ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಒತ್ತಡ ತಗ್ಗಿಸಲು ಫಿಟ್ನೆಸ್‌ ತಂತ್ರ

ವಿ.ವಿ ಆವರಣದಲ್ಲಿ ಬೆಳಿಗ್ಗೆ ದೈಹಿಕ, ಮಾನಸಿಕ ವ್ಯಾಯಾಮ
Last Updated 7 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಸೋಂಕು ನಿಯಂತ್ರಣದ ಸಲುವಾಗಿ ಹಾಗೂ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗಾಗಿ ಫಿಟ್ನೆಸ್‌ ಕ್ಲಬ್‌ ಶ್ರಮಿಸುತ್ತಿದೆ. ನಗರದ ವಿಶ್ವವಿದ್ಯಾಲಯ ಆವರಣದಲ್ಲಿ ಬೆಳಿಗ್ಗೆ 6.15ರಿಂದ 7.30ರ ವರೆಗೆ ಫಿಟ್ನೆಸ್‌ ಕ್ಲಬ್‌ ಮೂಲಕ ವಿವಿಧ ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ.

ಕ್ಲಬ್‌ನಲ್ಲಿ ಶ್ವಾಸಕೋಶ, ಹೃದಯ, ಕಿಡ್ನಿ ಆರೋಗ್ಯ ವೃದ್ಧಿ ಬಗ್ಗೆ ವ್ಯಾಯಾಮ ಹೇಳಿಕೊಡಲಾಗುತ್ತದೆ. ಇದರಿಂದ ದೇಹದ ಪ್ರತಿ ನರನಾಡಿ, ಜಾಯಿಂಟ್‌ಗಳು, ದೇಹದೊಳಗಿನ ಅಂಗಾಂಗಳಿಗೆ ವ್ಯಾಯಾಮ ಸಿಗಲಿದೆ. ಹಿರಿಯರು, ಹುಡುಗರು ಕ್ಲಬ್‌ನಲ್ಲಿ ಇದ್ದಾರೆ. ಇದಕ್ಕಾಗಿ ಯಾವುದೇ ಶುಲ್ಕ ಪಡೆಯುತ್ತಿಲ್ಲ. ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ. ವಾರಕ್ಕೊಮ್ಮೆ ಎಲ್ಲ ಸದಸ್ಯರನ್ನು ಒಟ್ಟುಗೂಡಿಸಿ ಚಾರಣ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ಕ್ಲಬ್‌ ಮುಖ್ಯಸ್ಥ ಇಸ್ಮಾಯಿಲ್‌.

ಫಿಟ್ನೆಸ್‌ ಕ್ಲಬ್‌ 2002ರಲ್ಲಿ ಆರಂಭವಾಯಿತು. ಇದೀಗ ಸುಮಾರು 50 ಮಂದಿ ಇದರಲ್ಲಿದ್ದಾರೆ. ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯದಿಂದಿರುವ ಸಮಾಜ ನಿರ್ಮಾಣವೇ ಫಿಟ್ನೆಸ್‌ ಕ್ಲಬ್‌ನ ಉದ್ದೇಶ ಎನ್ನುತ್ತಾರೆ.

ಕೊರೊನಾ ಸಂದರ್ಭದಲ್ಲಿ ಹಿರಿಯರನ್ನು ಮನೆಯಲ್ಲೇ ಇರಿಸುವುದು ಸರಿಯಾದ ಕ್ರಮವಲ್ಲ. ಹಿರಿಯರೂ ಹೊರಗಡೆ ಸುತ್ತಾಡುವಂತಾಗಬೇಕು. ಇದಕ್ಕಾಗಿ ಅವರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಮುಖ್ಯ. ಇದಕ್ಕಾಗಿ ಹಿರಿಯರಿಗೆಫಿಟ್ನೆಸ್‌ ಕ್ಲಬ್‌ನ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಹಿರಿಯರು ಹೊರಗಡೆ ಬಂದರೂ ಎಚ್ಚರವಾಗಿರಬೇಕು. ಸಂಪರ್ಕಗಳನ್ನು ಕಡಿಮೆ ಮಾಡಬೇಕು. ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಾಸ್ಕ್‌, ಸ್ಯಾನಿಟೈಜರ್‌ ಬಳಸುವ ಕುರಿತೂ ಜಾಗೃತಿ ಮೂಡಿಸಲಾಗುತ್ತದೆ ಎಂದು ಇಸ್ಮಾಯಿಲ್‌ ತಿಳಿಸಿದರು.

ನಗರದ ಬಹುತೇಕರು ವಿಶ್ವವಿದ್ಯಾಲಯದ ಆವರಣದಲ್ಲಿ ಒಬ್ಬೊಬ್ಬರೇ ಬಂದು ವಾಕಿಂಗ್‌ ಮಾಡುತ್ತಿದ್ದೆವು. ಫಿಟ್ನೆಸ್‌ ಕ್ಲಬ್‌ ಎಲ್ಲರನ್ನು ಒಗ್ಗೂಡಿಸಿ ವ್ಯಾಯಾಮಗಳನ್ನು ಮಾಡುವುದರಿಂದ ಆತ್ಮೀಯತೆ ಬಂದಿದೆ ಎನ್ನುತ್ತಾರೆ ರಾಮನಾಥ್‌.

ಎಲ್ಲರೂ ಸಮಾನ

ಫಿಟ್‌ನೆಸ್‌ ಕ್ಲಬ್‌ನ ಹೆಚ್ಚಿನ ಸದಸ್ಯರು ವ್ಯಾಪಾರದಲ್ಲಿ ತೊಡಗಿದವರು. ವ್ಯವಹಾರದಲ್ಲಿ ಒಬ್ಬರೊಬ್ಬರಿಗೆ ಹೆಚ್ಚಿನ ಆತ್ಮೀಯತೆ ಇರುವುದಿಲ್ಲ. ಕ್ಲಬ್‌ನಲ್ಲಿ ಇದೆಲ್ಲವನ್ನು ಹೇಳಿಕೊಡಲಾಗುತ್ತದೆ. ಇಲ್ಲಿ ಎಲ್ಲರನ್ನು ಸಮನಾಗಿ ನೋಡಿಕೊಳ್ಳಲಾಗುತ್ತದೆ. ಕ್ಲಬ್‌ ಸದಸ್ಯರೇ ಆರೋಗ್ಯದ ಬಗ್ಗೆ ಇತರರಿಗೂ ಜಾಗೃತಿ ಮೂಡಿಸುತ್ತಾರೆ ಎಂದು ಕ್ಲಬ್‌ ಮುಖ್ಯಸ್ಥ ಇಸ್ಮಾಯಿಲ್‌ ಮಾಹಿತಿ ನೀಡಿದರು.

ವ್ಯಾಯಾಮದಿಂದ ಆರೋಗ್ಯ

ಕೊರೊನಾ ಸಂದರ್ಭದಲ್ಲಿ ಮಾನಸಿಕ ಸಮತೋಲನ ಅತಿ ಅಗತ್ಯ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯೂ ಅಗತ್ಯ. ಜತೆಗೆ ದೈಹಿಕ ಆರೋಗ್ಯವೂ ಇರಬೇಕು. ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯಲ್ಲಿ ನನ್ನನ್ನು ಹೊರ ಹೋಗದಂತೆ ತಡೆಯುತ್ತಿದ್ದರು. ಕೆಲವೊಮ್ಮೆ ಸರಿಯಾಗಿ ಎದ್ದುನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಇದೀಗ ದಿನವೂ ವ್ಯಾಯಾಮ ಮಾಡುವುದರಿಂದ ಆರೋಗ್ಯವಾಗಿದ್ದೇನೆ. ನನ್ನನ್ನು ಫಿಟ್ನೆಸ್‌ ಕ್ಲಬ್‌ ಈ ಮಟ್ಟಕ್ಕೆ ಬೆಳೆಸಿದೆ ಎನ್ನುತ್ತಾರೆ 61 ವರ್ಷದ ಆರ್‌.ಎನ್‌.ನಾಗೇಂದ್ರ.

ಶೇ 45ರಷ್ಟು ಶಕ್ತಿ ಹೆಚ್ಚಳ

ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಮಂಡಿಪೇಟೆಯಲ್ಲಿ ಹೋಲ್‌ಸೇಲ್ ವ್ಯಾಪಾರದಲ್ಲಿ ತೊಡಗಿದ್ದೇನೆ. ನನಗೆ ಡಯಾಬಿಟೀಸ್‌ ಇತ್ತು. ನಾನು ಕ್ಲಬ್‌ ಆರಂಭದಿಂದಲೂ ಇದರಲ್ಲಿ ಇದ್ದೇನೆ. ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲೂ ಹೆಚ್ಚು ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ವಿಶ್ವವಿದ್ಯಾಲಯ ಆವರಣದಲ್ಲಿ ಇದೀಗ ವ್ಯಾಯಾಮಗಳನ್ನು ಮಾಡುತ್ತಿರುವುದರಿಂದ ಬಹಳ ಅನುಕೂಲವಾಗಿದೆ. ಶೇ 45ರಷ್ಟು ಹೆಚ್ಚು ಶಕ್ತಿ ಹೆಚ್ಚಾಗಿದೆ. ಕ್ಲಬ್‌ನ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ ಎನ್ನುತ್ತಾರೆ ಕ್ಲಬ್‌ ಸದಸ್ಯ ರಾಮನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT