ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನ ಹುಲ್ಲು ಮೇಯ್ದಂಗೆ ಮೇಯ್ತಾವ್ರೆ: ಗ್ರಾ.ಪಂ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಅಳಲು

ಗ್ರಾ.ಪಂ. ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿರುವ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಅಳಲು
Last Updated 30 ಜನವರಿ 2021, 1:40 IST
ಅಕ್ಷರ ಗಾತ್ರ

ಕೊರಟಗೆರೆ: `ಅಣ್ಣಾ.. ನಮ್ಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ಯಾವಾಗ ಅಂತ ಗೊತ್ತಾಯ್ತಾ? ದನ ಹುಲ್ಲು ಮೇಯುವ ಹಾಗೆ ಮೇಯ್ತಾವ್ರೆ.. ಎಷ್ಟು ಕಾಸು ಹಂಚಿದ್ರೂ ಸಾಕಾಗ್ತಿಲ್ಲ...’ ಗ್ರಾಮ ಪಂಚಾಯಿತಿ ಅಧ್ಯಕ್ಷರ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಂಡ ನಂತರ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿರುವ ಆಕಾಂಕ್ಷಿಯೊಬ್ಬರ ಅಳಲಿದು.

ಕೈಯಲ್ಲಿರುವ ದುಡ್ಡು ನೀರಿನಂತೆ ಖರ್ಚಾಗುತ್ತಿದ್ದರೂ ಸದಸ್ಯರನ್ನು ಊರಿಗೆ ಕರೆತರಲು ಅವರಿಗೆ ಧೈರ್ಯವಿಲ್ಲ. ಊರಿಗೆ ಬಂದ ಮೇಲೆ ಯಾವ ಸದಸ್ಯ ಮತ್ತೆ ಮನಸ್ಸು ಬದಲಾಯಿಸಿ ಯಾವ ಪಕ್ಷದ ಕಡೆ ವಾಲುತ್ತಾನೋ ಎಂಬ ಭಯ. ಇನ್ನೇನು ಕೆಲವೇ ದಿನಗಳಲ್ಲಿ ಪಂಚಾಯಿತಿ ಅಧ್ಯಕ್ಷನಾಗಿ ಆಯ್ಕೆಯಾಗುತ್ತೇನೆ ಎಂಬ ಮಹದಾಸೆಯಿಂದ ಸದಸ್ಯರಿಗೆ ಆಮಿಷ ಒಡ್ಡಿ ಕಳೆದ 15, 20 ದಿನಗಳ ಹಿಂದೆ ಪ್ರವಾಸ ಕರೆದೊಯ್ದವರ ಜೇಬಿಗೆ ನಿರೀಕ್ಷೆಗೂ ಮೀರಿ ಕತ್ತರಿ ಬಿದ್ದಿದೆ. ಆಯ್ಕೆ ದಿನವನ್ನು ಕಾತರದಿಂದ ಕಾಯುತ್ತಿದ್ದಾರೆ.

ದುಡ್ಡು ಖರ್ಚು ಮಾಡಿಯೂ ಸದಸ್ಯರು ಹೇಳಿದ ಹಾಗೆ ಕೇಳಬೇಕು. ಇಲ್ಲವಾದರೆ ಆಗಲೇ ಬೇರೆಡೆ ಮುಖ ಮಾಡುವ ಮಾತನಾಡುತ್ತಾರೆ. ಎಲ್ಲ ವ್ಯವಸ್ಥೆ ಮಾಡಿ, ಎ.ಸಿ ಹೋಟೆಲ್‌ಗಳನ್ನು ಬುಕ್ ಮಾಡಬೇಕು. ಅವರು ಕೇಳಿದ ಊಟ, ತಿಂಡಿ, ಮದ್ಯ ಕೊಡಸಬೇಕು. ಊರಲ್ಲಿ ಕಡಿಮೆ ಬೆಲೆಯ ಮದ್ಯ ಕುಡಿಯುತ್ತಿದ್ದವರು ಈಗ ದುಬಾರಿ ಮದ್ಯವನ್ನೇ ಕೇಳುತ್ತಾರೆ. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ವಾಪಸ್ ಹೋಗುವ ಬೆದರಿಕೆ ಹಾಕುತ್ತಾರೆ ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು ಹೇಳಿದರು.

ಕೆಲ ಆಕಾಂಕ್ಷಿಗಳು ಊರಲ್ಲೆ ಉಳಿದುಕೊಂಡು ತಮ್ಮ ನಂಬಿಕಸ್ಥರೊಂದಿಗೆ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪ್ರವಾಸಕ್ಕೆ ತೆರಳಿದವರ ಖರ್ಚಿಗೆ ಹಣ ಹಾಕುವುದೇ ದೊಡ್ಡ ತಲೆ ನೋವಾಗಿದೆ. ಪ್ರವಾಸದ ಖರ್ಚು ಕಂಡು ಗಾಬರಿಯಾಗುತ್ತಿದ್ದಾರೆ. ‘15-20 ದಿನದಿಂದ ಹಣ ಹೊಂದಿಸಿ ಸಾಕಾಗಿದೆ’ ಎಂದು ನಿಟ್ಟುಸಿರು ಬಿಟ್ಟರು.

‘ಖರ್ಚು ಮಾಡ್ಲಿ ಬುಡ್ಲಾ.., ಈಗಲ್ದೇ ಇನ್ಯಾವಾಗ ಖರ್ಚು ಮಾಡ್ತಾರೆ. ಎರಡೂವರೆ ವರ್ಷ ಅಧ್ಯಕ್ಷ ಆಗಲ್ವಾ...’ ಎನ್ನುವ ಮಾತುಗಳು ಹಳ್ಳಿಕಟ್ಟೆಗಳಲ್ಲಿ ಸಾಮಾನ್ಯವಾಗಿದೆ.

ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಸದಸ್ಯೆಯರು ಎಂದಿನಂತೆ ಮನೆ ಕೆಲಸಗಳನ್ನು ಮಾಡಿಕೊಂಡು ಊರಿನಲ್ಲೆ ಇದ್ದಾರೆ. ಅವರ ಪರವಾಗಿ ಗಂಡಂದಿರು ಪ್ರವಾಸಕ್ಕೆ ತೆರಳಿರುವ ಕಾರಣ ಮನೆ ಕೆಲಸದ ಜೊತೆಯಲ್ಲಿ ದನ- ಕರು, ಹೊಲ, ತೋಟದ ಕೆಲಸದ ಹೊರೆಯೂ ಅವರ ಮೇಲೆ ಬಿದ್ದಂತಾಗಿದೆ. ಆಯ್ಕೆಯಾದ ಮಹಿಳೆಯರು ಮನೆಯಲ್ಲಿದ್ದಾರೆ. ಪತಿರಾಯರು ಪ್ರವಾಸದ ಮೋಜಿನಲ್ಲಿ ದಿನ ಕಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT