ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಪರಿಚಯ: 5ನೇ ಬಾರಿಗೆ ಸಚಿವರಾದ ಪರಮೇಶ್ವರ

ಆರು ಸಲ ಶಾಸಕ, ಒಮ್ಮೆ ವಿಧಾನ ಪರಿಷತ್ ಸದಸ್ಯ
Published 20 ಮೇ 2023, 15:27 IST
Last Updated 20 ಮೇ 2023, 15:27 IST
ಅಕ್ಷರ ಗಾತ್ರ

ತುಮಕೂರು: ಕಾಂಗ್ರೆಸ್ ಪಕ್ಷದ ನೂತನ ಸರ್ಕಾರದಲ್ಲಿ ಮೊದಲ ಹಂತದಲ್ಲೇ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿದ್ದು, ನಿರೀಕ್ಷೆಯಂತೆ ಡಾ.ಜಿ.ಪರಮೇಶ್ವರ ಸಚಿವರಾಗಿದ್ದಾರೆ. ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದು, ಉಪಮುಖ್ಯಮಂತ್ರಿಯಾಗಿ, ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ದುಡಿದ ಅನುಭವ ಅವರ ಬೆನ್ನಿಗಿದೆ.

ಪರಮೇಶ್ವರ (72) ಎಂಎಸ್ಸಿ, ಪಿಎಚ್.ಡಿ ಪದವೀಧರರು. ಮಧುಗಿರಿ, ಕೊರಟಗೆರೆ ವಿಧಾನಸಭಾ ಕ್ಷೇತ್ರಗಳನ್ನು ತಮ್ಮ ರಾಜಕೀಯ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಒಂದೊಂದೇ ಮೆಟ್ಟಿಲು ಏರುತ್ತಾ ಬಂದವರು. ಆರು ಬಾರಿ ಶಾಸಕರಾಗಿ, ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ, ಉಪಮುಖ್ಯಮಂತ್ರಿಯಾಗಿ, ಗೃಹ, ಉನ್ನತ ಶಿಕ್ಷಣ, ವೈದ್ಯಕೀಯ, ರೇಷ್ಮೆ, ಐಟಿ, ಬಿಟಿಯಂತಹ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಸತತವಾಗಿ 8 ವರ್ಷಗಳ ಕಾಲ ಸಮರ್ಥವಾಗಿ ಮುನ್ನಡೆಸಿ, ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ.

ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಹೊಣೆಯನ್ನು ಹೆಗಲು ಮೇಲೆ ಹೊತ್ತುಕೊಂಡೇ ರಾಜಕೀಯದಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ. ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರವನ್ನು ಸಮಚಿತ್ತದಿಂದ ಕಂಡವರು. ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಎಂದೂ ತಮ್ಮತ್ತ ಬೆರಳು ತೋರಿಸಿಕೊಂಡವರಲ್ಲ. ತಾವು ಪ್ರತಿನಿಧಿಸುವ ಕೊರಟಗೆರೆ (ಮೀಸಲು) ಕ್ಷೇತ್ರದಲ್ಲಿ ಸಾವಿರಾರು ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ಕಪ್ಪು ಚುಕ್ಕೆ ಮೂಡದಂತೆ ನೋಡಿಕೊಂಡವರು.

ಸಾಗಿ ಬಂದ ಹಾದಿ: ಆಸ್ಟ್ರೇಲಿಯಾದಿಂದ ಉನ್ನತ ಶಿಕ್ಷಣ ಮುಗಿಸಿಕೊಂಡು ಬಂದ ಪರಮೇಶ್ವರ ಅವರು 1987ರಲ್ಲಿ ಸಿದ್ಧಾರ್ಥ ವಿದ್ಯಾಸಂಸ್ಥೆ ಜಂಟಿ ಕಾರ್ಯದರ್ಶಿ, ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿಯ ಹೊಣೆ ಹೊತ್ತು ಕೊಳ್ಳುತ್ತಾರೆ. ಇದೇ ವೇಳೆ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆಗೆ ಬಂದಿದ್ದ ರಾಜೀವ್ ಗಾಂಧಿ ಅವರು ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡುತ್ತಾರೆ. ರಾಜೀವ್ ನೀಡಿದ ಆಹ್ವಾನ ರಾಜಕೀಯದ ಕಡೆಗಿನ ಸೆಳೆತವನ್ನು ಹೆಚ್ಚಿಸುತ್ತದೆ. ಇದರಿಂದ ಉತ್ತೇಜಿತರಾಗಿ 1989ರಲ್ಲಿ ಮಧುಗಿರಿ (ಆಗ ಮೀಸಲು ಕ್ಷೇತ್ರ) ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲೇರುತ್ತಾರೆ. ಅಲ್ಲಿಂದ ಈವರೆಗೆ ಸಾಕಷ್ಟು ರಾಜಕೀಯ ಏಳುಬೀಳುಗಳ ನಡುವೆ ಉನ್ನತ ಸ್ಥಾನಕ್ಕೆ ಏರುತ್ತಲೇ ಬಂದಿದ್ದಾರೆ.

ವೀರಪ್ಪ ಮೊಯ್ಲಿ ಸರ್ಕಾರದಲ್ಲಿ (1991) ಪ್ರಥಮ ಬಾರಿಗೆ ರೇಷ್ಮೆ ಖಾತೆ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಸಚಿವರಾಗಿ ಮೊದಲ ಅನುಭವ ಪಡೆದುಕೊಳ್ಳುತ್ತಾರೆ. 1994ರಲ್ಲಿ ಸೋಲು ಅನುಭವಿಸುತ್ತಾರೆ. 1999ರಲ್ಲಿ ಮತ್ತೆ ಗೆಲುವು ಸಾಧಿಸಿ, ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಎರಡನೇ ಬಾರಿಗೆ ಸಚಿವ ಸ್ಥಾನ ಪಡೆದುಕೊಳ್ಳುತ್ತಾರೆ. ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ, ಬಿಟಿ, ಕ್ರೀಡೆ, ವಾರ್ತಾ ಮತ್ತು ಪ್ರಚಾರ ಸಚಿವರಾಗಿ ಕಾರ್ಯ ನಿರ್ವಹಣೆ. 2004ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗುತ್ತಾರೆ.

ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಮಧುಗಿರಿ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಬದಲಾಗುತ್ತದೆ. ಆಗ ಕ್ಷೇತ್ರದಿಂದ ಹೊರ ಬಂದು ಮೀಸಲು ಕ್ಷೇತ್ರವಾಗಿದ್ದ ಕೊರಟಗೆರೆಯಿಂದ 2008ರಲ್ಲಿ ಸ್ಪರ್ಧಿಸುತ್ತಾರೆ. ಇಲ್ಲೂ ಆಯ್ಕೆಯಾಗಿ ನಾಲ್ಕನೇ ಬಾರಿಗೆ (ಕೊರಟಗೆರೆಯಿಂದ ಮೊದಲ ಬಾರಿಗೆ) ಶಾಸಕರಾಗುತ್ತಾರೆ. 2010ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡು ಸತತವಾಗಿ ಎಂಟು ವರ್ಷಗಳ ಕಾಲ ಪಕ್ಷದ ನೊಗವನ್ನು ಹೊತ್ತಿದ್ದಾರೆ. 2013ರಲ್ಲಿ ಸೋಲು ಕಾಣುತ್ತಾರೆ. ಈ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿ ಅಧಿಕಾರಕ್ಕೆ ತಂದರೂ ಅವರ ಸೋಲಿನಿಂದಾಗಿ ಮುಖ್ಯಮಂತ್ರಿ ಆಗುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ.

2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗುತ್ತಾರೆ. 2018ರಲ್ಲಿ ಮತ್ತೆ ಆಯ್ಕೆಯಾಗಿ (5ನೇ ಬಾರಿ) ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ, ಗೃಹ ಖಾತೆ, ಬೆಂಗಳೂರು ನಗರಾಭಿವೃದ್ಧಿ, ಕ್ರೀಡಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

2023ರ ವಿಧಾನಸಭೆ ಚುನಾವಣೆ ಹೊತ್ತಿಗೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ ನೇಮಗೊಂಡು, ‘ಗ್ಯಾರಂಟಿ’ಗಳ ಪ್ರಣಾಳಿಕೆಗಳನ್ನು ಸಿದ್ಧಪಡಿಸಿಕೊಟ್ಟು ಪಕ್ಷದ ಗೆಲುವಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ. ಮೊನ್ನೆ ನಡೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕಾರ್ಯಕರ್ತರು ಹೂವು ಸುರಿಯುವ ಸಮಯದಲ್ಲಿ ಕಲ್ಲು ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಆ ನೋವಿನಲ್ಲೂ ಪ್ರಚಾರ ನಡೆಸಿ, ಶಾಸಕರಾಗಿ ಆಯ್ಕೆಯಾಗಿದ್ದು, ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT