ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬಂದ್‌ಗೆ ರೈತ ಸಂಘಟನೆ ವ್ಯಾಪಕ ಬೆಂಬಲ

Last Updated 25 ಸೆಪ್ಟೆಂಬರ್ 2021, 3:52 IST
ಅಕ್ಷರ ಗಾತ್ರ

ತುಮಕೂರು: ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳ ರದ್ದು, ಕಾರ್ಮಿಕ ವಿರೋಧಿ ಕಾಯ್ದೆಗಳ ವಾಪಸ್‌ಗೆ ಆಗ್ರಹಿಸಿ ಕಳೆದ 10 ತಿಂಗಳಿನಿಂದ ದೆಹಲಿ ಗಡಿಯಲ್ಲಿ ನಡೆಯತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ, ಸೆ. 27ರಂದು ಕಿಸಾನ್ ಸಂಯುಕ್ತ ಹೋರಾಟ ಸಮಿತಿ ಕರೆ ನೀಡಿರುವ ಭಾರತ್ ಬಂದ್‌ಗೆ ರೈತ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಎಲ್ಲಾ ಸಂಘಟನೆಗಳು ಒಗ್ಗೂಡಿ ಹೋರಾಟಕ್ಕೆಇಳಿದಿವೆ.

ರೈತರನ್ನು ಬೆಂಬಲಿಸಿ ಜಿಲ್ಲೆಯಲ್ಲೂ ಬಂದ್ ಮಾಡಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ದೆಹಲಿ ಗಡಿಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಚಳವಳಿ ಹತ್ತಿಕ್ಕುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡುತ್ತಿದೆ. ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ, ಕಾರ್ಪೋರೇಟ್ ಪರವಾದ 4 ಸಂಹಿತೆಗಳನ್ನು ಮಾಡಿ, ಉದ್ಯೋಗ ಭದ್ರತೆ ಇಲ್ಲದಂತೆ ಮಾಡಲಾಗಿದೆ. ಇದನ್ನು ವಿರೋಧಿಸಿ ಕಾರ್ಮಿಕರ ಒಕ್ಕೂಟ ಸಹ ಬೀದಿಗೆ ಇಳಿಯಲಿದೆ. ಎಲ್ಲರೂ ಒಟ್ಟಾಗಿ ಸೆ. 27ರ ಭಾರತ್ ಬಂದ್‍ಗೆ ಕರೆ ನೀಡಿದ್ದು, ಕಾರ್ಮಿಕರು, ರೈತರು, ಪ್ರಗತಿಪರ ಚಿಂತಕರು, ಜನಸಾಮಾನ್ಯರು ಭಾಗವಹಿಸುವಂತೆ ಮನವಿ ಮಾಡಿದರು.

ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಪಟೇಲ್, ರೈತರು, ಕಾರ್ಮಿಕರು ತಾವು ಇರುವಲ್ಲೇ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿ ಬಂದ್‍ನಲ್ಲಿ ಭಾಗವಹಿಸಲಿದ್ದಾರೆ. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಬಂದ್ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರದ ಜನವಿರೋಧಿ ನೀತಿಯಿಂದ ತೊಂದರೆಗೆ ಒಳಗಾಗಿರುವ ಎಲ್ಲರೂ ಬಂದ್‍ನಲ್ಲಿ ಭಾಗವಹಿಸುವಂತೆ ಕೋರಿದರು.

ಚಿಂತಕ ಸಿ.ಯತಿರಾಜು, ‘ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ, ಭೂ ಸುಧಾರಣೆಯ ಹೆಸರಿನಲ್ಲಿ ರೈತರ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಇದರಿಂದ ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಕ ಕಾಯ್ದೆಯೇ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ರೈತರು, ಕಾರ್ಮಿಕರು, ಜನಸಾಮಾನ್ಯರ ವಿರುದ್ಧವಾದ ಕಾಯ್ದೆಗಳ ಮೂಲಕ ಕಾರ್ಪೋರೇಟ್ ಪರ ಸರ್ಕಾರಗಳು ಕೆಲಸ ಮಾಡುತ್ತಿವೆ’ ಎಂದು ಟೀಕಿಸಿದರು.

ಪ್ರಾಂತ ರೈತ ಸಂಘದ ಮುಖಂಡರಾದ ಬಿ.ಉಮೇಶ್, ಕರಿಬಸವಯ್ಯ, ಎಸ್.ಎನ್.ಸ್ವಾಮಿ, ಚಿರತೆ ಚಿಕ್ಕಣ್ಣ, ದಲಿತ ಸಂಘರ್ಷ ಸಮಿತಿಯ ಪಿ.ಎನ್.ರಾಮಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT