ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೇಮಾವತಿ ಲಿಂಕ್ ಕೆನಾಲ್’ ನಿಲ್ಲಿಸುವ ಪ್ರಯತ್ನ: ಸಚಿವ ಜಿ. ಪರಮೇಶ್ವರ

Published 19 ಮೇ 2024, 6:28 IST
Last Updated 19 ಮೇ 2024, 6:28 IST
ಅಕ್ಷರ ಗಾತ್ರ

ತುಮಕೂರು: ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗುವ ‘ಹೇಮಾವತಿ ಲಿಂಕ್ ಕೆನಾಲ್’ ನಿರ್ಮಾಣ ಕಾಮಗಾರಿ ಮುಂದುವರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿದ ನಂತರ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಚಿವ ಸಂಪುಟ ಸಭೆಯಲ್ಲಿ ನಾನು, ಸಚಿವ ರಾಜಣ್ಣ ಈ ವಿಚಾರ ಪ್ರಸ್ತಾಪಿಸಿದ್ದೇವೆ. ನಾಲೆ ನಿರ್ಮಿಸಿದರೆ ಜಿಲ್ಲೆಯ ಜನರಿಗೆ ತೊಂದರೆಯಾಗುತ್ತದೆ ಎಂಬ ಸಂಗತಿಯನ್ನು ಗಮನಕ್ಕೆ ತಂದಿದ್ದೇವೆ. ಆದರೂ ನಿರ್ಧಾರ ಕೈಗೊಂಡು ಕೆಲಸ ಮಾಡಿಸುತ್ತಿದ್ದಾರೆ. ₹1 ಸಾವಿರ ಕೋಟಿ ಹಣ ಕೊಟ್ಟಿದ್ದಾರೆ. ಇದು ಸರ್ಕಾರದ ನಿರ್ಧಾರ. ನಮ್ಮ ನಿರ್ಧಾರವಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಮಧ್ಯೆ ರೈತರು ಈ ಎಕ್ಸ್‌ ಪ್ರೆಸ್ ಕೆನಾಲ್ ಕಾಮಗಾರಿ ತಡೆದು ನಿಲ್ಲಿಸಿದ್ದಾರೆ. ತಹಶೀಲ್ದಾರ್, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ರೈತರು ಮನವಿ ಸಲ್ಲಿಸಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ. ಜಿಲ್ಲೆಗೆ 25 ಟಿಎಂಸಿ ಅಡಿಗಳಷ್ಟು ಹೇಮಾವತಿ ನೀರು ಹಂಚಿಕೆಯಾಗಿದ್ದು, ಈವರೆಗೂ 18ರಿಂದ 19 ಟಿಎಂಸಿಯಷ್ಟೂ ಹರಿದು ಬಂದಿಲ್ಲ. ಹೆಚ್ಚೆಂದರೆ 14ರಿಂದ 15 ಟಿಎಂಸಿ ನೀರು ಬಂದಿರಬಹುದು ಅಷ್ಟೇ. ಇಂತಹ ಸ್ಥಿತಿಯಲ್ಲಿ ಪಕ್ಕದ ಜಿಲ್ಲೆಗೂ ಕೊಡಬೇಕಾಗಿದೆ ಎಂದರು.

ಕಾಂಗ್ರೆಸ್ ಸಭೆ: ಕಾಂಗ್ರೆಸ್ ಕಚೇರಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಪರಮೇಶ್ವರ, ‘ಎಸ್.ಪಿ.ಮುದ್ದಹನುಮೇಗೌಡ ಅವರು ಲೋಕಸಭೆ ಸದಸ್ಯರಾಗಿ ಆಯ್ಕೆಯಾಗುವುದು ಖಚಿತ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಲೆಯೂ ಇಲ್ಲ, ಏನೂ ಇಲ್ಲ. ದೇಶದೆಲ್ಲೆಡೆ ಬದಲಾವಣೆ ಗಾಳಿ ಬೀಸುತ್ತಿದ್ದು, ಈ ಬಾರಿ ಅಚ್ಚರಿಯ ಫಲಿತಾಂಶ ಬರಲಿದೆ. ಅದೇ ರೀತಿ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿದರು.

ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ದೆಹಲಿ ವಿಶೇಷ ಪ್ರತಿನಿಧಿ, ಟಿ.ಬಿ.ಜಯಚಂದ್ರ, ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಎಚ್.ವಿ.ವೆಂಕಟೇಶ್, ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ, ಎಸ್.ಪಿ.ಮುದ್ದಹನುಮೇಗೌಡ ಮೊದಲಾದವರು ಉಪಸ್ಥಿತರಿದ್ದರು.

ಕೃಷ್ಣಪ್ಪ ಗಂಡಸೇ: ಶ್ರೀನಿವಾಸ್ ಪ್ರಶ್ನೆ
ತುಮಕೂರು: ‘ಶಾಸಕ ಎಂ.ಟಿ.ಕೃಷ್ಣಪ್ಪ ಗಂಡಸಾದರೆ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ಮುಂದೆ ಬಂದು ಮಾತನಾಡಲಿ. ಕೊರಳ ಪಟ್ಟಿ ಹಿಡಿದು ಕೇಳುತ್ತೇನೆ’ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಗುಡುಗಿದರು. ‘ಹೇಮಾವತಿ ಲಿಂಕ್ ಕೆನಾಲ್’ ವಿರೋಧಿ ಹೋರಾಟ ಸಭೆಯಲ್ಲಿ ‘ಶಾಸಕ ಶ್ರೀನಿವಾಸ್ ಕಳ್ಳ ಕಾಸಣ್ಣ ಗುಳ್ಳೇನರಿ’ ಎಂದು ಎಂ.ಟಿ.ಕೃಷ್ಣಪ್ಪ ಜರಿದಿದ್ದರು. ಅದಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಎಲ್ಲೋ ಮೈಕ್ ಹಿಡಿದುಕೊಂಡು ಕೃಷ್ಣಪ್ಪ ಮಾತನಾಡುವುದಲ್ಲ. ಗುಬ್ಬಿಗೆ ಬಂದು ಮಾತನಾಡಲಿ. ಆಗ ತೋರಿಸುತ್ತೇನೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ‘ಕೃಷ್ಣಪ್ಪ ಮಾಡುವ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ. ಕುಣಿಗಲ್ ತಾಲ್ಲೂಕಿಗೆ 3 ಟಿಎಂಸಿ ನೀರು ಹಂಚಿಕೆಯಾಗಿದೆ. ಅಷ್ಟು ನೀರು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಗುಬ್ಬಿ ತಾಲ್ಲೂಕಿನ ಜನರ ಹಿತ ಕಾಯುವುದು ನನಗೆ ಗೊತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT