ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಅತಿಥಿ ಉಪನ್ಯಾಸಕರು ಇಲ್ಲದೆ ನಡೆಯದ ತರಗತಿ

ಮುಂದುವರಿದ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ
Published 29 ನವೆಂಬರ್ 2023, 7:38 IST
Last Updated 29 ನವೆಂಬರ್ 2023, 7:38 IST
ಅಕ್ಷರ ಗಾತ್ರ

ತುಮಕೂರು: ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಸೇವೆ ಕಾಯಂಗೆ ಒತ್ತಾಯಿಸಿ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ತೊಡಗಿದ್ದು, ಶೈಕ್ಷಣಿಕ ಚಟುವಟಿಕೆಗಳ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದೆ.

ಸದ್ಯದ ಪರಿಸ್ಥಿತಿಯಲ್ಲಿ ದಿನಕ್ಕೆ ಒಂದೆರಡು ಗಂಟೆಗಳ ಕಾಲ ತರಗತಿಗಳು ನಡೆಯುವುದು ಕಷ್ಟಕರವಾಗಿದೆ. ಬಹುತೇಕ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನೇ ಅಲಂಬಿಸಿದ್ದು, ಈಗ ಅವರಿಲ್ಲದೆ ಪಾಠ ಮಾಡುವವರೇ ಇಲ್ಲವಾಗಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಅರ್ಧದಷ್ಟು ಅತಿಥಿ ಉಪನ್ಯಾಸಕರು, ಅರ್ಧಕ್ಕಿಂತ ಕಡಿಮೆ ಸಂಖ್ಯೆಯ ಕಾಯಂ ಉಪನ್ಯಾಸಕರು ಇದ್ದಾರೆ. ಪೂರ್ಣ ಪ್ರಮಾಣದಲ್ಲಿ ಕಾಯಂ ಉಪನ್ಯಾಸಕರ ನೇಮಕಾತಿ ಇಲ್ಲವಾಗಿದ್ದು ‘ಅತಿಥಿ’ಗಳನ್ನೇ ಆಶ್ರಯಿಸಬೇಕಾಗಿದೆ. ಕಳೆದ ಎರಡು ದಶಕಗಳಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಈಗ ಅವರು ಹೋರಾಟಕ್ಕೆ ಮುಂದಾಗಿದ್ದು, ಸಹಜವಾಗಿ ಪಾಠ ಪ್ರವಚನಗಳ ಮೇಲೆ ಪರಿಣಾಮ ಬೀರಿದೆ.

ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ 92 ಪದವಿ ಕಾಲೇಜುಗಳಿವೆ. ಅದರಲ್ಲಿ 40 ಸರ್ಕಾರಿ ಕಾಲೇಜುಗಳಿದ್ದು, ಅತಿಥಿ ಉಪನ್ಯಾಸಕರ ಮೂಲಕವೇ ಶೈಕ್ಷಣಿಕ ಚಟುವಟಿಕೆ ನಡೆಸಲಾಗುತ್ತಿದೆ. ಈಗ ಅನಿರ್ದಿಷ್ಟಾವಧಿ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದ್ದು, ಪಾಠ ಮಾಡಲು ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಬೆಳಗ್ಗೆ ಕಾಲೇಜಿಗೆ ಬಂದು ಒಂದೆರಡು ಗಂಟೆ ಪಾಠ ಕೇಳಿ ಮನೆಗಳತ್ತ ತೆರಳುತ್ತಿದ್ದಾರೆ. ಹಲವೆಡೆ 11 ಗಂಟೆಯ ನಂತರ ತರಗತಿಗಳು ನಡೆಯುತ್ತಿಲ್ಲ.

ನಗರದ ರೈಲು ನಿಲ್ದಾಣ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 45 ಕಾಯಂ ಮತ್ತು 89 ಮಂದಿ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಒಟ್ಟು 4 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಎಲ್ಲಾ ಅತಿಥಿ ಉಪನ್ಯಾಸಕರು ಗೈರಾಗಿದ್ದು, ಕಾಲೇಜಿನಲ್ಲಿ ಕೇವಲ 3 ಗಂಟೆ ಮಾತ್ರ ತರಗತಿಗಳು ನಡೆಯುತ್ತಿವೆ. ಈ ಹಿಂದೆ ಮಧ್ಯಾಹ್ನ 1 ಗಂಟೆ ವರೆಗೆ ನಡೆಯುತ್ತಿದ್ದ ಕಾಲೇಜು ಈಗ ಬೆಳಗ್ಗೆ 11 ಗಂಟೆಗೆ ಮುಗಿಯುತ್ತಿದೆ.

ವಿದ್ಯಾರ್ಥಿಗಳು ಬೆಳಗ್ಗೆ 10 ಗಂಟೆಯಿಂದಲೇ ವಾಲಿಬಾಲ್, ಶಟಲ್, ಕಬಡ್ಡಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದು, ಮಂಗಳವಾರ ಕಂಡುಬಂತು. ಕೆಲವರು ಗ್ರಂಥಾಲಯದಲ್ಲಿ ಪುಸ್ತಕ ಓದುತ್ತಾ ಕುಳಿತಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿನ ಕೊಠಡಿಗಳ ಮುಂದೆ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಬಸ್ ಹತ್ತಿಕೊಂಡು ಬಂದಿದ್ದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತರಗತಿಗಳು ನಡೆಯದ ಕಾರಣಕ್ಕೆ ಮಧ್ಯಾಹ್ನವೇ ಕಾಲೇಜುಗಳಿಂದ ಹೊರ ನಡೆದರು. ಕಾಯಂ ಉಪನ್ಯಾಸಕರು ವಿದ್ಯಾರ್ಥಿಗಳ ನಿರ್ವಹಣೆ ಮತ್ತು ತರಗತಿಗಳನ್ನು ನಡೆಸಲು ಪರದಾಡಿದರು.

ಇದೇ ಕಾಲೇಜಿನ ಆವರಣದಲ್ಲಿರುವ ಸಂಜೆ ಕಾಲೇಜಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ ಕೇವಲ ಒಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದು, 11 ಮಂದಿ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಜೆ ಕಾಲೇಜಿನಲ್ಲಿ 200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೆಳಗಿನ ಹೊತ್ತು ಬೇರೆ ಕೆಲಸ ಮಾಡಿಕೊಂಡು, ಸಂಜೆ ತರಗತಿಗಳಿಗೆ ಹಾಜರಾಗಿ ಪದವಿ ಪಡೆಯಬೇಕು ಎಂಬ ಕನಸು ಹೊತ್ತು ಬಂದವರಿಗೆ ನಿರಾಶೆಯಾಗಿದೆ.

ಜೂನಿಯರ್‌ ಕಾಲೇಜು ಮೈದಾನದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲೂ ಇದೇ ಪರಿಸ್ಥಿತಿ ಇದೆ. ಇಲ್ಲಿ 16 ಜನ ಕಾಯಂ ಉಪನ್ಯಾಸಕರಿದ್ದರೆ, 26 ಮಂದಿ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆಗಳಿಂದ 900 ವಿದ್ಯಾರ್ಥಿನಿಯರು ಶಿಕ್ಷಣಕ್ಕಾಗಿ ಈ ಕಾಲೇಜಿಗೆ ಬರುತ್ತಿದ್ದಾರೆ. ಆದರೆ ಅವರಿಗೆ ಅಗತ್ಯ ಶಿಕ್ಷಣವೇ ದೊರೆಯದಂತಾಗಿದೆ.

ಬೋಧನೆಗೆ ಉಪನ್ಯಾಸಕರೇ ಇಲ್ಲ ಬೆಳಗ್ಗೆ 11 ಗಂಟೆಗೆ ಕಾಲೇಜು ಮುಕ್ತಾಯ ಕಾಯಂ ಉಪನ್ಯಾಸಕರಿಂದ ಕಾಲೇಜು ನಿರ್ವಹಣೆಗೆ ಪರದಾಟ

ಉಪನ್ಯಾಸಕರಿಗೆ ಹೆಚ್ಚಿದ ಒತ್ತಡ ಅತಿಥಿ ಉಪನ್ಯಾಸಕರ ಧರಣಿಯಿಂದ ಕಾಯಂ ಉಪನ್ಯಾಸಕರ ಮೇಲೆ ಒತ್ತಡ ಹೆಚ್ಚಾಗಿದೆ. ಎಲ್ಲಾ ತರಗತಿಗಳನ್ನು ನಡೆಸಲು ಆದಷ್ಟು ಪ್ರಯತ್ನ ಮಾಡಲಾಗುತ್ತಿದೆ. ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ತಪ್ಪು ಎಂದು ಹೇಳಲು ಆಗುವುದಿಲ್ಲ. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಟಿ.ಡಿ.ವಸಂತಾ ಪ್ರಾಂಶುಪಾಲ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು

ಮುಂದೆ ಪರಿಣಾಮ ಈಗ ಅತಿಥಿ ಉಪನ್ಯಾಸಕರು ಮುಷ್ಕರ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ. 15–20 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಮುಷ್ಕರ ಮಾಡಬೇಡಿ ಎಂದು ಹೇಳುವುದು ಕಷ್ಟಕರ. ಕಾಯಂ ಮಾಡಲು ನಿಯಮಗಳು ಅಡ್ಡಿ ಬರುತ್ತವೆ. ಇವರ ಸಮಸ್ಯೆಗೆ ಸರ್ಕಾರವೇ ಪರಿಹಾರ ರೂಪಿಸಬೇಕಿದೆ. ಪರೀಕ್ಷೆ ಸಮಯದಲ್ಲಿ ಸಮಸ್ಯೆ ಎದುರಾಗಲಿದೆ. ಪಾಠ ಪೂರ್ಣಗೊಂಡಿಲ್ಲ ಎಂಬ ಕಾರಣಕ್ಕೆ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ ಸಮಯದಲ್ಲಿ ಕಷ್ಟಕರವಾಗುತ್ತದೆ. ಇದರಿಂದ ವಿ.ವಿ ಶೈಕ್ಷಣಿಕ ಶಿಸ್ತು ಪಾಲನೆ ಮೇಲೆ ಪರಿಣಾಮ ಬೀರಲಿದೆ. ಪ್ರೊ.ವೆಂಕಟೇಶ್ವರಲು ಕುಲಪತಿ ತುಮಕೂರು ವಿ.ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT