ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಪ್ರತ್ಯೇಕ ಪ್ರಕರಣ: ₹15 ಲಕ್ಷ ಮೋಸ

ಶೇ 500ರಷ್ಟು ಲಾಭ ಗಳಿಸುವ ಆಮಿಷ
Published 19 ಮೇ 2024, 14:38 IST
Last Updated 19 ಮೇ 2024, 14:38 IST
ಅಕ್ಷರ ಗಾತ್ರ

ತುಮಕೂರು: ‘ಪಾರ್ಟ್‌ಟೈಮ್‌ ಕೆಲಸ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದು’ ಎಂಬ ಆಮಿಷಕ್ಕೆ ಒಳಗಾಗಿ ಜಿಲ್ಲೆಯ ಇಬ್ಬರು ಯುವಕರು ₹15 ಲಕ್ಷ ಕಳೆದುಕೊಂಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ 2 ತಿಂಗಳಲ್ಲಿ ಶೇ 300 ರಿಂದ ಶೇ 500ರಷ್ಟು ಲಾಭ ಪಡೆಯಬಹುದು ಎಂದು ನಂಬಿಸಿ ನಗರದ ಎಸ್‌.ಎಸ್‌.ಪುರಂ ನಿವಾಸಿ, ಉದ್ಯಮಿ ಚಿದಂಬರ್‌ಕುಮಾರ್‌ ಎಂಬುವರಿಗೆ ₹6.11 ಲಕ್ಷ ವಂಚಿಸಲಾಗಿದೆ.

ವಾಟ್ಸ್‌ಆ್ಯಪ್‌ ಮುಖಾಂತರ ಪರಿಚಯಿಸಿಕೊಂಡ ಸೈಬರ್‌ ಆರೋಪಿಗಳು ಒಂದು ಪ್ರತ್ಯೇಕ ಗ್ರೂಪ್‌ಗೆ ಕುಮಾರ್‌ ಅವರನ್ನು ಸೇರಿಸಿದ್ದಾರೆ. ಅದರಲ್ಲಿ ‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು’ ಎಂದು ಜಾಹೀರಾತು ಮೂಲಕ ಆಮಿಷ ಒಡ್ಡಿದ್ದಾರೆ. ಗ್ರೂಪ್‌ನಲ್ಲಿ ‘ಎಲ್ಟಾಸ್‌ ಆನ್‌ಲೈನ್‌’ ಆ‌್ಯಪ್‌ನ ಲಿಂಕ್‌ ಕಳುಹಿಸಿ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.

ಕುಮಾರ್‌ ಸದರಿ ಆ್ಯಪ್‌ನಲ್ಲಿ ತಮ್ಮ ಕೆವೈಸಿ ಮಾಹಿತಿ, ಖಾತೆಯ ವಿವರಗಳನ್ನು ಸಲ್ಲಿಸಿ ಮಾಡಿ ನೋಂದಣಿಯಾಗಿದ್ದಾರೆ. ನಂತರ ಸೈಬರ್‌ ವಂಚಕರು ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್‌ ಮಾಡಿ ಹಣ ಹೂಡಿಕೆ ಮಾಡುವಂತೆ ಬ್ಯಾಂಕ್‌ ಖಾತೆ ವಿವರ ಕಳುಹಿಸಿದ್ದಾರೆ. ಮೊದಲ ಬಾರಿಗೆ ಮೇ 3ರಂದು ₹2 ಲಕ್ಷ, 6ರಂದು ₹4.11 ಲಕ್ಷ ವರ್ಗಾವಣೆ ಮಾಡಿದ್ದಾರೆ.

ನಂತರ ಅನುಮಾನ ಬಂದು ಹಣ ವಾಪಸ್‌ ಪಡೆಯಲು ಹೋದಾಗ ‘ಎಲ್ಟಾಸ್‌ ಆನ್‌ಲೈನ್‌’ ಆ‌್ಯಪ್‌ ಬ್ಲ್ಯಾಕ್‌ ಆಗಿದೆ. ಲಾಭದ ಆಸೆ ತೋರಿಸಿ ವಂಚಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ, ಹಣ ವಾಪಸ್‌ ಕೊಡಿಸುವಂತೆ ಕುಮಾರ್‌ ಸೈಬರ್‌ ಠಾಣೆಯ ಮೆಟ್ಟಿಲು ಹತ್ತಿದ್ದು ಪ್ರಕರಣ ದಾಖಲಾಗಿದೆ.

ಪಾರ್ಟ್‌ಟೈಮ್‌ ಕೆಲಸದ ಆಮಿಷ: ₹9.50 ಲಕ್ಷ ವಂಚನೆ

‘ಆನ್‌ಲೈನ್‌ ಮುಖಾಂತರ ಪಾರ್ಟ್‌ಟೈಮ್‌ ಕೆಲಸ ಮಾಡುತ್ತಾ ಹೆಚ್ಚಿನ ಹಣ ಗಳಿಸಬಹುದು’ ಎಂದು ನಂಬಿಸಿ ತಾಲ್ಲೂಕಿನ ಊರುಕೆರೆ ಗ್ರಾಮದ ಡಿ.ಸಾದಿಕ್‌ ಎಂಬುವರಿಗೆ ₹9.50 ಲಕ್ಷ ವಂಚಿಸಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್‌ ಮಾಡಿದ ಸೈಬರ್‌ ಕಳ್ಳರು ಟೆಲಿಗ್ರಾಮ್‌ ಲಿಂಕ್‌ ಕಳುಹಿಸಿದ್ದಾರೆ. ನಂತರ ಟೆಲಿಗ್ರಾಮ್‌ನಲ್ಲಿ ಸಾದಿಕ್‌ ಅವರಿಗೆ ಟಾಸ್ಕ್‌ ನೀಡಿ ಹೋಟೆಲ್‌ ಮಾಲ್‌ಗಳಿಗೆ ರೇಟಿಂಗ್ಸ್‌ ನೀಡುವಂತೆ ತಿಳಿಸಿದ್ದಾರೆ. ಸಾದಿಕ್‌ ಮೊದಲಿಗೆ ಏ.14ರಂದು ₹29 ಸಾವಿರ ಹಣವನ್ನು ಸೈಬರ್‌ ವಂಚಕರು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ನಂತರ ಸಾದಿಕ್‌ ಖಾತೆಗೆ ₹5520 ವಾಪಸ್‌ ವರ್ಗಾವಣೆ ಮಾಡಿದ್ದಾರೆ. ಹೀಗೆ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಸಾದಿಕ್‌ ಹಂತ ಹಂತವಾಗಿ ₹954625 ಹಣವನ್ನು ವಿವಿಧ ಖಾತೆಗಳು ಮತ್ತು ಯುಪಿಐ ಐ.ಡಿಗಳಿಗೆ ವರ್ಗಾಯಿಸಿದ್ದಾರೆ. ಇದರ ನಂತರ ಅವರಿಗೆ ಯಾವುದೇ ಹಣ ವಾಪಸ್‌ ಬಂದಿಲ್ಲ. ಈ ಕುರಿತು ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT