ಮಂಗಳವಾರ, ಜನವರಿ 21, 2020
20 °C
ಹಲವೆಡೆ ಪಾದಚಾರಿ ಮಾರ್ಗ ಅತಿಕ್ರಮಣದಿಂದಾಗಿ ರಸ್ತೆಗಿಳಿಯುವ ವಿದ್ಯಾರ್ಥಿಗಳು, ವೃದ್ಧರು

ತುಮಕೂರಿನಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಪ್ರಯಾಣಿಕರಿಗೆ ಕಿರಿಕಿರಿ

ಅನಿಲ್ ಕುಮಾರ್ ಜಿ. Updated:

ಅಕ್ಷರ ಗಾತ್ರ : | |

prajavani

ತುಮಕೂರು: ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಹಲವೆಡೆ ನಿರ್ಮಿಸಿರುವ ಪಾದಚಾರಿ ಮಾರ್ಗಗಳು ಇದೀಗ ಅಂಗಡಿ ಮಾಲೀಕರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ, ವಾಹನ ನಿಲುಗಡೆ ಮಾಡುವವರಿಗೆ ವರದಾನವಾಗಿ ಮಾರ್ಪಟ್ಟಿವೆ.

ನಗರದ ಎಂ.ಜಿ ರಸ್ತೆ, ಮಂಡಿಪೇಟೆ ರಸ್ತೆ, ಚಿಕ್ಕಪೇಟೆ ರಸ್ತೆ, ಬಿ.ಎಚ್.ರಸ್ತೆ, ಎಸ್‌.ಎಸ್‌.ಪುರಂ, ಶೆಟ್ಟಿಹಳ್ಳಿ, ಉಪ್ಪಾರಹಳ್ಳಿ, ಕುಣಿಗಲ್ ರಸ್ತೆ ಹೀಗೆ ಹಲವು ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಂಗಡಿ ಮುಂಗಟ್ಟುಗಳ ಮಾಲೀಕರು, ವ್ಯಾಪಾರಸ್ಥರು ಅತಿಕ್ರಮಣ ಮಾಡಿ, ಅದರ ಮೇಲೆಯೇ ವಸ್ತುಗಳನ್ನು ಮಾರಾಟಕ್ಕೆ ಇರಿಸಿದ್ದಾರೆ. ಇದರಿಂದ ನಾಗರಿಕರು ನಾನಾ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. 

ತುಮಕೂರು ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದಾಗಿದ್ದು, ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿದಿನ ಸಾವಿರಾರು ವಾಹನಗಳು, ಸಾರ್ವಜನಿಕರು ರಸ್ತೆಗೆ ಇಳಿಯುತ್ತಿದ್ದಾರೆ. ಆದರೆ, ಪಾದಚಾರಿ ಮಾರ್ಗ ಅತಿಕ್ರಮಣ, ಮಾರಾಟದಿಂದಾಗಿ ಪಾದಚಾರಿಗಳಿಗೆ ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅನೇಕರು ಅನಿವಾರ್ಯವಾಗಿ ರಸ್ತೆಗೆ ಇಳಿಯಬೇಕಾದ ಪರಿಸ್ಥಿತಿ ತಲೆದೋರಿದೆ.

ನಗರದ ಎಂ.ಜಿ.ರಸ್ತೆ, ಬಿ.ಎಚ್.ರಸ್ತೆ, ಮಂಡಿಪೇಟೆ, ಚಿಕ್ಕಪೇಟೆಯಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಿದೆ. ಈ ರಸ್ತೆಗಳು ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿರುವುದರಿಂದ ವ್ಯಾಪಾರಸ್ಥರು ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದಾರೆ. ಅನೇಕರು ಈ ರಸ್ತೆಯನ್ನು ಹಾದು ಶಾಲೆ, ಕಾಲೇಜು, ಕಚೇರಿಗಳಿಗೆ ಹೋಗಿ ಬರುತ್ತಿದ್ದಾರೆ. ಆದರೆ, ಪಾದಚಾರಿ ಮಾರ್ಗ ಅತಿಕ್ರಮಣದಿಂದಾಗಿ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ಧರು ಅನಿವಾರ್ಯವಾಗಿ ರಸ್ತೆಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನರಕ ಯಾತನೆ: ಒಂದೆಡೆ ಅಂಗಡಿ ಮಾಲೀಕರು, ಬೀದಿ ಬದಿ ವ್ಯಾಪಾರಸ್ಥರು, ನಾಗರಿಕರು ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದರೆ, ಮತ್ತೊಂದೆಡೆ ವಾಹನ ಸವಾರರು ತಮ್ಮ ವಾಹನಗಳನ್ನು ಪಾದಚಾರಿ ಮಾರ್ಗದ ಮೇಲೆಯೇ ನಿಲ್ಲಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ. ವರ್ಷದಿಂದ ವರ್ಷಕ್ಕೆ ಪಾದಚಾರಿ ಮಾರ್ಗ ಅತಿಕ್ರಮಣ ಹೆಚ್ಚುತ್ತಲೇ ಇದೆ. ಆದರೆ, ಪೊಲೀಸರು, ಪಾಲಿಕೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಜಾಣಮೌನ ವಹಿಸಿದ್ದಾರೆ.

ಪಾದಚಾರಿ ಮಾರ್ಗ ಅತಿಕ್ರಮಣ ನಡೆಯುತ್ತಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಪೊಲೀಸರು ತಮಗೂ ಪಾದಚಾರಿ ಮಾರ್ಗಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಮೌನವಹಿಸಿದ್ದಾರೆ. ಈ ಬಗ್ಗೆ ಶೀಘ್ರವೇ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಶೀಘ್ರವೇ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು ಎಂದು ಪಾದಚಾರಿಗಳಾದ ರಫೀಕ್, ಮಂಜುನಾಥ್ ಒತ್ತಾಯಿಸಿದ್ದಾರೆ. 

ನಿತ್ಯ ಟ್ರಾಫಿಕ್‌ ಜಾಮ್‌: ಎಂ.ಜಿ.ರಸ್ತೆಯಲ್ಲಿ ದಿನದಿಂದ ದಿನಕ್ಕೆ ವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ರಸ್ತೆಯಲ್ಲಿ ಸಂಚಾರವೂ ಹೆಚ್ಚಿದೆ. ಆದರೆ, ಪಾದಚಾರಿ ಮಾರ್ಗ ಮತ್ತು ರಸ್ತೆಯ ಆಕ್ರಮಣದಿಂದಾಗಿ ನಿತ್ಯವೂ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಇದರಿಂದ ವಾಹನ ಸವಾರರು, ವೃದ್ಧರು, ಅಂಗವಿಕಲರು, ಮಹಿಳೆಯರು, ಮಕ್ಕಳು ಓಡಾಡಲು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಪೋಷಕರಲ್ಲಿ ಆತಂಕ: ನಗರದಲ್ಲಿ ದಿನಾಲೂ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ತಮ್ಮ ಮಕ್ಕಳು ಶಾಲೆ–ಕಾಲೇಜುಗಳಿಗೆ ತೆರಳುವಾಗ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಿರುವುದರಿಂದ ಪೋಷಕರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಮಕ್ಕಳು ಸುರಕ್ಷಿತವಾಗಿ ತಿರುಗಿ ಮನೆಗೆ ಬರುವವರೆಗೂ ಜೀವ ಕೈಯಲ್ಲಿ ಹಿಡಿದು ಕಾಯುತ್ತಿರುತ್ತಾರೆ.

ಓಡಾಡಲು ಸರಕು ಅಡ್ಡಿ: ಕೆಲವೆಡೆ ವ್ಯಾಪಾರಸ್ಥರು ಪಾದಚಾರಿ ಮಾರ್ಗಗಳನ್ನು ರಾಜಾರೋಷವಾಗಿ ಅತಿಕ್ರಮಿಸಿದ್ದಾರೆ. ತಮ್ಮ ವ್ಯಾಪಾರದ ಸರಕುಗಳನ್ನು ಪಾದಚಾರಿ ಮಾರ್ಗದಲ್ಲಿಯೇ ಇಟ್ಟು ಅಡ್ಡಿಪಡಿಸುತ್ತಿದ್ದಾರೆ. ಸಾಮಾನ್ಯ ಜನರು ಇದನ್ನು ಪ್ರಶ್ನಿಸಿದರೆ ತಮ್ಮ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ. ಇದರಿಂದ ವ್ಯಾಪಾರಕ್ಕಾಗಿ ಬರುವವರು, ಒಂದು ಸ್ಥಳದಿಂದ ಇನ್ನೊಂದು ಸ್ಥಳ ತಲುಪಲು ತೊಂದರೆ ಅನುಭವಿಸುವಂತಾಗಿದೆ. ಅನೇಕರು ‍ಪಾದಚಾರಿ ಮಾರ್ಗದ ಅಡೆತಡೆ ದಾಟಲು ರಸ್ತೆಗೆ ಇಳಿಯುವುದು ಅನಿವಾರ್ಯವಾಗಿದೆ. 

ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಬೀದಿ ಬದಿಯ ವ್ಯಾಪಾರಿಗಳಿಗೆ ಪರ್ಯಾಯ ಕಲ್ಪಿಸುವುದೇ ಮಹಾನಗರ ಪಾಲಿಕೆಗೆ ತಲೆನೋವಾಗಿದೆ. ದಿನದಿಂದ ದಿನಕ್ಕೆ ಬೀದಿ ಬದಿ ವ್ಯಾಪಾರಸ್ಥರ ಸಂಖ್ಯೆ ಹೆಚ್ಚುತ್ತಿರುವುದರಿಂದ ಎಲ್ಲರಿಗೂ ಪರ್ಯಾಯ ಜಾಗ ಕಲ್ಪಿಸುವುದು ಕಷ್ಟವಾಗುತ್ತಿದೆ. ಈ ಹಿಂದೆ ಕೆಲವು ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುವ ಯತ್ನ ನಡೆಸಿದ್ದರೂ ಕೆಲವರು ಜಾಗದ ಕೊರತೆ, ವ್ಯಾಪಾರ ನಷ್ಟ ಹೀಗೆ ವಿವಿಧ ಕಾರಣಗಳನ್ನು ನೀಡಿ ಪುನಃ ಪಾದಚಾರಿ ಮಾರ್ಗದಲ್ಲಿಯೇ ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬುದು ನಾಗರಿಕರ ಒತ್ತಾಯ. 

ನಿರಂತರ ಕ್ರಮವಹಿಸಿ: ಮಹಾನಗರ ಪಾಲಿಕೆ ಅಧಿಕಾರಿಗಳು ಕೆಲವೊಮ್ಮೆ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಾರೆ. ಆ ಸಮಯದಲ್ಲಿ ಮಾತ್ರವೇ ಪಾದಚಾರಿ ಮಾರ್ಗದಲ್ಲಿ ಇಡುವ ವಸ್ತುಗಳನ್ನು ತೆರವುಗೊಳಿಸುವ ಅಂಗಡಿ ಮಾಲೀಕರು, ನಂತರ ಎಂದಿನಂತೆ ತಮ್ಮ ವರ್ತನೆ ಮುಂದುವರಿಸುತ್ತಾರೆ. ಹಾಗಾಗಿ ಅಧಿಕಾರಿಗಳು ಒತ್ತುವರಿ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನೆಪಕ್ಕೆ ಮಾತ್ರವೇ ಒತ್ತುವರಿ ತೆರವುಗೊಳಿಸುವ ಕಾರ್ಯ ಮಾಡದೇ ನಿರಂತರವಾಗಿ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ನಂಜಪ್ಪ ಒತ್ತಾಯಿಸಿದ್ದಾರೆ. 

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ

ಕೆಲವರು ಪಾದಚಾರಿ ಮಾರ್ಗದಲ್ಲಿ ಸ್ವಲ್ಪ ಪ್ರಮಾಣದ ಜಾಗ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ಕೆಲವರು ಕಿಂಚಿತ್ತೂ ಮಾರ್ಗವನ್ನು ಬಿಡದೆ ಅತಿಕ್ರಮಣ ಮಾಡಿಕೊಂಡು ವಸ್ತುಗಳನ್ನು ವ್ಯಾಪಾರಕ್ಕೆ ಇಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ. ಹಾಗಾಗಿ ಕಾನೂನುಬಾಹಿರವಾಗಿ ಅತಿಕ್ರಮಣ ಮಾಡುವ ತಪ್ಪಿತಸ್ಥ ಅಂಗಡಿ ಮುಂಗಟ್ಟುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯ

ವ್ಯಾಪಾರಸ್ಥರಿಗೆ ಜೀವನದ ಪ್ರಶ್ನೆ

ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಬೀದಿ ಬದಿ ವ್ಯಾಪಾರವೇ ಜೀವನಕ್ಕೆ ಆಧಾರವಾಗಿದೆ. ಅನೇಕರು ನಗರದ ಪ್ರಮುಖ ರಸ್ತೆಗಳಲ್ಲಿರುವ ಪಾದಚಾರಿ ಮಾರ್ಗಗಳಲ್ಲಿಯೇ ವ್ಯಾಪಾರ ನಡೆಸುತ್ತಿದ್ದಾರೆ. ಬರುವ ಅಲ್ಪ ಲಾಭದಿಂದ ತಮ್ಮ ಕುಟುಂಬ ನಿರ್ವಹಿಸುತ್ತಿದ್ದಾರೆ. ಇವರನ್ನು ತೆರವುಗೊಳಿಸುವುದರಿಂದ ಜೀವನಕ್ಕೂ ತೊಂದರೆಯಾಗಲಿದೆ ಎಂಬ ಮಾತುಗಳು ಕೆಲವರಿಂದ ಕೇಳಿ ಬರುತ್ತಿವೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸಣ್ಣಪುಟ್ಟ ವ್ಯಾಪಾರಸ್ಥರಿಗೂ ತೊಂದರೆಯಾಗದಂತೆ, ಪಾದಚಾರಿಗಳಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ.

ಹಲವೆಡೆ ಪಾದಚಾರಿ ಮಾರ್ಗದಲ್ಲಿ ಜನಸಾಮಾನ್ಯರು ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಮಾರ್ಗವನ್ನು ಅಂಗಡಿ ವಸ್ತುಗಳು, ವ್ಯಾಪಾರಸ್ಥರು ಆಕ್ರಮಿಸಿಕೊಂಡಿರುವುದರಿಂದ ಜನರು ರಸ್ತೆಯಲ್ಲಿ ಇಳಿದು ನಡೆದುಕೊಂಡು ಹೋಗುವಂತಾಗಿದೆ. ಹಾಗಾಗಿ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ಜಾಗ ಕಲ್ಪಿಸಬೇಕು ಎನ್ನುತ್ತಾರೆ ನಾಗರಿಕ ಶ್ರೀಷ ಭಟ್.

ಒಂದೆಡೆ ಪಾದಚಾರಿ ಮಾರ್ಗ ಅತಿಕ್ರಮಣ, ಮತ್ತೊಂದೆಡೆ ಸ್ಮಾರ್ಟ್‌ಸಿಟಿ ಕೆಲಸಗಳು ನಡೆಯುತ್ತಿರುವುದರಿಂದ ಜನಸಾಮಾನ್ಯರು ಓಡಾಡಲು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಪ್ರಮುಖ ರಸ್ತೆಗಳಲ್ಲೇ ಪಾದಚಾರಿ ಮಾರ್ಗ ಆಕ್ರಮಿಸಿಕೊಂಡಿರುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ ನಾಗರಿಕರಾದ ತಿರುಮಲಗೌಡ.

ಸಂದೀಪ್ ನಾಯಕ ಎಂಬುವರು ಪ್ರಮುಖ ರಸ್ತೆಗಳಲ್ಲಿ ಜನರು ರಸ್ತೆಗಳಲ್ಲೇ ಓಡಾಡುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಹಲವೆಡೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಸಮಸ್ಯೆ ಎದುರಾಗುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಿ ಪಾದಚಾರಿ ಮಾರ್ಗವನ್ನು ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು