ಸೋಮವಾರ, ಅಕ್ಟೋಬರ್ 18, 2021
24 °C
ಕೋರ್ಟ್‌ ಆದೇಶದಂತೆ ಒತ್ತುವರಿ ತೆರವು: ತಾಲ್ಲೂಕು ಆಡಳಿತ ಸ್ಪಷ್ಟನೆ

ಗುಬ್ಬಿ: ಮಾಹಿತಿ ನೀಡದೆ ಮನೆ ತೆರವು; ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ಸರ್ಕಾರದಿಂದ ಹಂಚಿಕೆಯಾಗಿದ್ದ ನಿವೇಶನದಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದು, ತಾಲ್ಲೂಕು ಆಡಳಿತ ಯಾವುದೇ ಸೂಚನೆ ನೀಡದೆ ಮನೆಗಳನ್ನು ಕೆಡವಿದೆ ಎಂದು ತಾಲ್ಲೂಕಿನ ಕೆಜಿ ಟೆಂಪಲ್ ಬಳಿಯ ಲಿಂಗಮ್ಮನಹಳ್ಳಿಯ ಕೆಲ ನಿವಾಸಿಗಳು ಆರೋಪಿಸಿದ್ದಾರೆ.

ಮನೆಯ ಮಾಲೀಕ ನಯಾಜ್ ಪಾಷಾ ಮಾತನಾಡಿ, ‘ವಸತಿ ರಹಿತರಾಗಿದ್ದ ನಮಗೆ ಸರ್ಕಾರವೇ ಹಕ್ಕುಪತ್ರ ವಿತರಿಸಿತ್ತು. ಅಲ್ಲಿಯೇ ಮನೆ ಕಟ್ಟಿಕೊಂಡು ವಾಸವಾಗಿದ್ದೆವು. ತಾಲ್ಲೂಕು ಆಡಳಿತ ಯಾವುದೇ ಸೂಚನೆ ನೀಡದೆ ದಾರಿ ಒತ್ತುವರಿಯಾಗಿದೆ ಎಂದು ಮನೆಯನ್ನು ಕೆಡವಿರುವುದರಿಂದ ಬದುಕು ಬೀದಿಗೆ ಬಂದಿದೆ. ಸರ್ವೇ ಹಾಗೂ ಕಂದಾಯ ಅಧಿಕಾರಿಗಳು ಮೂಲ ದಾಖಲೆಗಳ ಬಗ್ಗೆ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಶಾಲಾ-ಕಾಲೇಜಿಗೆ ಹೋಗಲು ದಾರಿ ಇಲ್ಲ ಎನ್ನುವಂತೆ ಬಿಂಬಿಸಿ ಮನೆಯನ್ನು ದ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದರು.

ತಹಶೀಲ್ದಾರ್ ಬಿ.ಆರತಿ ಪ್ರತಿಕ್ರಿಯಿಸಿ, ಹೈಕೋರ್ಟ್‌ ಆದೇಶದಂತೆ ಕ್ರಮ ಕೈಗೊಂಡಿದ್ದೇವೆ. ಶಾಲೆಯ ದಾರಿಯನ್ನು ಒತ್ತುವರಿಮಾಡಿಕೊಂಡಿದ್ದ ಒಂದು ಗುಜರಿ ಅಂಗಡಿಯನ್ನು ಹೊರತುಪಡಿಸಿ ಯಾವುದೇ ವಾಸದ ಮನೆಯನ್ನು ಕೆಡವಿಲ್ಲ. ದಾರಿಗೆ ಅಗತ್ಯವಿದ್ದಷ್ಟು ಜಾಗವನ್ನು ಮಾತ್ರ ತೆರವುಗೊಳಿಸಿದ್ದೇವೆ. ಸಂಬಂಧಪಟ್ಟ ಒತ್ತುವರಿದಾರರಿಗೆ ಸೂಚನೆ ನೀಡುವುದರ ಜೊತೆಗೆ ಅಧಿಕಾರಿಗಳು ಫೋನ್ ಮೂಲಕವೂ ವಿಚಾರ ತಿಳಿಸಿದ್ದರೂ, ಒತ್ತುವರಿದಾರರು ತೆರವುಗೊಳಿಸದ ಕಾರಣ ಅನಿವಾರ್ಯವಾಗಿ ನ್ಯಾಯಾಲಯದ ಆದೇಶ ಪಾಲಿಸಬೇಕಾಯಿತು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ನಂಜುಂಡಪ್ಪ ಮಾತನಾಡಿ, ತೆರವುಗೊಳಿಸಿದ ಜಾಗವು ಸರ್ಕಾರದಿಂದ ಹಂಚಿಕೆಯಾಗಿದ್ದ ನಿವೇಶನವಾಗಿದ್ದು ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಅವರ ಬಳಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿಯೂ ಇವೆ. ಆದರೂ ಅಧಿಕಾರಿಗಳು ಇಂತಹ ಕ್ರಮಕ್ಕೆ ಮುಂದಾಗಿದ್ದು ಸರಿಯಲ್ಲ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕರಿಮುಲ್ಲಾ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.