ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಎನ್.ಹೊಸಕೋಟೆ: ವಿಜ್ಞಾನ ಕಾಲೇಜು ತೆರೆಯಲು ಒತ್ತಾಯ

ವೃತ್ತಿಪರ, ವಿಜ್ಞಾನ ಶಿಕ್ಷಣ ಪಡೆಯಲು ತಾಲ್ಲೂಕು ಕೇಂದ್ರಗಳಿಗೆ ತೆರಳುವ ಅನಿವಾರ್ಯತೆ
Last Updated 31 ಜುಲೈ 2021, 8:04 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ಗ್ರಾಮದಲ್ಲಿ ಸರ್ಕಾರಿ ಪಿಯು ವಿಜ್ಞಾನ ಮತ್ತು ವೃತ್ತಿಪರ ಕಾಲೇಜು ಸ್ಥಾಪಿಸುವಂತೆ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿರುವ ಏಕೈಕ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗವನ್ನು ಹೊರತುಪಡಿಸಿ ಬೇರೆ ಕೋರ್ಸ್‌ಗಳಿಲ್ಲ. ವಿಜ್ಞಾನ ಇನ್ನಿತರೆ ಶಿಕ್ಷಣ ಪಡೆಯಲು ದೂರದ ಊರುಗಳಿಗೆ ಹೋಗಬೇಕಾಗಿದ್ದು, ತುಂಬಾ ತೊಂದರೆಯಾಗುತ್ತಿದೆ. ಸರ್ಕಾರಿ ಕಾಲೇಜುಗಳನ್ನು ಅಗತ್ಯವಾಗಿ ತೆರೆಯಬೇಕು ಎಂದಿದ್ದಾರೆ ನಿವೃತ್ತ ಶಿಕ್ಷಕ ಸೋಮಣ್ಣ.

ಗ್ರಾಮದಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಇದೆ. ಶೇ 80ರಷ್ಟು ಜನ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಾಗಿದ್ದಾರೆ. ಆರ್ಥಿಕ ಸಬಲರು ದೂರದ ಖಾಸಗಿ ಕಾಲೇಜುಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಮಧ್ಯಮವರ್ಗದ ಮಕ್ಕಳು ಕಾಲೇಜು ವ್ಯಾಸಂಗಕ್ಕೆ ಪರಿತಪಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಸ್ಥಳೀಯ ಕಾಲೇಜಿನ ಶಿಕ್ಷಣಕ್ಕೆ ಸೀಮಿತವಾಗುತ್ತಿದ್ದಾರೆ. ಆಸೆಗಳಿದ್ದರೂ ಅವಕಾಶ ವಂಚಿತರಾಗುತ್ತಿದ್ದಾರೆ ಎನ್ನುತ್ತಾರೆ ಪೋಷಕರಾದ ಜಿ.ಎಸ್.ನಾಗಗರಾಜು, ಸಿದ್ದೇಶ್ವರ, ಪಿ.ಎಂ.ಪ್ರಕಾಶ.

ಗ್ರಾಮದಲ್ಲಿ 1 ಸರ್ಕಾರಿ ಮತ್ತು 4 ಖಾಸಗಿ ಪ್ರೌಢಶಾಲೆಗಳಿವೆ. ಪ್ರತಿವರ್ಷ ಸುಮಾರು 250 ವಿದ್ಯಾರ್ಥಿಗಳು 10ನೇ ತರಗತಿ ಮುಗಿಸಿ ಕಾಲೇಜು ಶಿಕ್ಷಣಕ್ಕೆ ಹೋಗುತ್ತಿದ್ದಾರೆ. ಹೋಬಳಿ ಕೇಂದ್ರಕ್ಕೆ ಹೊಂದಿಕೊಂಡು ದೊಡ್ಡಹಳ್ಳಿ, ಪೋತಗಾನಹಳ್ಳಿ ಮತ್ತು ಸಿದ್ದಾಪುರ ಗ್ರಾಮಗಳಲ್ಲೂ ಪ್ರೌಢಶಾಲೆಗಳಿದ್ದು, ಆ ಶಾಲೆಗಳಿಂದ ಸುಮಾರು 100-150 ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ಅಡಿ ಇಡುತ್ತಾರೆ.
ಅವರಲ್ಲಿ ಸುಮಾರು ಶೇ 10ರಷ್ಟು ವಿದ್ಯಾರ್ಥಿಗಳು ಅವಕಾಶ ಇನ್ನಿತರ ಕಾರಣಗಳಿಗೆ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದರೆ, ಶೇ 20ರಷ್ಟು ಹೋಬಳಿ ಕೇಂದ್ರದಲ್ಲಿರುವ ಏಕೈಕ ಕಲಾ ಕಾಲೇಜಿಗೆ ದಾಖಲಾಗುತ್ತಿದ್ದಾರೆ. ಉಳಿದ ಶೇ 70ರಷ್ಟು ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ ಮತ್ತು ವೃತ್ತಿಪರ ಶಿಕ್ಷಣಕ್ಕಾಗಿ ತಾಲ್ಲೂಕು ಕೇಂದ್ರ, ಜಿಲ್ಲೆ ಮತ್ತು ರಾಜಧಾನಿಗಳತ್ತ ಮುಖಮಾಡುತ್ತಿದ್ದಾರೆ.

ಅಲ್ಲಿ ಪ್ರತಿನಿತ್ಯ ಬಸ್ ಪ್ರಯಾಣ, ಸರ್ಕಾರಿ ಮತ್ತು ಖಾಸಗಿ ವಸತಿನಿಲಯ, ಪೇಯಿಂಗ್ ಹಾಸ್ಟೆಲ್‌ಗಳಿಗೆ ಪರದಾಡುವುದು ಅನಿವಾರ್ಯ. ಹೋಬಳಿ ಕೇಂದ್ರದಲ್ಲಿ ಸರ್ಕಾರಿ ವಿಜ್ಞಾನ ಮತ್ತು ವೃತ್ತಿಪರ ಕಾಲೇಜುಗಳು ಅರಂಭಗೊಂಡರೆ ಈ ಭಾಗದ ಮಧ್ಯಮ ಮತ್ತು ಬಡ ವರ್ಗದ ಶಿಕ್ಷಣದ ಪ್ರಮಾಣ ಸುದಾರಣೆಯಾಗುತ್ತದೆ ಎಂದು ಮುಖಂಡರಾದ ಸತ್ಯನಾರಾಯಣ, ಬಿ.ಹೊಸಹಳ್ಳಿ ನಾಗರಾಜು ತಿಳಿಸಿದ್ದಾರೆ.

ಗ್ರಾಮಾಸಕ್ತಿ ಇಲ್ಲದ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಮತ್ತು ನಿರ್ಲಕ್ಷ ಧೋರಣೆ ಫಲವಾಗಿ ಗ್ರಾಮದಲ್ಲಿದ್ದ ಖಾಸಗಿ ಪ್ರಥಮದರ್ಜೆ ಕಾಲೇಜು, ಐಟಿಐ ಕಾಲೇಜು ಮುಚ್ಚಲ್ಪಟ್ಟಿವೆ. ಇಂದಿರಾ ವಸತಿ ಶಾಲೆ ವರ್ಗಾವಣೆಗೊಂಡಿದೆ. ಗ್ರಾಮದಲ್ಲಿ ಪ್ರಾರಂಭವಾಗಬೇಕಾಗಿದ್ದ ಇನ್ನಿತರೆ ವಸತಿ ಶಾಲೆ ಮತ್ತು ಕಾಲೇಜು ಅವಕಾಶ ಕೈತಪ್ಪಿವೆ. ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಶೈಕ್ಷಣಿಕ ಅವಕಾಶ ಹೆಚ್ಚಾಗಬೇಕು. ಗಡಿಭಾಗದ ಶೈಕ್ಷಣಿಕ ಪ್ರಗತಿಯ ಹಿನ್ನೆಲೆಯಲ್ಲಿ ಸರ್ಕಾರ, ಶಾಸಕರು ಮತ್ತು ಸಂಸದರು ಗಮನ ಹರಿಸಿ ಗ್ರಾಮದಲ್ಲಿ ಸರ್ಕಾರಿ ವಿಜ್ಞಾನ ಮತ್ತು ವೃತ್ತಿಪರ ಕಾಲೇಜುಗಳನ್ನು ಸ್ಥಾಪನೆ ಮಾಡಲು ಸಹಕರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT