ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಳ ಮೀಸಲಾತಿ ಭಿಕ್ಷೆಯಲ್ಲ, ಹಕ್ಕು’

ಸದಾಶಿವ ಆಯೋಗದ ವರದಿ ಜಾರಿಗೆ ಆದಿಜಾಂಬವ ಸಮಾವೇಶದಲ್ಲಿ ಒತ್ತಾಯ
Last Updated 3 ಜನವರಿ 2023, 7:39 IST
ಅಕ್ಷರ ಗಾತ್ರ

ತುರುವೇಕೆರೆ: ‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಫೆಬ್ರುವರಿಯಲ್ಲಿ ನಡೆಯುವ ಅದಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವ ಮೂಲಕ ಪರಿಶಿಷ್ಟರ ಏಳಿಗೆಗೆ ಟೊಂಕಕಟ್ಟಿ ನಿಂತಿದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎಂ.ನಾರಾಯಣಸ್ವಾಮಿ ಭರವಸೆ ನೀಡಿದರು.

ತಾಲ್ಲೂಕಿನ ಗುರುಭವನ ಆವರಣದಲ್ಲಿ ಸೋಮವಾರ ತಾಲ್ಲೂಕು ಆದಿಜಾಂಬವ ಸಮ್ಮೇಳನ, ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ತಾಲ್ಲೂಕು ಮಾದಿಗ ಸಮಾಜ
ದಿಂದ ಹಮ್ಮಿಕೊಂಡಿದ್ದ ಸಮಾವೇಶ ಉದ‍್ಘಾಟಿಸಿ ಮಾತನಾಡಿದರು.

ಸದಾಶಿವ ಆಯೋಗ ಜಾರಿ ಮಾಡುವಂತೆ ಹೋರಾಟ ಮಾಡುತ್ತಿದ್ದರೂ ಕೆಲ ಸರ್ಕಾರಗಳು ಕಡೆಗಣಿಸಿದ್ದವು. ಆದರೆ ಮುಖ್ಯಮಂತ್ರಿ ಈಗಾಗಲೇ ಎಸ್.ಸಿ ಗೆ 15 ರಿಂದ 17ಕ್ಕೆ ಎಸ್.ಟಿಗೆ ಶೇ 3ರಿಂದ 7 ಮೀಸಲಾತಿ ಹೆಚ್ಚಿಸಿದ್ದಾರೆ. ಬಹು ಸಂಖ್ಯಾತರಾದ ಮಾದಿಗರಿಗೆ ಅನ್ಯಾಯವಾಗಿದ್ದು ಸದಾಶಿವ ಆಯೋಗವನ್ನು ಜಾರಿ ಮಾಡಿ ಎಂದು ಸಚಿವ ಗೋವಿಂದ ಕಾರಜೋಳ ಜತೆಯಾಗಿ ಮುಖ್ಯಮಂತ್ರಿ ಜತೆ ಮಾತನಾಡಿ ಚರ್ಚಿಸಿದ್ದಾರೆ ಎಂದರು.

‘ಮಾದಿಗರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ನಾನು ಯಾವತ್ತೂ ಹಣ, ಅಧಿಕಾರಕ್ಕೆ ಅಂಟಿಕೊಂಡಿಲ್ಲ. ಸಮಾಜದ ಬಂಧುವಾಗಿ ಹೋರಾಟ ಮಾಡುತ್ತೇನೆ. ರಾಜ್ಯದ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿ 5 ಲಕ್ಷಕ್ಕೂ ಅಧಿಕ ಸದಸ್ಯರನ್ನು ಮಾಡಿ ಎಲ್ಲ ಸಂಘಟನೆಗಳನ್ನು ಒಂದೇ ಸಂಘಟನೆ ಅಡಿಯಲ್ಲಿ ತರಲಾಗುವುದು’ ಎಂದರು.

ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ‘ಸರ್ಕಾರ ಮೀಸಲಾತಿ ಏರಿಕೆ ಮಾಡಿದ್ದರೂ ಇದರಲ್ಲಿ ಮಾದಿಗ ಸಮುದಾಯಕ್ಕೆ ಯಾವುದೇ ಉಪಯೋಗವಿಲ್ಲ. ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಸಿಗದಿದ್ದರೆ ಈ ಮಾದಿಗ ಸಮಾಜ ಸರ್ವ ನಾಶವಾಗಲಿದೆ. ಬಡತನ, ಶೋಷಿತ ಸಮುದಾಯವಾಗಿದೆ. ಸರ್ಕಾರ ಸದಾಶಿವ ಆಯೋಗದ ಒಳ ಮೀಸಲಾತಿ ಜಾರಿ ಮಾಡಬೇಕು’
ಎಂದರು.

ಕೋಡಿಹಳ್ಳಿ ಮಠದ ಷಡಾಕ್ಷರಿ ಸ್ವಾಮೀಜಿ ಮಾತನಾಡಿ, ‘ಮಾದಿಗ ಸಮುದಾಯ ಜನರು ಬುದ್ಧಿಯಿಂದ ಬುದ್ದನಾಗಬೇಕು. ಆಧುನಿಕ ಯುಗದಲ್ಲಿ ಯಾರು ಯಾರನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ನೀವು ಶಿಕ್ಷಣವನ್ನು ಪಡೆದು ನಿಮ್ಮ ಕೈಯಿಂದಲೇ ಅಭಿವೃದ್ಧಿಯಾದರೆ ಸಮುದಾಯ ಅಭಿವೃದ್ಧಿಯಾದಂತೆ’ ಎಂದರು.

ಶಾಸಕ ಮಸಾಲ ಜಯರಾಮ್ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರಿಗೆ ಹಾಗೂ ತಮಟೆ, ಜಾನಪದ ಹಾಡು ಹೇಳುವ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಆದಿಜಾಂಬವ ಸಮಾಜದ ಅಧ್ಯಕ್ಷ ವಿ.ಟಿ.ವೆಂಕಟರಾಮಯ್ಯ, ವಿರಕ್ತ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಎಂ.ಡಿ.ಲಕ್ಷ್ಮಿನಾರಾಯಣ್, ಎಚ್.ಬಿ.ನಂಜೇಗೌಡ, ಎಸ್.ರುದ್ರಪ್ಪ, ಸಿ.ವಿ.ಮಹಾಲಿಂಗಯ್ಯ, ಬೆಮೆಲ್ ಕಾಂತರಾಜು, ಗಂಗಹನುಮಯ್ಯ, ವೈ.ಎಚ್.ಹುಚ್ಚಯ್ಯ, ಪ್ರಭಾಕರ್, ಶೀಲಾ, ಚಿದಾನಂದ್, ಕೊಂಡಜ್ಜಿ ವಿಶ್ವನಾಥ್, ಬಾಣಸಂದ್ರ ರಮೇಶ್, ಪ್ರಸನ್ನಕುಮಾರ್, ವೀರೇಂದ್ರ ಪಾಟೀಲ್, ನರಸಿಂಹಮೂರ್ತಿ, ಕೊಂಡಜ್ಜಿ ಪುಟ್ಟಣ್ಣ, ದಂಡಿನಶಿವರ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT