ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ₹50 ಲಕ್ಷ ತೆರಿಗೆ ಹಣ ಸ್ವಂತಕ್ಕೆ ಬಳಸಿಕೊಂಡ ಪಿಡಿಒ!

Published 3 ಜುಲೈ 2024, 15:29 IST
Last Updated 3 ಜುಲೈ 2024, 15:29 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಹೆಗ್ಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಆರ್‌.ರಾಘವೇಂದ್ರ ಸುಮಾರು ₹50 ಲಕ್ಷ ತೆರಿಗೆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹರ್ಷಕುಮಾರ್‌ ದೂರು ನೀಡಿದ್ದಾರೆ.

ರಾಘವೇಂದ್ರ ವಿರುದ್ಧ ಐಪಿಸಿ ಕಲಂ 420 (ವಂಚನೆ) ಸೇರಿದಂತೆ ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿದೆ. ಹಣ ದುರುಪಯೋಗ, ಕರ್ತವ್ಯ ಲೋಪ, ನಿರ್ಲಕ್ಷ್ಯದ ಆರೋಪದ ಮೇರೆಗೆ ಪಿಡಿಒ ರಾಘವೇಂದ್ರ, ಗ್ರೇಡ್‌–2 ಕಾರ್ಯದರ್ಶಿ ಎಚ್‌.ಸಿ.ಹನುಮಂತರಾಜು ಅವರನ್ನು ಅಮಾನತುಗೊಳಿಸಲಾಗಿದೆ.  

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪಂಚತಂತ್ರ–2.0 ತಂತ್ರಾಂಶದಲ್ಲಿ ಸಾರ್ವಜನಿಕರಿಂದ ಆಸ್ತಿ ತೆರಿಗೆ ಮತ್ತು ಇತರ ಶುಲ್ಕಗಳಿಂದ ಸಂಗ್ರಹವಾದ ಮೊತ್ತವನ್ನು ಹೆಗ್ಗೆರೆ ಗ್ರಾ.ಪಂ ವರ್ಗ–2ರ ಬ್ಯಾಂಕ್‌ ಖಾತೆಗೆ ಜಮಾ ಮಾಡಿಲ್ಲ. ಈ ಹಣವನ್ನು ಪಿಡಿಒ ಮತ್ತು ಸಿಬ್ಬಂದಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ’ ಎಂದು ತಾ.ಪಂ. ಇ.ಒ ಹರ್ಷಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ. 

‘2022–23ನೇ ಸಾಲಿನಿಂದ ಸೃಜನೆಯಾದ 1,030 ಆಸ್ತಿ ತೆರಿಗೆ ಮತ್ತು ಇತರ ಶುಲ್ಕದ ರಸೀದಿಗಳನ್ನು ಅನಧಿಕೃತವಾಗಿ ರದ್ದುಪಡಿಸಿದ್ದಾರೆ. ತೆರಿಗೆ ರೂಪದಲ್ಲಿ ಸಂಗ್ರಹವಾದ ಸುಮಾರು ₹50 ಲಕ್ಷ ಹಣವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು, ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಸರ್ಕಾರಕ್ಕೆ ಮೋಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪಿಡಿಒ, ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT