ಶನಿವಾರ, ಡಿಸೆಂಬರ್ 4, 2021
20 °C

PV Web Exclusive | ಆತ್ಮಹತ್ಯೆ ದಾರಿ ಹಿಡಿದ ರೈತ ಕುಟುಂಬದಲ್ಲಿ ಮಂದಹಾಸ!

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನೀರಿನಲ್ಲಿ ಮುಳುಗುತ್ತಿದ್ದವರಿಗೆ ಹುಲ್ಲು ಕಡ್ಡಿಯೂ ಆಸರೆಯಾಗಬಲ್ಲದು. ಸ್ಫೂರ್ತಿಯ ಮಾತುಗಳು ಜೀವನೋತ್ಸಾಹಕ್ಕೆ ದಾರಿ ತೋರಿಸಬಹುದು. ನೋವಿನ ಸಮಯದಲ್ಲಿ ಆದ ಒಂದು ಸಣ್ಣ ಬದಲಾವಣೆ ಇಡೀ ಜೀವನದ ದಿಕ್ಕನ್ನೇ ಬದಲಿಸಬಲ್ಲದು.

ನಾನು ಹೇಳಲು ಹೊರಟಿರುವುದು ಇಂತಹುದೇ ಒಂದು ಜೀವಪರವಾದ ವಿಚಾರದ ಬಗ್ಗೆ. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹೇರೂರು ಗ್ರಾಮದ ನಾಗರಾಜ್ ಬದುಕಿನ ತಿರುವು ಇತರರಿಗೆ ಮಾದರಿಯಾಗಬಲ್ಲದು. ಅವರ ಜೀವನದಲ್ಲಿ ಎದುರಾದ ಅನಿರೀಕ್ಷಿತ ಘಟನೆ ಸಾವಿನ ದಡಕ್ಕೆ ತಂದು ನಿಲ್ಲಿಸಿತ್ತು. ಕುಣಿಗಲ್ ಸಬ್‌ಇನ್ಸ್‌ಪೆಕ್ಟರ್ ವಿಕಾಸ್‌ಗೌಡ ಅವರ ಆಸರೆ, ನೆರವಿನ ಹಸ್ತ ಚಾಚಿದ್ದು, ಒಂದು ರೈತ ಕುಟುಂಬದ ಜೀವ ಉಳಿಸಿದೆ.

ನಾಗರಾಜ್ ಪುಟ್ಟದೊಂದು ಚಹಾ ಅಂಗಡಿ ಇಟ್ಟುಕೊಂಡು ಸಂಸಾರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಎಷ್ಟು ದಿನಗಳು ಇದೇ ಬದುಕು ನಡೆಸುವುದು. ಹೊಸ ಜೀವನ ರೂಪಿಸಿಕೊಳ್ಳುವ ತುಡಿತ ಹೆಚ್ಚುತ್ತಲೇ ಸಾಗಿತ್ತು. ಕೃಷಿ ಕುಟುಂಬದ ಸೆಳೆತ ಹಾಗೂ ಜಮೀನಿನ ಅಕ್ಕಪಕ್ಕದಲ್ಲೂ ತೆಂಗು, ಅಡಿಕೆ, ಬಾಳೆ ಗಿಡಗಳು ನಳನಳಿಸುವುದು ಕಂಡು ಮನಸ್ಸಿನಲ್ಲಿ ನಾನೂ ಅವರಂತೆ ‘ತೋಟವಂತನಾಗಬೇಕು’ ಎಂಬ ಆಸೆ ಚಿಗುರಿತು. ಈ ಆಸೆಗೆ ಮನೆಯವರೂ ನೆರವಿಗೆ ನಿಂತರು.

ಚಹಾ ಅಂಗಡಿ ನಡೆಸುತ್ತಲೇ 2 ಎಕರೆ 30 ಗುಂಟೆ ಜಮೀನಿನಲ್ಲಿ 800 ಅಡಿಕೆ, 100 ತೆಂಗು ನೆಟ್ಟರು. ಜತೆಗೆ ಒಂದಷ್ಟು ಬಾಳೆ ಹಾಗೂ ಇತರ ಹಣ್ಣಿನ ಗಿಡಗಳನ್ನು ಬೆಳೆಸಿದರು. ಮಕ್ಕಳಂತೆ ನೋಡಿಕೊಂಡರು, ನೀರುಣಿಸಿ, ಪೋಷಿಸಿದರು. ಬರಡು ನೆಲದಲ್ಲಿ ಹಸಿರು ಕಂಗೊಳಿಸಿತು. ಎಂತಹವರನ್ನೂ ಕಣ್ಣು ಕುಕ್ಕುವಂತೆ ಮಾಡಿತು. ಇನ್ನೂ ಒಂದೆರಡು ವರ್ಷಗಳು ಕಳೆದಿದ್ದರೆ ತೋಟಕ್ಕೆ ಒಂದು ರೀತಿಯ ಜೀವ ಕಳೆ ಬರುವುದರಲ್ಲಿತ್ತು. ತೆಂಗು, ಅಡಿಕೆ, ಬಾಳೆಗೊನೆ ಜೋಕಾಲಿಯಾಡಲಿದ್ದವು. ಕೈತುಂಬ ಕಾಂಚಣ ಎಣಿಸಬಹುದು. ತೋಟ ಮಾಡಿದ್ದರಿಂದ ನಮ್ಮ ಬದುಕಿಗೆ ಹೊಸ ಅರ್ಥ ಬರುತ್ತದೆ ಎಂದೆಲ್ಲ ಕನಸು ಕಾಣುತ್ತಿದ್ದರು. ಒಂದು ದಿನ ಇದ್ದಕಿದ್ದಂತೆ ಇಂತಹ ಆಶಾಗೋಪುರವೇ ಕಳಚಿ ಬಿದ್ದರೆ ಏನಾಗಬೇಡ?

ನಾಗರಾಜ್ ಜೀವನದಲ್ಲೂ ಇಂತಹುದೇ ಘಟನೆ ಸಂಭವಿಸಿತು. ಸಿನಿಮಾಗಳಲ್ಲಿ ನೋಡುತ್ತಿದ್ದ ದೃಶ್ಯ ಒಂದು ದಿನ ಅವರ ಕಣ್ಣುಮುಂದೆ ಹಾದುಹೋಯಿತು. ಬೆಳಿಗ್ಗೆ ತೋಟಕ್ಕೆ ಹೋದರೆ ಹಸಿರಿನಿಂದ ಕಂಗೊಳಿಸಬೇಕಿದ್ದ ಅಡಿಕೆ, ತೆಂಗು, ಬೆಳೆ, ಹಣ್ಣಿನ ನೂರಾರು ಗಿಡಗಳು ಶವಗಳಂತೆ ಸಾಲಾಗಿ ಮಲಗಿದ್ದವು. ದ್ವೇಷದ ಕಿಚ್ಚಿಗೆ ರಾತ್ರೋರಾತ್ರಿ ದುಷ್ಕರ್ಮಿಗಳು ಕಡಿದು ಹಾಕಿದ್ದರು. ಅವರಿಗೆ ಆಕಾಶವೇ ಕಳಚಿ ಬಿದ್ದ ಅನುಭವ. ಸುಂದರ ಬದುಕು ಕಟ್ಟಿಕೊಳ್ಳಲು, ನೆಮ್ಮದಿಯ ಜೀವನ ರೂಪಿಸಿಕೊಳ್ಳಲು, ಯಾರ ಬಳಿಯೂ ಕೈಚಾಚಬಾರದು, ಸ್ವತಂತ್ರವಾಗಿ ಬಾಳಬೇಕು ಎಂದವರಿಗೆ ಎಂದೂ ಊಹಿಸದ, ಕನಸು– ಮನಸ್ಸಿನಲ್ಲೂ ಯೋಚಿಸದ ಘಟನೆ ಧುತ್ತನೆ ಎದುರಾದಾಗ ಕುಸಿದುಹೋದರು.

‘ನಮ್ಮಷ್ಟಕ್ಕೆ ನಾವು ನೆಮ್ಮದಿಯಾಗಿ ಬದುಕುವುದಕ್ಕೂ ಈ ಸಮಾಜ ಬಿಡುವುದಿಲ್ಲ. ತೀರ ಕ್ರೂರ ಜನರು ನಮ್ಮೊಡನೆ ಇದ್ದಾರೆ. ಅಲ್ಪಸ್ವಲ್ಪ ಉಳಿತಾಯ ಮಾಡಿದ, ಸಾಲಸೋಲ ಮಾಡಿ ಹಾಕಿದ್ದ ಬಂಡವಾಳವೂ ಕರಗಿ ಹೋಗಿದೆ. ಇನ್ನೂ ಯಾವ ಭರವಸೆ ಮೇಲೆ ಈ ಭೂಮಿ ಮೇಲೆ ಜೀವ ಹೊತ್ತುಕೊಂಡು ಬದುಕುವುದು’ ಎಂದು ಯೋಚಿಸಿದರು. ಮರಗಳು ನೆಲಕ್ಕುರುಳಿದ ನಂತರ ಜರ್ಜರಿತರಾದರು. ನೆಮ್ಮದಿ ಕಾಣದಾಯಿತು. ಈ ಜನರು ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ. ಸಾವೇ, ಈಗ ಉಳಿದಿರುವ ದಾರಿ ಎಂದು ಯೋಚಿಸಿದರು. ಮಾನಸಿಕವಾಗಿ ಕುಗ್ಗಿಹೋದರು. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು.

ಕುಣಿಗಲ್ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ವಿಕಾಸ್‌ಗೌಡ ಅವರಿಗೆ ಈ ವಿಚಾರ ತಿಳಿಯಿತು. ಮೊದಲೇ ಕೃಷಿ ಕುಟುಂಬದಿಂದ ಬಂದಿದ್ದು, ಅವರಿಗೂ ಮನಸ್ಸು ಮರುಗಿತು. ನಾಗರಾಜ್ ಅವರನ್ನು ಕರೆಸಿ ಧೈರ್ಯ ತುಂಬಿದರು. ಭರವಸೆಯ ಮಾತುಗಳನ್ನಾಡಿದರು. ಮತ್ತೊಮ್ಮೆ ಸಸಿನೆಟ್ಟು ಬೆಳೆಸುವಂತೆ ಸಲಹೆ ಮಾಡಿದರು. ಮೊದಲೇ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದ್ದ ನಾಗರಾಜ್ ಹಣವಿಲ್ಲದೆ ಅಸಹಾಯಕತೆ ವ್ಯಕ್ತಪಡಿಸಿದರು. ಎಲ್ಲವನ್ನೂ ಕಳೆದುಕೊಂಡಿದ್ದೇನೆ ಮುಂದಿನ ದಾರಿ ಕಾಣುತ್ತಿಲ್ಲ ಎಂದು ಕಣ್ಣೀರಾದರು. ಆಗ ಏನಾದರೂ ಸಹಾಯ ಮಾಡಬೇಕಲ್ಲ ಎಂದು ವಿಕಾಸ್‌ಗೌಡ ಯೋಚಿಸಿದರು. ಹಿಂದೆ ಹುಣಸೂರು ತಾಲ್ಲೂಕಿನಲ್ಲಿ ಕೆಲಸ ನಿರ್ವಹಿಸಿದ್ದರು. ಆಗ ಪರಿಚಯವಾಗಿದ್ದ ಪ್ರಗತಿಪರ ರೈತ ಶ್ರೀರಾಮ ಅವರು ನೆನಪಾದರು. ತಕ್ಷಣ ಅವರನ್ನು ಸಂಪರ್ಕಿಸಿ ನೆರವಿಗೆ ಬೇಡಿಕೆ ಸಲ್ಲಿಸಿದರು.

ತಕ್ಷಣ ಸ್ಪಂದಿಸಿದ ರೈತ ಶ್ರೀರಾಮ ಅವರು ಅಡಿಕೆ, ತೆಂಗಿನ ಸಸಿಗಳನ್ನು ಉಚಿತವಾಗಿ ನೀಡಿದರು. ಹುಣಸೂರಿನಿಂದ ಸಸಿಗಳನ್ನು ತರಿಸಿಕೊಟ್ಟು, ಮತ್ತೆ ನೆಡುವಂತೆ ಪ್ರೋತ್ಸಾಹಿಸಿ ಬೆಂಬಲಕ್ಕೆ ನಿಂತರು. ಈಗ ತೋಟದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಕಮರಿ ಹೋಗುತ್ತಿದ್ದ ಬದುಕಿಗೆ ಜೀವನದ ದಾರಿ ತೋರಿಸಿದ್ದಾರೆ.

ಪೊಲೀಸರೆಂದರೆ ಮುಖತಿರುಗಿಸುವವರೇ ಹೆಚ್ಚು. ಒತ್ತಡದ ಬದುಕಿನಿಂದಾಗಿ ಅವರಲ್ಲಿ ಮಾನವೀಯತೆಯ ಸೆಲೆಯನ್ನು ಹುಡುಕುವುದು ಕಷ್ಟಕರ. ಇಂತಹ ಒಂದು ಸ್ಫೂರ್ತಿಯ ಮಾತು, ನೆರವು ಮತ್ತೊಂದು ಜೀವ ಉಳಿಸಿದೆ. ಅಧಿಕಾರಿ ವಿಕಾಸ್‌ಗೌಡ ಹಾಗೂ ರೈತ ನಾಗರಾಜ್ ಇತರರಿಗೆ ಮಾದರಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು