ಬುಧವಾರ, ಸೆಪ್ಟೆಂಬರ್ 29, 2021
20 °C
20ಕ್ಕೆ ಮುಖ್ಯಮಂತ್ರಿ ಮನೆ ಚಲೋ

ಕಾರ್ಮಿಕರ ಕಿಟ್ ಖರೀದಿಯಲ್ಲಿ ಅಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಾರ್ಮಿಕ ಕಲ್ಯಾಣ ಮಂಡಳಿಯ ಹಣ ಬಳಕೆ ಮಾಡಿಕೊಂಡು ಖರೀದಿಸಿರುವ ಆಹಾರ ಕಿಟ್, ಟೂಲ್ ಕಿಟ್, ಸುರಕ್ಷತಾ ಕಿಟ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಕಾರ್ಮಿಕರು ಸೆ. 20ರಂದು ‘ಮುಖ್ಯಮಂತ್ರಿ ಮನೆ ಚಲೋ’ ಹಮ್ಮಿಕೊಂಡಿದ್ದಾರೆ.

ಕಟ್ಟಡ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಹೋರಾಟ ನಡೆಸುತ್ತಿವೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಿಐಟಿಯು ಮುಖಂಡ ಕೆ. ಮಹಾಂತೇಶ್, ‘ಕಾರ್ಮಿಕರ ಹೆಸರಿನಲ್ಲಿ ಸುಮಾರು ₹ 2,600 ಕೋಟಿ ಖರ್ಚು ಮಾಡಿ ಟೆಂಡರ್ ಕರೆಯದೆ ಕಿಟ್‌ಗಳನ್ನು ಖರೀದಿಸಲಾಗಿದೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚು ಹಣ ಕೊಡಲಾಗಿದೆ. ಈ ಖರೀದಿಯಲ್ಲಿ ಭಾರಿ ಅವ್ಯವಹಾರವೇ ನಡೆದಿದ್ದು, ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸುವ ಸಲುವಾಗಿ ಮುಖ್ಯಮಂತ್ರಿ ಮನೆ ಚಲೋ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

ಕೋವಿಡ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರ ಕುಟುಂಬಗಳಿಗೆ ಕನಿಷ್ಠ ₹10 ಸಾವಿರ ಪರಿಹಾರ ನೀಡಬೇಕು. ಬೋಗಸ್ ಕಾರ್ಡುಗಳಿಗೆ ಕಡಿವಾಣ ಹಾಕಬೇಕು. ಕಲ್ಯಾಣ ಮಂಡಳಿಯಲ್ಲಿ ಸವಲತ್ತುಗಳಿಗಾಗಿ ಬಂದಿರುವ ಬಾಕಿ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು. ಮದುವೆ, ಅಪಘಾತ ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಐಎನ್‍ಟಿಯುಸಿ ಮುಖಂಡ ಶಾಮಣ್ಣರೆಡ್ಡಿ, ‘ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ 1996ರಲ್ಲಿ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಈವರೆಗೆ ₹ 2 ಸಾವಿರ ಕೋಟಿ ಬಡ್ಡಿಯೂ ಸೇರಿದಂತೆ ₹ 10,400 ಕೋಟಿ ಸಂಗ್ರಹವಾಗಿದೆ. ಕಲ್ಯಾಣ ಮಂಡಳಿಯ ನಿಯಮದ ಪ್ರಕಾರ ಈ ಹಣವನ್ನು ಕಾರ್ಮಿಕರ ಕಲ್ಯಾಣಕ್ಕೆ ಖರ್ಚು ಮಾಡಬೇಕಿದೆ. ಆದರೆ, ಹಣವನ್ನು ಕಾರ್ಮಿಕರ ಖಾತೆಗೆ ನೇರವಾಗಿ ವರ್ಗಾಯಿಸದೆ ವಸ್ತುಗಳನ್ನು ಖರೀದಿಸಿ ನಿಯಮ ಉಲ್ಲಂಘಿಸಲಾಗಿದೆ. ಕಾರು, ಆಂಬುಲೆನ್ಸ್‌ಗಳನ್ನು ಖರೀದಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸಿದ್ದು, 10 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸೆ. 20ರ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಎಐಟಿಯುಸಿ ಮುಖಂಡ ಗಿರೀಶ್, ‘ಕಾರ್ಮಿಕ ಇಲಾಖೆಯಿಂದ ಹಂಚಿರುವ 21 ಲಕ್ಷ ದಿನಸಿ ಕಿಟ್‍ಗಳು ಕಳಪೆಯಾಗಿವೆ. ಅಲ್ಲದೆ, ಕಾರ್ಮಿಕ ಸಚಿವರ ಕ್ಷೇತ್ರದಲ್ಲಿಯೇ 65 ಸಾವಿರ ಕಿಟ್ ಹಂಚಲಾಗಿದೆ. ಅಲ್ಲಿ ಇಷ್ಟೊಂದು ಜನ ಕಾರ್ಮಿಕರು ಇದ್ದಾರೆ ಎಂಬ ಅನುಮಾನ ಮೂಡುತ್ತದೆ’
ಎಂದರು.

ಎಐಯುಟಿಯುಸಿ ಷಣ್ಮುಗಂ, ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಐಎನ್‌ಟಿಯುಸಿ ರಾಜು, ಸಿಐಟಿಯು ಬಿ. ಉಮೇಶ್ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.