ಸೋಮವಾರ, ಜನವರಿ 27, 2020
25 °C
ಆಟೊಗಳಿಗೆ ಡಿಸ್‌ಪ್ಲೇ ಕಾರ್ಡ್‌ ವಿತರಣೆ

ಸುರಕ್ಷತಾ ದೃಷ್ಟಿಯಿಂದ ನಿಯಮ ಪಾಲಿಸಿ: ಡಾ.ವಂಶಿಕೃಷ್ಣ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಆಟೊ ಚಾಲಕರು ಮತ್ತು ಮಾಲೀಕರು ವಾಹನದ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳುವ ಮೂಲಕ ಸಾರ್ವಜನಿಕರ ಸುರಕ್ಷಿತ ಪ್ರಯಾಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮನವಿ ಮಾಡಿದರು.

ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಬುಧವಾರ ಪೊಲೀಸ್ ಇಲಾಖೆಯಿಂದ ತುಮಕೂರು ನಗರದಲ್ಲಿ ಸಂಚರಿಸುವ ನೋಂದಾಯಿತಿ ಆಟೊ ರಿಕ್ಷಾ ವಾಹನಗಳಿಗೆ ಮಾಲೀಕರ ಮತ್ತು ಚಾಲಕರ ವಿವರವುಳ್ಳ ಡಿಸ್‌ಪ್ಲೇ ಕಾರ್ಡ್‌ ವಿತರಿಸಿ ಅವರು ಮಾತನಾಡಿದರು.

ಆಟೊ ಚಾಲಕರು ಮತ್ತು ಮಾಲೀಕರು ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಭಾರತೀಯ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಹಾಗೂ ಸುಪ್ರಿಂಕೋರ್ಟ್‌ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರು ಹಾಗೂ ಪೊಲೀಸರೊಂದಿಗೆ ಸಂಯಮವಾಗಿ ವರ್ತಿಸಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಆಟೊ ಚಾಲಕರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್‌ ಮಾತನಾಡಿ, ‘ಆಟೊ ರಿಕ್ಷಾ ಚಾಲಕರ ಕರ್ತವ್ಯದ ಬಗ್ಗೆ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ತಿಳುವಳಿಕೆ ನೀಡಿದರು’.

ಈ ಸಂದರ್ಭದಲ್ಲಿ ಡಿಸ್‌ಪ್ಲೇ ಕಾರ್ಡ್‌ ನೀಡಲು ಸಹಕರಿಸಿದ ಮತ್ತು ಸಂಚಾರ ಪೊಲೀಸ್ ಠಾಣೆಗೆ 25 ಬ್ಯಾರಿಕೇಡ್‌ಗಳನ್ನು ನೀಡಿದ ಪೂರ್ವಿಕಾ ಮೊಬೈಲ್‌ ಸಂಸ್ಥೆಗೆ ಪೊಲೀಸ್ ಇಲಾಖೆಯಿಂದ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ 1013 ಆಟೊ ರಿಕ್ಷಾಗಳಿಗೆ ಡಿಸ್‌ಪ್ಲೇ ಕಾರ್ಡ್‌ಗಳನ್ನು ವಿತರಿಸಲಾಯಿತು. ಜತೆಗೆ ಫೆ.15ರೊಳಗೆ ನಗರದಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರ ಆಟೊ ರಿಕ್ಷಾಗಳಿಗೆ ಕಡ್ಡಾಯವಾಗಿ ಡಿಸ್‌ಪ್ಲೇ ಕಾರ್ಡ್‌ ಮಾಡಿಸಲು ಸೂಚಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು