಜನೇಯಸ್ವಾಮಿ ಸೇವಾಸಮಿತಿ ಹಮ್ಮಿಕೊಳ್ಳುವ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಚಿಕ್ಕಹಳ್ಳಿ, ಅರ್.ಡಿ.ರೊಪ್ಪ, ಪೋತಗಾನಹಳ್ಳಿ, ಪಾಪಯ್ಯನರೊಪ್ಪ, ಕೆ.ರಾಂಪುರ, ಇಂದ್ರಬೆಟ್ಟ, ಹೊಸದುರ್ಗ, ಕಂಬದೂರು, ನೀಲಮ್ಮನಹಳ್ಳಿ, ಸೂಲನಾಯಕನಹಳ್ಳಿ, ಅಂಡೇಪಲ್ಲಿ ಗ್ರಾಮಗಳ ದೇವರು ಒಕ್ಕಲು ಅನ್ನದಾನ ಮಾಡುವುದು ಜಾತ್ರೆಯ ಸಂಪ್ರದಾಯವಾಗಿ ಬೆಳೆದುಬಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು