ತುಮಕೂರು: 20 ವರ್ಷದ ಯುವಕ, ಪೋಷಕರಿಗೆ ಎಚ್‌ಐವಿ ಸೋಂಕಿಲ್ಲ. ಆದರೆ ಈತ ಒಂದು ವರ್ಷದಿಂದ ಎಚ್‌ಐವಿಯಿಂದ ಬಳಲುತ್ತಿದ್ದಾನೆ. ಪಿಯುಸಿ ನಂತರ ಬಾಲಕರ ಹಾಸ್ಟೆಲ್ ಸೇರಿ ಸಹಪಾಠಿಗಳ ಜತೆ ಲೈಂಗಿಕ ಸಂಪರ್ಕ ಬೆಳೆಸಿ ರೋಗ ತಂದುಕೊಂಡಿದ್ದಾನೆ. ಜೀವನ ಪೂರ್ತಿ ಸೋಂಕಿನ ಜತೆ ಬದುಕಬೇಕಿದೆ.
25 ವರ್ಷದ ಮತ್ತೊಬ್ಬ ಯುವಕ ಸ್ನಾತಕೋತ್ತರ ಪದವೀಧರ. ಪದವಿ ಅಭ್ಯಾಸ ಮಾಡುವಾಗ ಹಾಸ್ಟೆಲ್‌ನ ಸ್ನೇಹಿತರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ. ಎರಡು ವರ್ಷಗಳ ಹಿಂದೆ ಎಚ್‌ಐವಿ ಹರಡಿತು!
ಇವು ಎರಡು ಉದಾಹರಣೆಗಳಷ್ಟೇ. ಕಳೆದ ಎರಡು–ಮೂರು ವರ್ಷಗಳಿಂದ ಸಲಿಂಗ ಕಾಮದಿಂದ ಎಚ್‌ಐವಿ ಹರಡುವಿಕೆ ಜಾಸ್ತಿಯಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕಾಗಿ ಊರು ಬಿಟ್ಟು ಬಂದು ಬಾಡಿಗೆ ರೂಮ್, ಪಿ.ಜಿಗಳಲ್ಲಿ ವಾಸವಿರುವ ಯುವಕರು ಅಸುರಕ್ಷಿತ ಲೈಂಗಿಕ ಕ್ರಮದಿಂದ ರೋಗ ತಂದುಕೊಳ್ಳುತ್ತಿದ್ದಾರೆ. ಎಚ್‌ಐವಿ ದೃಢಪಡುವ 100 ಮಂದಿಯಲ್ಲಿ 10 ಜನ ಇದೇ ವರ್ಗಕ್ಕೆ ಸೇರಿದವರಾಗಿದ್ದಾರೆ.
ಮಾಹಿತಿ ಕೊರತೆ, ನಿರ್ಲಕ್ಷ್ಯದಿಂದ ಜೀವನ ಮಸುಕಾಗಿಸಿಕೊಳ್ಳುತ್ತಿದ್ದಾರೆ. ಸುಂದರ ಭವಿಷ್ಯವನ್ನು ಅರ್ಧಕ್ಕೆ ಕೊನೆ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳ ಬಗ್ಗೆ ಕನಸು ಕಟ್ಟಿಕೊಂಡಿದ್ದ ಪೋಷಕರು ಅವರ ವರ್ತನೆ ಕಂಡು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆ, ಆ್ಯಪ್‌ಗಳು ಯುವ ಸಮೂಹವನ್ನು ದಾರಿ ತಪ್ಪಿಸುತ್ತಿವೆ. ಹಾಸ್ಟೆಲ್, ಪಿ.ಜಿಗಳು ವಿದ್ಯಾರ್ಥಿ, ಯುವ ಸಮೂಹಕ್ಕೆ ಸುರಕ್ಷಿತವಲ್ಲ ಎಂಬುವುದಕ್ಕೆ ಎಚ್‌ಐವಿ ಅಂಕಿ–ಅಂಶ ಕನ್ನಡಿ ಹಿಡಿಯುತ್ತಿದೆ.
‘ಪದೇ ಪದೇ ಜ್ವರ, ಕೆಮ್ಮು, ಭೇದಿಯಾದರೆ ಕೂಡಲೇ ವೈದ್ಯರ ನೆರವು ಪಡೆಯಬೇಕು. ಸೋಂಕು ಹರಡುವಿಕೆಗೆ ಪ್ರಾರಂಭದಲ್ಲೇ ಕಡಿವಾಣ ಹಾಕಬೇಕು. ಆದರೆ ಯುವಕರು ಸೋಂಕು ತಡೆಗೆ ಮುಂದಾಗುತ್ತಿಲ್ಲ. ತುಂಬಾ ನಿರ್ಲಕ್ಷ್ಯ ವಹಿಸುತ್ತಾರೆ. ಇದರಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ’ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ಹಂಚಿಕೊಂಡರು.
ಎಚ್‌ಐವಿ ಸೋಂಕಿತರಿಗೆ ಜಿಲ್ಲಾ ಆಸ್ಪತ್ರೆಯ ಎಆರ್‌ಟಿ ಕೇಂದ್ರದಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ, ಔಷಧಿ ವಿತರಿಸಲಾಗುತ್ತದೆ. ರೋಗಿಗಳಿಗೆ ಆಪ್ತ ಸಮಾಲೋಚನೆ, ಸೂಕ್ತ ಮಾರ್ಗದರ್ಶನ ಸೇರಿದಂತೆ ಉಚಿತವಾಗಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆ, ತಿಪಟೂರು, ಶಿರಾ ಸೇರಿದಂತೆ ನಾಲ್ಕು ಕಡೆಗಳಲ್ಲಿ ಎಆರ್‌ಟಿ ಕೇಂದ್ರಗಳಿವೆ. ಇಲ್ಲಿ ಸದ್ಯ 8,115 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
5 ಸಾವಿರ ಸಾವು: 2008ರ ಏಪ್ರಿಲ್‌ನಿಂದ 2024ರ ಜುಲೈ ವರೆಗೆ ಜಿಲ್ಲೆಯಲ್ಲಿ ಒಟ್ಟು 5,335 ಜನ ಎಚ್‌ಐವಿ ಸೋಂಕಿತರು ಮೃತಪಟ್ಟಿದ್ದಾರೆ. ಎಆರ್‌ಟಿ ಕೇಂದ್ರದಲ್ಲಿ ನೋಂದಣಿಗೂ ಮುನ್ನ 1,043, ನೋಂದಣಿಯ ನಂತರ 4,292 ಜನ ರೋಗಿಗಳು ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ 7,25,877 ಗರ್ಭಿಣಿಯರು ಎಚ್‌ಐವಿ ಪರೀಕ್ಷೆಗೆ ಒಳಗಾಗಿದ್ದು, 878 ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.
‘ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆದು ಶಿಸ್ತಿನ ಜೀವನ ಕ್ರಮ ರೂಢಿಸಿಕೊಂಡರೆ ರೋಗ ಹತೋಟಿಗೆ ತರಬಹುದು. ಎಚ್‌ಐವಿ ಕೊನೆಯ ಹಂತದಲ್ಲಿ ಚಿಕಿತ್ಸೆಗಾಗಿ ಓಡಾಡಿ ಬರುತ್ತಾರೆ. ಆಗ ಜೀವ ಉಳಿಸುವುದು ಕಷ್ಟಕರವಾಗುತ್ತದೆ’ ಎಂದು ವೈದ್ಯರೊಬ್ಬರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.