ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಗೌರಿ ಪೂಜೆ; ಬಾಗಿನ ಅರ್ಪಣೆ

Last Updated 10 ಸೆಪ್ಟೆಂಬರ್ 2021, 5:47 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್ ಆತಂಕ ಜನರನ್ನು ಕಾಡುತ್ತಲೇ ಇದ್ದು, ಗೌರಿ, ಗಣೇಶ ಹಬ್ಬದ ಸಂಭ್ರಮ ಮನೆಮಾಡಿಲ್ಲ. ಸಾಕಷ್ಟು ಜನರು ಶಾಸ್ತ್ರಕ್ಕೆ ಎಂಬಂತೆ ಹಬ್ಬ ಆಚರಣೆ ಮಾಡುತ್ತಿದ್ದು ಗುರುವಾರ ಕಂಡುಬಂತು.

ಗೌರಿ ಹಬ್ಬದಂದು ಹೆಣ್ಣು ಮಕ್ಕಳು, ಮಹಿಳೆಯರಿಗೆ ಬಾಗಿನ ಅರ್ಪಿಸುವುದುಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬಂದಿದೆ. ಕೆಲವರು ತವರು ಮನೆಗೆ ಆಹ್ವಾನಿಸಿ ಬಾಗಿನ ಅರ್ಪಿಸಿದರೆ, ಮತ್ತೆ ಕೆಲವರು ಹೆಣ್ಣು ಮಕ್ಕಳು, ಸಂಬಂಧಿಗಳು ಇರುವ ಮನೆಗಳಿಗೆ ತೆರಳಿ ತವರು ಮನೆಯ ಬಾಗಿನ ಕೊಟ್ಟು ಬರುತ್ತಾರೆ. ಅಕ್ಕಪಕ್ಕದ ಮನೆಯವರು, ಸ್ನೇಹಿತರು, ಬಂಧುಗಳು ಪರಸ್ಪರ ಬಾಗಿನ ಕೊಟ್ಟು– ತೆಗೆದುಕೊಳ್ಳುತ್ತಾರೆ.

ಬೆಳಿಗ್ಗೆ ಮನೆಗಳಲ್ಲಿ ಗೌರಿ ಪೂಜೆ ಸಲ್ಲಿಸಿದ ಮಹಿಳೆಯರು ನಂತರ ದೇವಸ್ಥಾನಗಳಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ನಗರದ ಭದ್ರಮ್ಮ ವೃತ್ತದಲ್ಲಿ ಇರುವ ಸೋಮೇಶ್ವರ ದೇವಸ್ಥಾನ, ಬಿ.ಎಚ್.ರಸ್ತೆಯ ಟಿಜಿಎಂಸಿ ಮುಂಭಾಗದ ದೇವಸ್ಥಾನಗಳಲ್ಲಿ ಗೌರಮ್ಮನಿಗೆ ಪೂಜೆ ಸಲ್ಲಿಸಿ ಬಾಗಿನ ವಿನಿಮಯ ಮಾಡಿಕೊಂಡರು. ದೇಗುಲಗಳು, ಬಡಾವಣೆಗಳಲ್ಲಿ ಗೌರಮ್ಮನನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಶುಕ್ರವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಕೊರೊನಾ ಸೋಂಕು ಹರಡುವ ಭಯ, ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಜನರು ಸಂಭ್ರಮದಿಂದ ಹಬ್ಬ ಆಚರಣೆಗೆ ಮುಂದಾಗಿಲ್ಲ. ಮಾರುಕಟ್ಟೆಗಳಲ್ಲೂ ಜನಸಂದಣಿ ಕಂಡುಬರಲಿಲ್ಲ. ಹಬ್ಬದ ದಿನವೂ ವ್ಯಾಪಾರ ವಹಿವಾಟಿನ ಬಿರುಸು ಕಾಣಿಸಲಿಲ್ಲ. ಹಣ್ಣು, ಹೂವಿನ ಬೆಲೆ ದುಬಾರಿಯಾಗಿದ್ದರೂ ಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು. ಹಬ್ಬದ ಸಮಯದಲ್ಲಿ ಸಾಕಷ್ಟು ವ್ಯಾಪಾರದನಿರೀಕ್ಷೆ ಮಾಡಿದ್ದ ವ್ಯಾಪಾರಿಗಳ ಮುಖದಲ್ಲೂ ನಿರಾಶೆ ಮೂಡಿತ್ತು.

ಐದು ದಿನಗಳಿಗೆ ಸೀಮಿತವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ನೀಡಿದ್ದು, ಸಾಕಷ್ಟು ನಿರ್ಬಂಧ ವಿಧಿಸಿದೆ. ಗಣೇಶ ಹಬ್ಬ ಇನ್ನೂ ಒಂದು ವಾರ ಇರುವಾಗಲೇ ಮಾರುಕಟ್ಟೆಗೆ ಬರುತ್ತಿದ್ದ ಗಣೇಶ ಮೂರ್ತಿಗಳು ಈ ಬಾರಿ ಸೋಮವಾರದವರೆಗೂ ಕಾಣಿಸಲಿಲ್ಲ. ಕಳೆದ ಮೂರ‍್ನಾಲ್ಕು ದಿನಗಳಿಂದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದು, ಕೊಳ್ಳುವವರೇ ಇಲ್ಲವಾಗಿದ್ದಾರೆ. ಮೂರ್ತಿ ತಯಾರಕರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಖರೀದಿಸಲು ಜನರು ಮುಂದಾಗುತ್ತಿಲ್ಲ. ಸಾಕಷ್ಟು ಕಡೆಗಳಲ್ಲಿ ಹಬ್ಬದ ಉತ್ಸಾಹ ಇಲ್ಲವಾಗಿದೆ.

ನಗರದ ಸಿದ್ಧಿ ವಿನಾಯಕ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿ ವರ್ಷವೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು. ತಿಂಗಳ ಕಾಲ ಪೂಜಾಕೈಂಕರ್ಯಗಳು ನೆರವೇರುತ್ತಿದ್ದವು. ಮೂರ್ತಿ ನೋಡಲು, ಪೂಜೆ ಸಲ್ಲಿಸಲು ಪ್ರತಿ ದಿನವೂ ಸಾವಿರಾರು ಜನರು ಭೇಟಿ ನೀಡುತ್ತಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಈ ಸಲ ಮೂರ್ತಿ ಪ್ರತಿಷ್ಠಾಪಿಸಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT