ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಇಂದಿರಾ ಕ್ಯಾಂಟೀನ್‌ ಸಿಬ್ಬಂದಿಗೆ 6 ತಿಂಗಳಿಂದ ಸಂಬಳ ಇಲ್ಲ!

₹2.40 ಕೋಟಿ ಬಾಕಿ ಉಳಿಸಿಕೊಂಡ ಪಾಲಿಕೆ; ವೇತನ ಪಾವತಿ ವಿಳಂಬ
Published 3 ಆಗಸ್ಟ್ 2024, 6:59 IST
Last Updated 3 ಆಗಸ್ಟ್ 2024, 6:59 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 4 ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ವೇತನ ಪಾವತಿಯಾಗದೆ, ಜೀವನ ನಿರ್ವಹಣೆ ಕಷ್ಟಕರವಾಗಿದೆ.

‘ರಿವಾರ್ಡ್ಸ್‌’ ಎಂಬ ಸಂಸ್ಥೆಗೆ ಇಂದಿರಾ ಕ್ಯಾಂಟೀನ್‌ ನಿರ್ವಹಣೆಯ ಟೆಂಡರ್‌ ನೀಡಲಾಗಿದೆ. ಕಳೆದ ಮೂರು ವರ್ಷಗಳಿಂದ ಈ ಸಂಸ್ಥೆಯ ಮುಖಾಂತರ ಸಿಬ್ಬಂದಿಗೆ ವೇತನ ವಾಪತಿಸಲಾಗುತ್ತಿದೆ.

‘ರಿವಾರ್ಡ್ಸ್‌ ಸಂಸ್ಥೆಗೆ ಕಳೆದ 16 ತಿಂಗಳಿನಿಂದ ಮಹಾನಗರ ಪಾಲಿಕೆ ಹಣ ಪಾವತಿಸಿಲ್ಲ. ಪ್ರತಿ ತಿಂಗಳು ₹15 ಲಕ್ಷ ಬಿಲ್‌ ಆಗಬೇಕಿತ್ತು. 2023ರ ಫೆಬ್ರುವರಿ ತಿಂಗಳಲ್ಲಿ ಕೊನೆಯ ಬಾರಿಗೆ ಬಿಲ್‌ ನೀಡಲಾಗಿದೆ. ಅಲ್ಲಿಂದ ಈವರೆಗೆ ಟೆಂಡರ್‌ ಪಡೆದ ಸಂಸ್ಥೆಗೆ ಬಿಲ್ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಕ್ಯಾಂಟೀನ್‌ ನಿರ್ವಹಿಸುವುದು ಕಷ್ಟಕರವಾಗುತ್ತಿದೆ. ಮಹಾನಗರ ಪಾಲಿಕೆ ಈವರೆಗೆ ₹2.40 ಕೋಟಿ ಬಾಕಿ ಉಳಿಸಿಕೊಂಡಂತಾಗಿದೆ. ಸಿಬ್ಬಂದಿ ವೇತನ ಪಾವತಿಯೂ ಸಾಧ್ಯವಾಗುತ್ತಿಲ್ಲ’ ಎಂದು ಸಂಸ್ಥೆಯ ಪ್ರಮುಖರೊಬ್ಬರು ತಿಳಿಸಿದರು.

ರೈಲು ನಿಲ್ದಾಣದ ರಸ್ತೆ, ಪಾಲಿಕೆ ಕಚೇರಿ ಪಕ್ಕದಲ್ಲಿರುವ ಕ್ಯಾಂಟೀನ್‌, ಜೆ.ಸಿ.ರಸ್ತೆ, ಶಿರಾಗೇಟ್‌ ಮತ್ತು ಕ್ಯಾತ್ಸಂದ್ರ ಬಳಿ ಸೇರಿ ಒಟ್ಟು ನಾಲ್ಕು ಕ್ಯಾಂಟೀನ್‌ಗಳು ನಗರದಲ್ಲಿ ದಿನನಿತ್ಯ ಬಡ ಜನರಿಗೆ ತಿಂಡಿ, ಊಟ ನೀಡುತ್ತಿವೆ. ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ತಿಂಡಿ, ಊಟ ಪೂರೈಸುವ ಉದ್ದೇಶದಿಂದ ಕ್ಯಾಂಟೀನ್‌ ಆರಂಭಿಸಲಾಗಿತ್ತು. ಕ್ಯಾಂಟೀನ್‌ ಪ್ರಾರಂಭದಿಂದ ಕೆಲಸ ಮಾಡುತ್ತಿರುವ 20 ಜನ ಸಿಬ್ಬಂದಿ ವೇತನ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಡುಗೆ ತಯಾರಕರು, ಸಹಾಯಕರು, ಊಟ ಬಡಿಸುವವರು, ಕ್ಯಾಷಿಯರ್‌, ಸ್ವಚ್ಛತಾಗಾರರು, ಮೇಲ್ವಿಚಾರಕರು ಕ್ಯಾಂಟೀನ್‌ ನಂಬಿಯೇ ಬದುಕು ದೂಡುತ್ತಿದ್ದಾರೆ. ಕಾಲ ಕಾಲಕ್ಕೆ ವೇತನ ಪಾವತಿಯಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಈ ಹಿಂದೆ ಎರಡು–ಮೂರು ತಿಂಗಳಿಗೊಮ್ಮೆ ಸಂಬಳ ಬರುತ್ತಿತ್ತು. ಈಗ ಆರು ತಿಂಗಳು ಕಳೆದಿದೆ. ಕಂಪನಿಯವರನ್ನು ಕೇಳಿದರೆ ‘ಪಾಲಿಕೆಯಿಂದ ಹಣ ಬಂದಿಲ್ಲ’ ಎನ್ನುತ್ತಾರೆ. ಪಾಲಿಕೆ ಅಧಿಕಾರಿಗಳನ್ನು ವಿಚಾರಿಸಿದರೆ ‘ನಾವು ಈಗಾಗಲೇ ಹಣ ಕೊಟ್ಟಿದ್ದೇವೆ’ ಎಂದು ಉತ್ತರಿಸುತ್ತಾರೆ. ಇದರಲ್ಲಿ ಯಾವುದನ್ನು ನಂಬಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಈ ಇಬ್ಬರ ಮಧ್ಯೆ ಸಮನ್ವಯ ಇಲ್ಲ. ಇದರಿಂದ ನಾವು ವೇತನ ಇಲ್ಲದೆ ಬಳಲುವಂತಾಗಿದೆ ಎಂದು ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಯಲ್ಲಿ ಹಲವರು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಸಾಲ ಮಾಡಿ ಬಾಡಿಗೆ ಕಟ್ಟುತ್ತಿದ್ದಾರೆ. ಈಗ ಆ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಪರದಾಡುತ್ತಿದ್ದಾರೆ. ಕೈ ಸಾಲ, ವಿವಿಧ ಫೈನಾನ್ಸ್‌ ಕಂಪನಿಗಳಿಂದ ಸಾಲ ಪಡೆದಿದ್ದಾರೆ. ಇದನ್ನು ತೀರಿಸುವುದು ಅವರಿಗೆ ಸವಾಲಾಗಿದೆ. ಮಕ್ಕಳ ಶಿಕ್ಷಣ ಮತ್ತಷ್ಟು ಹೊರೆಯಾಗುತ್ತಿದೆ. ಕ್ಯಾಂಟೀನ್‌ ಕೆಲಸ ಬಿಟ್ಟು ಬೇರೆ ದಾರಿ ಕಂಡುಕೊಳ್ಳಲು ಮುಂದಾಗಿದ್ದು, ಕೆಲಸ ಹುಡುಕುತ್ತಿದ್ದಾರೆ.

Quote - ಇಂದಿರಾ ಕ್ಯಾಂಟೀನ್‌ ಟೆಂಡರ್‌ ಪಡೆದ ಸಂಸ್ಥೆಗೆ ಒಂದು ವರ್ಷದಿಂದ ಬಿಲ್‌ ಪಾವತಿಸುವುದು ಬಾಕಿ ಇದೆ. ಹಣ ಪಾವತಿಗೆ ಅಗತ್ಯ ಕ್ರಮ ಕೈಳ್ಳಲಾಗಿದೆ. ಬಿ.ವಿ.ಅಶ್ವಿಜ ಆಯುಕ್ತರು ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT