ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆಯಲ್ಲಿ ಜೆಡಿಎಸ್–ಬಿಜೆಪಿ ನಡುವೆ ‘ಸಮರ’

‘ಕೊಲೆಗಡುಕ ಶಾಸಕ ಮಸಾಲ ಜಯರಾಂ’ ಪದ ಬಳಕೆ; ಕಾರ್ಯಕರ್ತರ ನಡುವೆ ವಾಗ್ವಾದ
Last Updated 25 ಆಗಸ್ಟ್ 2020, 3:24 IST
ಅಕ್ಷರ ಗಾತ್ರ

ತುರುವೇಕೆರೆ: ಜೆಡಿಎಸ್ ಮುಖಂಡ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಆ.30 ಮತ್ತು 31ರಂದು ಹಮ್ಮಿಕೊಂಡಿದ್ದ ಪ್ರತಿಭಟನಾ ಪಾದಯಾತ್ರೆಯ ಭಿತ್ತಿಚಿತ್ರದಲ್ಲಿ ಆಕ್ಷೇಪಾರ್ಹ ಪದ ಬಳಸಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಪಟ್ಟಣದಲ್ಲಿ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿಯ ರೈತರು ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಜಮೀನಿನಲ್ಲಿದ್ದ ತೆಂಗಿನ ಸಸಿಗಳನ್ನು ಶಾಸಕ ಮಸಾಲ ಜಯರಾಂ ತಮ್ಮ ಪ್ರಭಾವ ಬಳಸಿ ಕೀಳಿಸಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದರು. ಶಾಸಕರ ದೌರ್ಜನ್ಯ ಖಂಡಿಸಿ ಆ.30ರಂದು ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಸಂಬಂಧ ಪಟ್ಟಣದ ಕೆಲವು ಕಡೆ ಪಾದಯಾತ್ರೆಯ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿತ್ತು.

ಆ ಭಿತ್ತಿಚಿತ್ರಗಳಲ್ಲಿ ‘ಕೊಲೆಗಡುಕ ಶಾಸಕ ಮಸಾಲ ಜಯರಾಂ’ ಎಂಬ ಪದ ಬಳಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಪಟ್ಟಣ
ಪೊಲೀಸ್ ಠಾಣೆಗೆ ಹಾಗೂ ಪಟ್ಟಣ ಪಂಚಾಯಿತಿಗೆ ದೂರು ನೀಡಿ ಪೊಲೀಸರ ಸಮ್ಮುಖದಲ್ಲಿ ಭಿತ್ತಿಚಿತ್ರಗಳನ್ನು ತೆರವುಗೊಳಿಸಿದ್ದರು.

ಭಿತ್ತಿಚಿತ್ರ ತೆರವುಗೊಳಿಸಿರುವ ವಿಚಾರ ತಿಳಿಯುತ್ತಿದ್ದಂತೆ ಎಂ.ಟಿ.ಕೃಷ್ಣಪ್ಪ ಅವರು ಜೆಡಿಸ್ ಕಾರ್ಯಕರ್ತರ ಜತೆ ತಾಲ್ಲೂಕು ಕಚೇರಿ ರಸ್ತೆಯಲ್ಲಿ ಧರಣಿ ಕುಳಿತರು.

ಆಗ ಅಲ್ಲಿಯೇ ಇದ್ದ ಬಿಜೆಪಿ ಕಾರ್ಯಕರ್ತರೂ ಸಹ ‘ಆಕ್ಷೇಪಾರ್ಹ ಪದ ಬಳಸಿರುವ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿ ಪ್ರತಿ ಧರಣಿ ಆರಂಭಿಸಿದರು. ಎರಡು ಪಕ್ಷಗಳ ಕಾರ್ಯಕರ್ತರು ಎದುರು ಬದುರು ಕುಳಿತು ಪರಸ್ಪರ ನಿಂದನೆ ಮಾಡಿ ಘೋಷಣೆ ಕೂಗಲಾರಂಭಿಸಿದರು.

ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಎರಡು ಗುಂಪಿನ ನಾಯಕರ ಮನವೊಲಿಸಲು ಭಿತ್ತಿಚಿತ್ರ ದಲ್ಲಿದ್ದ ಆಕ್ಷೇಪಾರ್ಹ ಪದವನ್ನು ಅಳಿಸಿದರು. ಈ ನಡುವೆ ಭಿತ್ತಿಚಿತ್ರವನ್ನು ಕೆಲವರು ಅರಿದರು. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಲಾಠಿ ಪ್ರಹಾರ ನಡೆಸಿದರೂ ಕೃಷ್ಣಪ್ಪ ಸ್ಥಳ ಬಿಟ್ಟು ಕದಲಲಿಲ್ಲ. ಭಿತ್ತಿಚಿತ್ರ ಅರಿದವರಿಗೆ ಶಿಕ್ಷೆ ಆಗಬೇಕು ಎಂದು ಮತ್ತೆ ಧರಣಿ ಮುಂದುವರಿಸಿದರು.

ಸ್ಥಳಕ್ಕೆ ಬಂದ ಕುಣಿಗಲ್ ಡಿವೈಎಸ್‌ಪಿ ಜಗದೀಶ್, ಎರಡು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ತಿಪಟೂರು ಡಿವೈಎಸ್ಪಿ ಸೇರಿದಂತೆ ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಧರಣಿ ನಡೆಸುತ್ತಿದ್ದರೂ ಶಾಸಕ ಮಸಾಲ ಜಯರಾಂ ದೂರದ ಅಂಗಡಿಯೊಂದರ ಮುಂದೆ ನಿಂತು ಪರಿಸ್ಥಿತಿ ಅವಲೋಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT