ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆ ಅನುಷ್ಠಾನಗೊಳಿಸಿ: ಮುಖಂಡರ ಒತ್ತಾಯ

ರೈತ ಸಂಘ, ಹಸಿರು ಸೇನೆ ಸಭೆಯಲ್ಲಿ ಮುಖಂಡರ ಒತ್ತಾಯ
Last Updated 7 ಸೆಪ್ಟೆಂಬರ್ 2021, 5:56 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಜಾರಿಯಲ್ಲಿರುವ ನೀರಾವರಿ ಯೋಜನೆಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಉಪಾಧ್ಯಕ್ಷ ಎ. ಗೋವಿಂದರಾಜು ಒತ್ತಾಯಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಸಭೆಯಲ್ಲಿ ಸೋಮವಾರ ಮಾತನಾಡಿ, ‘ಎತ್ತಿನಹೊಳೆ, ಹೇಮಾವತಿ, ಭದ್ರಾ ಮೇಲ್ದಂಡೆ, ಬಿಕ್ಕೇಗುಡ್ಡ, ಹಾಗಲವಾಡಿ ಕುಡಿಯುವ ನೀರಿನ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ನೀರಾವರಿ ಯೋಜನೆಗಳಿಗೆ ಅನುದಾನ ನೀಡದೆ ನನೆಗುದಿಗೆ ಬಿದ್ದಿವೆ. ಸರ್ಕಾರದ ವಿಳಂಬ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಂಠಿತವಾಗಿರುವ ಯೋಜನೆಗಳು ಕಾಲಮಿತಿ ಮೀರಿವೆ. ಎತ್ತಿನಹೊಳೆ ಯೋಜನೆಯಲ್ಲಿ ಭೂ ಸ್ವಾಧೀನಕ್ಕೆ ಅನುದಾನ ನೀಡದೆ ರೈತರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ಪರಿಹಾರ ಕೊಡದೆ ರೈತರ ಜಮೀನಿನಲ್ಲಿ ಕಾಮಗಾರಿ ಮಾಡುತ್ತಿದ್ದು, ವೈಜ್ಞಾನಿಕವಾಗಿ ಪರಿಹಾರ ನೀಡಿದ ನಂತರವೇ ಕೆಲಸ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆ ತಾಲ್ಲೂಕಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಫರ್ ಡ್ಯಾಂಗೆ 3 ಸಾವಿರ ಹೆಕ್ಟೇರ್ ಭೂಮಿ ಕಳೆದುಕೊಳ್ಳುವ ರೈತರಿಗೆ, ದೊಡ್ಡಬಳ್ಳಾಪುರ ಭಾಗದ ರೈತರಿಗೆ ನೀಡುವ ಪ್ರಮಾಣದಲ್ಲೇ ಪರಿಹಾರ ನೀಡಬೇಕು. ಯಾವುದೇ ಒತ್ತಡಗಳಿಗೆ ಮಣಿಯದೆ ಉದ್ದೇಶಿತ ಸ್ಥಳದಲ್ಲೇ ಬಫರ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ಆ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕು ಎಂದುಹೇಳಿದರು.

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ರೈತರಿಗೆ ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಪಾವತಿಸಿಲ್ಲ. ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಸದ ಕಂಪನಿಗಳ ಪರವಾಗಿಯೇ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿವೆ. ವಿಮಾ ಕಂಪನಿಗಳು ಮೊದಲು ಬೆಳೆ ಪರಿಹಾರ ನೀಡಬೇಕು. ಪರಿಹಾರ ನೀಡದ ಕಂಪನಿಗಳಿಗೆ ಮತ್ತೆ ವಿಮೆ ಮಾಡಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ನೀರು ಹರಿಸಬೇಕು. ನೀರಿನ ರಾಜಕಾರಣ ಮಾಡಬಾರದು. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀರು ಬಿಡುವುದಾಗಿ ಹೇಳಿರುವುದಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಒಳಗೊಂಡಿರುತ್ತಾರೆ. ನೀರು ಹಂಚಿಕೆ ಆಗದಿದ್ದರೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ಕುಡಿಯುವ ನೀರಿನ ಲೆಕ್ಕದಲ್ಲಿ ಹಂಚಿಕೆ ಮಾಡಬೇಕು. ನೀರು ಬಿಡುವುದಿಲ್ಲ ಎನ್ನುವುದಕ್ಕೆ ಮದಲೂರು ಅಫ್ಗಾನಿಸ್ತಾನದಲ್ಲಿ ಇದೆಯೇ ಎಂದುಪ್ರಶ್ನಿಸಿದರು.

ಜಿಲ್ಲೆಯಲ್ಲಿ ಬಗರ್ ಹುಕುಂ ಸಮಿತಿಗಳನ್ನು ರಚಿಸಿ ರೈತರಿಗೆ ಭೂ ಮಂಜೂರಾತಿ ಮಾಡಬೇಕು. ಹಿಂದೆ ಮಂಜೂರಾಗಿರುವ ಭೂಮಿಗೆ ಖಾತೆ ಮಾಡಿಕೊಡಬೇಕು. ಜಿಲ್ಲೆಯಲ್ಲಿ 27 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯವಿರುವ 2,050 ಕೆರೆಗಳು ಒತ್ತುವರಿಯಾಗಿದ್ದು, ಶೀಘ್ರ ಒತ್ತುವರಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ವಿದ್ಯುತ್ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ ಸೆ. 15ರಿಂದ 23ರ ವರೆಗೆ ಪಾವಗಡ, ಶಿರಾ, ಮಧುಗಿರಿ, ಗುಬ್ಬಿ, ತುರುವೇಕೆರೆ ಸೇರಿದಂತೆ ಎಲ್ಲಾ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ, ಜಿಲ್ಲಾ ಸಂಚಾಲಕ ರವೀಶ್, ತಾಲ್ಲೂಕು ಅಧ್ಯಕ್ಷರಾದ ವೆಂಕಟೇಗೌಡ, ಲಕ್ಷ್ಮಣ್‍ಗೌಡ, ಕೊರಟಗೆರೆ ತಾಲ್ಲೂಕು ಕಾರ್ಯದರ್ಶಿ ಶಬ್ಬೀರ್ ಪಾಷ, ಮುಖಂಡರಾದ ಮಹೇಶ್, ಸಿ.ಟಿ.ಕುಮಾರ್, ಚನ್ನಬಸವಯ್ಯ, ಸಿ.ಜಿ. ಲೋಕೇಶ್, ಜಯಣ್ಣ, ಮುಕುಂದಪ್ಪ, ಈಶಣ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಅವೇರಹಳ್ಳಿ ಲೋಕೇಶ್, ಕಾಳೇಗೌಡ, ನಾರಾಯಣಪ್ಪ, ರಾಮಣ್ಣ, ನರಸಿಂಹಮೂರ್ತಿ, ಅಸ್ಲಾಂಪಾಷ, ಮಧುಗಿರಿ ನಾಗರಾಜು, ನರಸಿಂಹಮೂರ್ತಿ
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT