ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗೆ ಬೀಳಲಿದೆ ಹಮಾಲರ ಬದುಕು: ಕೆ.ಮಹಾಂತೇಶ್

ಸೆ.23 ಮತ್ತು 24ರಂದು ಪ್ರತಿಭಟನೆ
Last Updated 15 ಸೆಪ್ಟೆಂಬರ್ 2020, 16:32 IST
ಅಕ್ಷರ ಗಾತ್ರ

ತುಮಕೂರು: ಅಸಂಘಟಿತ ವಲಯದ ಹಮಾಲರು, ಕೂಲಿಕಾರರಿಗೆ ಕೋವಿಡ್ ಪರಿಹಾರಘೋಷಿಸುವಂತೆ ಒತ್ತಾಯಿಸಿ ಸೆ. 23 ಮತ್ತು 24ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರಫೆಡರೇಶನ್‌ ಅಧ್ಯಕ್ಷ ಕೆ.ಮಹಾಂತೇಶ್ ತಿಳಿಸಿದರು.

ಎಪಿಎಂಸಿ, ಗ್ರಾಮೀಣ ಬಜಾರ್, ಮಿಲ್, ಗೋಡೌನ್, ವೇರ್‌ಹೌಸ್, ಗೂಡ್‌ಶೆಡ್, ಟ್ರಾನ್ಸ್‌ಪೋರ್ಟ್, ಬಂದರು– ಹೀಗೆ ಹಲವೆಡೆ ದುಡಿಯುವ ಹಮಾಲಿ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಮನವಿ ಸಲ್ಲಿಸಿದರೂ ಸರ್ಕಾರ ಗಮನಹರಿಸಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ರಾಜ್ಯದ 400ಕ್ಕೂ ಎಪಿಎಂಸಿ ಮಾರುಕಟ್ಟೆಗಳು, 130 ಪ್ರಮುಖ ಮಾರುಕಟ್ಟೆಗಳು ಬಾಗಿಲು ಮುಚ್ಚಲಿವೆ. ಪರಿಣಾಮ 1 ಲಕ್ಷ ಹಮಾಲರು ಹೊರ ತಳ್ಳಲ್ಪಡುತ್ತಾರೆ. ಇವರನ್ನೇ ನಂಬಿರುವ ಲಕ್ಷಾಂತರ ಮಂದಿ ಬೀದಿಗೆ ಬೀಳಲಿದ್ದಾರೆ. ಹಾಗಾಗಿ ಸರ್ಕಾರ ಈ ಎರಡು ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಇದುವರೆಗೂ ರೈತರು ಮಾರುಕಟ್ಟೆಗಳಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ತಂದು ಮಾರಾಟ ಮಾಡುವ ವ್ಯವಸ್ಥೆ ಇತ್ತು. ಹೊಲದಲ್ಲಿ ಖರೀದಿ ಮಾಡಿದರೆ ದಂಡ ವಿಧಿಸಬಹುದಾಗಿತ್ತು. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಬೃಹತ್ಕಂಪನಿಗಳು ರೈತರಿಂದಲೇ ನೇರ ಖರೀದಿ ಮಾಡಲು ಅವಕಾಶವಾಗುತ್ತದೆ. ಇದರಿಂದ ರೈತರಿಗೂ ಅನ್ಯಾಯ, ಹಮಾಲರಿಗೂ ಸಂಕಷ್ಟ ಉದ್ಭವಿಸಲಿದೆ ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪತ್ತಾರ್, ‘ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಮಾಲೀಕರ ಸೆಸ್ ಕಡಿಮೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಕಾರ್ಮಿಕರಿಗೆ ಪರಿಹಾರ ನೀಡುವ ಬಗ್ಗೆ ಚಕಾರ ಎತ್ತಲಿಲ್ಲ. ಇದು ಶ್ರೀಮಂತರು, ಮಾಲೀಕರ ಪರವಿರುವ ಸರ್ಕಾರ ಎಂದು ಸಾಭೀತಾಗಿದೆ’ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಶ್ರಮ ಯೋಗಿ ಮಾನ್ ಧನ್ ಯೋಜನೆ ಜಾರಿಗೊಳಿಸಿದೆ. ಅಬ್ಬರದ ಪ್ರಚಾರವನ್ನು ಮಾಡುತ್ತಿದೆ. ಆದರೆ ಈ ಯೋಜನೆಗಳಿಂದ ಅಸಂಘಟಿತ ಕಾರ್ಮಿಕರಿಗೆ ಪ್ರಯೋಜನವಾಗುತ್ತಿಲ್ಲ ಎಂದರು.

ಈ ವಿಮಾ ಯೋಜನೆಗಳಡಿ ಕಾರ್ಮಿಕರು 50 ವರ್ಷದೊಳಗೆ ಮೃತಪಟ್ಟರೆ ಮಾತ್ರ ಪರಿಹಾರ ಪಡೆಯಬಹುದು. 40 ವರ್ಷದೊಳಗಿನವರು ಮಾತ್ರ ನೋಂದಣಿ ಮಾಡಿಸಬೇಕು. ಹೀಗಾದರೆ ಶೇ 10ರಷ್ಟು ಹಮಾಲರು ಮಾತ್ರ ನೋಂದಣಿ ಮಾಡಿಸಬಹುದು. ಹಾಗಾಗಿ 90ರಷ್ಟು ಕಾರ್ಮಿಕರಿಗೆ ಪರಿಹಾರ ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಎನ್.ಕೆ.ಸುಬ್ರಮಣ್ಯ, ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಹನುಮಂತಯ್ಯ, ಉಪಾಧ್ಯಕ್ಷ ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT