ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಾಯನದುರ್ಗದಲ್ಲಿ ಮೋಜು ಮಸ್ತಿ

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಜೀವ ಸಂಕುಲಕ್ಕೆ ಕಂಟಕ; ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಾಟಲಿ
Last Updated 18 ಆಗಸ್ಟ್ 2020, 5:42 IST
ಅಕ್ಷರ ಗಾತ್ರ

ತುಮಕೂರು: ದೇವರಾಯನದುರ್ಗ ಸಂರಕ್ಷಿತ ಅರಣ್ಯ ಪ್ರದೇಶವೀಗ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ. ಪ್ರವಾಸಿಗರು ಎಲ್ಲೆಂದರಲ್ಲಿ ಸಂಚರಿಸುವುದು, ಅನುಪಯುಕ್ತ ವಸ್ತುಗಳನ್ನು ಬಿಸಾಡುವುದು, ಪಾರ್ಟಿ ಮಾಡುತ್ತಿರುವುದರಿಂದ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆ.

ದೇವರಾಯನದುರ್ಗ ಅರಣ್ಯ ಪ್ರದೇಶವು ತುಮಕೂರಿನ ಹವಾಮಾನ ನಿರ್ಧರಿಸುವ, ಹೆಚ್ಚು ಮಳೆ ತರಿಸುವ, ಅಂತರ್ಜಲ ವೃದ್ಧಿಗೆ ಕಾರಣವಾಗಿದೆ. ಅಲ್ಲದೆ, ತುಮಕೂರು ಜನರ ಶ್ವಾಸಕೋಶ ದಂತಿದ್ದು, ಸಂರಕ್ಷಿತ ಅರಣ್ಯದಲ್ಲಿ ಜನರ ಅನಗತ್ಯ ಸಂಚಾರದಿಂದಾಗಿ ಅಲ್ಲಿನ ಸುಂದರ ಪರಿಸರ ಹಾಳಾಗುತ್ತಿದೆ.

ಕೋವಿಡ್ ಲಾಕ್‌ಡೌನ್‌ ತೆರವು ಗೊಳಿಸಿದ ನಂತರ ಇಲ್ಲಿನ ಹಸಿರು ಬೆಟ್ಟಗಳ ತಂಪಾದ ವನಸಿರಿಗೆ ಆಕರ್ಷಿತರಾದ ಬೆಂಗಳೂರು, ತುಮಕೂರು, ಮತ್ತಿತರೆ ಪ್ರದೇಶಗಳ ಯುವಜನರು ಬೈಕ್, ಕಾರುಗಳ ಮೂಲಕ ಸೂರ್ಯೋದಯಕ್ಕೂ ಮುನ್ನ ಬೆಟ್ಟಕ್ಕೆ ಬರುತ್ತಿದ್ದಾರೆ. ಬೆಟ್ಟಗಳ ಶಿಖರಗಳ ಮೇಲೆ ಛಾಯಾಗ್ರಹಣಕ್ಕಾಗಿ, ಸೆಲ್ಫಿಗಾಗಿ ಜಮಾಯಿಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾತ್ರಿ 12 ಗಂಟೆಯಾದರೂ ಅರಣ್ಯದಲ್ಲಿ ವಾಹನಗಳ ದಟ್ಟಣೆ ಸಾಮಾನ್ಯವಾಗಿದೆ.

ಬೆಳಗಿನ ಜಾವ ಹಕ್ಕಿಗಳು, ಚಿಟ್ಟೆಗಳು, ಮೊಲ, ಜಿಂಕೆ, ಕಡವೆ, ಮುಂಗುಸಿ ಆಹಾರ ಹುಡುಕಾಟದಲ್ಲಿ ತೊಡಗಿರುತ್ತವೆ. ಇನ್ನೂ ಸಂಜೆ, ರಾತ್ರಿ ಚಿರತೆ, ಕರಡಿ, ಕಾಡುಹಂದಿ, ಕಾಡುಪಾಪ, ಪತಂಗಗಳು, ಹಾವುಗಳು, ಕಪ್ಪೆಗಳು ಆಹಾರ ಹುಡುಕಲು ಪ್ರಾರಂಭಿಸುತ್ತವೆ. ಇಂತಹ ವೇಳೆಯಲ್ಲಿ ದೇವರಾಯನ ದುರ್ಗದ ಕಾಡಿನುದ್ದಕ್ಕೂ ಜನರ ಓಡಾಟ ನಿರಂತರವಾಗಿರುವುದರಿಂದ ಪ್ರಾಣಿ, ಪಕ್ಷಿಗಳ ಜೀವನಕ್ಕೆ ತೊಂದರೆ ಉಂಟಾಗಲಿದೆ.

ವಾರಾಂತ್ಯದ ದಿನಗಳು ಬಂದರೆ ಕಾಡಿನ ಮೂಲೆ ಮೂಲೆಗಳಲ್ಲಿ ಕುಡುಕರ ಗುಂಪುಗಳು ಕಂಡು ಬರುತ್ತವೆ. ಗುಂಡು ತುಂಡುಗಳ ವಿನಿಮಯ, ಆಹಾರ ತಯಾರಿಸುವುದು, ಮೋಜು ಮಸ್ತಿ ನಡೆಯುತ್ತದೆ. ಸಂರಕ್ಷಿತ ಕಾಡಿನಲ್ಲಿ ಇಂತಹ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡವರು ಅಕ್ಷರಸ್ಥರಾಗಿದ್ದರೂ ಅನಾಗರಿಕರಂತೆ ನಡೆದು ಕೊಳ್ಳುತ್ತಾರೆ. ಕೇಕೆ, ಶಿಳ್ಳೆ, ಮೊಬೈಲ್ ಸಂಗೀತ ಎಲ್ಲೆ ಮೀರಿ ಪ್ರಶಾಂತ ಕಾಡಿನ ಪರಿಸರದಲ್ಲಿ ಕೇಳಿ ಬರುತ್ತಿದೆ. ಪ್ರತಿದಿನ ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಕಾಡಿನ ಗರ್ಭಕ್ಕೆ ಸೇರ್ಪಡೆಯಾಗುತ್ತಿವೆ.

***

ಪ್ರಾಣಿಗಳು ಕಣ್ಮರೆ

ನಾಮದ ಚಿಲುಮೆ, ರಾಮದೇವರಬೆಟ್ಟ, ಚಿನ್ನಿಗಬೆಟ್ಟ, ಯೋಗನರಸಿಂಹ ದೇವಸ್ಥಾನದ ಆಸುಪಾಸಿನಲ್ಲಿ ಅಪರೂಪದ ಕೀಟಹಾರಿ ಸಸ್ಯಗಳು, ನೆಲ ಆರ್ಕಿಡ್‌ಗಳು, ಜರಿ ಗಿಡಗಳು, ಹಾವಸೆ ಸಸ್ಯಗಳು ಬೆಳೆಯುವ ಕಾಲವಿದು.

ಕಪ್ಪೆಗಳು, ಜೇಡ, ನೂರಾರು ಬಗೆಯ ಕೀಟಗಳ ಸಂತಾನದ ಸಮಯ. ಇಂತಹ ಸಮಯದಲ್ಲಿ ಜನರ ಓಡಾಟ ಹೆಚ್ಚಿರುವುದರಿಂದ ಅಪರೂಪದ ಜೀವ ಸಂಕುಲಗಳು ಕಣ್ಮರೆಯಾಗುತ್ತವೆ. ರಾತ್ರಿ ವೇಳೆ ವಾಹನಗಳ ಸಂಚಾರದಿಂದಾಗಿ ಕಾಡುಪಾಪ, ಹಾವು, ಕಪ್ಪೆ,
ಪಕ್ಷಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

***

ಜಿಲ್ಲಾಡಳಿತ ಕ್ರಮವಹಿಸಲಿ

ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹಾಗಾಗಿ ಜಿಲ್ಲಾಡಳಿತ, ಅರಣ್ಯ ಇಲಾಖೆ, ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮಾತ್ರ ದೇವಸ್ಥಾನಕ್ಕೆ ಹೋಗಿ ಬರಲು ಅವಕಾಶ ಮಾಡಿಕೊಡಬೇಕು. ಉಳಿದ ಸಮಯದಲ್ಲಿ ಸಾರ್ವಜನಿಕರ ಓಡಾಟವನ್ನು ಸಂಪೂರ್ಣ ನಿರ್ಬಂಧಿಸಬೇಕು. ವನ್ಯಜೀವಿಗಳ ಸ್ವಚ್ಛಂದ ಜೀವನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT