ಬುಧವಾರ, ಜೂನ್ 16, 2021
23 °C

ಟೂಡಾ; ನೇಕಾರ ಸಮುದಾಯಕ್ಕೆ ಅವಕಾಶ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ನೇಕಾರರ ಸಮುದಾಯಕ್ಕೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮತ್ತು ಮಹಾನಗರ ಪಾಲಿಕೆಯಲ್ಲಿ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕಮಾಡಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಕಾರ್ಯದರ್ಶಿ ಧನಿಯಾಕುಮಾರ್ ಒತ್ತಾಯಿಸಿದರು.

ನಗರದಲ್ಲಿ ನೇಕಾರ ಸಮುದಾಯದ 10 ಸಾವಿರ ಜನಸಂಖ್ಯೆ ಇದೆ. ಗುಬ್ಬಿ, ತುರುವೇಕೆರೆ, ತಿಪಟೂರು, ಕೊರಟಗೆರೆ, ಪಾವಗಡ ತಾಲ್ಲೂಕುಗಳಲ್ಲೂ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದೇವೆ. ಇಂದಿನವರೆಗೂ ನೇಕಾರರ ಕುಟುಂಬಗಳು ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ನೇಕಾರರಿಗೆ ಕೆಲವು ಸೌಲಭ್ಯ ಕೊಟ್ಟಿರುವುದನ್ನು ಬಿಟ್ಟರೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಗೆಲ್ಲಲೂ ಸಾಧ್ಯವಿಲ್ಲದ ನಮ್ಮ ಹಿಂದುಳಿದ ಸಮುದಾಯಗಳಿಗೆ ನಾಮನಿರ್ದೇಶನ ಸದಸ್ಯ ಸ್ಥಾನವೇ ದಾರಿ ಆಗಿದೆ. ಕಳೆದ 40 ವರ್ಷಗಳಿಂದಲೂ ನೇಕಾರರ ಸಮುದಾಯ ಬಿಜೆಪಿ ಬೆಂಬಲಿಸುತ್ತಿದೆ ಎಂದು ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ ಅವರು ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿದ್ದು, ನೇಕಾರರಿಗೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಗೌರವಾಧ್ಯಕ್ಷ ಆರ್.ರಾಮಕೃಷ್ಣಯ್ಯ, ‘ಕೊರೊನಾ ಕಷ್ಟದ ಕಾರಣ ನೇಕಾರರ ಬದುಕು ಕಠಿಣವಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ನೇಕಾರರು ತಮ್ಮ ಕಸುಬು ನಡೆಸಲು ಕಷ್ಟಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ನೇಕಾರರ ಸಮುದಾಯಕ್ಕೆ ಸಹಾಯ ಮಾಡಬೇಕು’ ಎಂದರು.

ತುಮಕೂರಿನಲ್ಲಿರುವ ಕೈಮಗ್ಗ ಮತ್ತು ಜವಳಿ ನಿಗಮ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರ್ವೆ ಮಾಡಿ, ಕೈಮಗ್ಗ ನೇಕಾರರು ಮತ್ತು ವಿದ್ಯುತ್ ಚಾಲಿತ ನೇಕಾರರ ಗಣತಿಮಾಡಿ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಕಲ್ಪಿಸಿಕೊಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಉಪಾಧ್ಯಕ್ಷ ಡಾ.ವೆಂಕಟೇಶ್ ಮಾತನಾಡಿದರು. ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಕಮಲಮ್ಮ, ನೇಕಾರರ ಯುವ ಘಟಕದ ಅಧ್ಯಕ್ಷ ಅನಿಲ್‍ಕುಮಾರ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.