ಭಾನುವಾರ, ಏಪ್ರಿಲ್ 11, 2021
25 °C

ತುಮಕೂರು: ಕೃಷಿ ಇಲಾಖೆಗೆ ಪ್ರಥಮ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಆಯಾ ಜಿಲ್ಲೆಗಳಿಗೆ ಅನುಗುಣವಾಗಿ ಪಡಿತರ ಚೀಟಿದಾರರಿಗೆ ರಾಗಿ, ಜೋಳ, ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹೇಳಿದರು.

ಸಿದ್ಧಗಂಗಾ ಮಠದಲ್ಲಿ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕೃಷಿ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ವಿಜೇತರಾದವರಿಗೆ ಸೋಮವಾರ ರಾತ್ರಿ ಬಹುಮಾನ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿಗಳು, ಬಡತನ ರೇಖೆಗಿಂತ ಕೆಳಗಿರುವ ಪ್ರತಿಯೊಬ್ಬರಿಗೂ ಅಹಾರ ಒದಗಿಸಲಾಗುವುದು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 97ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಮಾನದಂಡಗಳನ್ನು ಅನುಸರಿಸಿಯೇ ಬಿಪಿಎಲ್, ಎಪಿಎಲ್ ಪಡಿತರ ಚೀಟಿ ವಿತರಣೆ ಮಾಡಲಾಗುತ್ತಿದೆ ಎಂದರು.

ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಪ್ರಸ್ತುತ ದೇಶ ಆಹಾರದಲ್ಲಿ ಸ್ವಾವಲಂಬಿಯಾಗಿದೆ. ಇದಕ್ಕೆ ವಿಜ್ಞಾನ ಪೂರಕ ವಾತಾವರಣ ಸೃಷ್ಟಿಸಿದೆ. ಇದರ ಜತೆಗೆ ಕೈಗಾರಿಕೆಯೂ ಉದ್ಯೋಗ ಸೃಷ್ಟಿಸುವಲ್ಲಿ ಸಹಕಾರಿಯಾಗಿದೆ. ರೈತರ ಬದುಕು ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಗುತ್ತಿದ್ದು, ಸಂಕಷ್ಟದಲ್ಲೂ ನಾಡಿಗೆ ಅನ್ನ ನೀಡುತ್ತಿದ್ದಾರೆ. ರೈತರು ಚೆನ್ನಾಗಿದ್ದರೆ, ದೇಶ ಚೆನ್ನಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮೇಯರ್‌ ಬಿ.ಜಿ.ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಮತಾ, ಮೈದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾ ಮಂಜುನಾಥ್, ವಸ್ತು ಪ್ರದರ್ಶನ ಸಮಿತಿ ಜಂಟಿ ಕಾರ್ಯದರ್ಶಿಗಳಾದ ಕೆ.ಬಿ.ರೇಣುಕಯ್ಯ, ಎಸ್.ಶಿವಕುಮಾರ್, ಪಾಲಿಕೆ ಆಯುಕ್ತೆ ರೇಣುಕಾ ಉಪಸ್ಥಿತರಿದ್ದರು.

ಬಹುಮಾನ ಪಡೆದವರ ವಿವರ: ಕೃಷಿ ಇಲಾಖೆ (ಪ್ರಥಮ), ಅರಣ್ಯ ಇಲಾಖೆ (ದ್ವಿತೀಯ), ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ (ತೃತೀಯ) ಬಹುಮಾನ ಹಾಗೂ ಪಾರಿತೋಷಕ ಪಡೆದುಕೊಂಡವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.