ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ತುಂಬಿಸುವ ಯೋಜನೆಗೆ ಹಿನ್ನಡೆ?

ಸಣ್ಣ ನೀರಾವರಿ ಖಾತೆಯ ಮೇಲೆ ಹೆಚ್ಚಿನ ಆಸೆ ಹೊತ್ತಿದ್ದ ಸಚಿವ ಮಾಧುಸ್ವಾಮಿ
Last Updated 22 ಜನವರಿ 2021, 1:07 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಖಾತೆ ಬದಲಾವಣೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅದರಲ್ಲಿಯೂ ಬರದಿಂದ ನಲುಗಿದ್ದ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜನರ ನೀರಾವರಿ ಆಸೆಯ ರೆಕ್ಕೆಗಳು ಮುದುಡಿವೆ.

ರಾಜ್ಯದಲ್ಲಿಯೇ ತೀವ್ರ ಅಂತರ್ಜಲ ಕುಸಿದಿರುವ ತಾಲ್ಲೂಕುಗಳಲ್ಲಿ ಚಿಕ್ಕನಾಯಕನಹಳ್ಳಿ ಎರಡನೇ ಸ್ಥಾನದಲ್ಲಿ ಇದೆ. ಮಾಧುಸ್ವಾಮಿ ಅವರು ಸಚಿವರಾದ ನಂತರ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಗೆ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಮತ್ತು ಹೇಮಾವತಿ ನೀರಾವರಿ ಯೋಜನೆಯಿಂದ ತಾಲ್ಲೂಕಿನ 131 ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಿದ್ದರು. ನಾಲ್ಕು ಟಿಎಂಸಿ ಅಡಿ ನೀರು ಪಡೆಯುವ ಆಶಾಭಾವ ವ್ಯಕ್ತಪಡಿಸಿದ್ದರು.

ಸಣ್ಣ ನೀರಾವರಿ ಇಲಾಖೆಯಿಂದ 96 ಕೆರೆಗಳಿಗೆ ನೀರು ಪೂರೈಕೆಗೆ ಈಗಾಗಲೇ ₹ 260 ಕೋಟಿ ಮಂಜೂರು ಮಾಡಿಸಿದ್ದರು. ಹುಳಿಯಾರು ಭಾಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಪೂರೈಕೆಗೆ ಕ್ರಮವಹಿಸಿದ್ದರು.

ಇತ್ತೀಚೆಗೆ ಶಾಸಕ ಬಿ.ಸಿ.ನಾಗೇಶ್ ಮತ್ತು ಜೆ.ಸಿ.ಮಾಧುಸ್ವಾಮಿ ಪ್ರಯತ್ನದ ಫಲವಾಗಿ ತಿಪಟೂರು ತಾಲ್ಲೂಕಿನ ನೀರಾವರಿ ಯೋಜನೆಗಳಿಗೂ ಸರ್ಕಾರ ಅಸ್ತು ಎಂದಿತ್ತು. ತಿಪಟೂರಿನ 96 ಕೆರೆಗಳನ್ನು ತುಂಬಿಸಲು ₹ 200 ಕೋಟಿ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿತ್ತು.

ಅಟಲ್ ಭೂ ಜಲದ ಕನಸು: ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಆ ಪ್ರದೇಶಗಳಲ್ಲಿ ಅಂತರ್ಜಲ ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರದ ಅಟಲ್ ಭೂ ಜಲ ಯೋಜನೆಯನ್ನು ಮಾಧುಸ್ವಾಮಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಆಲೋಚನೆ ಹೊಂದಿದ್ದರು. ಈ ಯೋಜನೆಗೆ ಜಿಲ್ಲೆಯ ಆರು ತಾಲ್ಲೂಕುಗಳು ಸೇರಿವೆ. ಪೈಲೆಟ್ ಯೋಜನೆಗೆ ಒಳಪಟ್ಟಿರುವ ಚಿಕ್ಕನಾಯಕನಹಳ್ಳಿಯಲ್ಲಿ ಈಗಾಗಲೇ ಸಭೆಗಳನ್ನೂ ನಡೆಸಿದ್ದರು.

ಸಣ್ಣ ನೀರಾವರಿ ಇಲಾಖೆಯಲ್ಲಿನ ಯೋಜನೆಗಳ ಮೂಲಕ ಚೆಕ್‌ಡ್ಯಾಂಗಳ ನಿರ್ಮಾಣ ಸೇರಿದಂತೆ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಮುಂದಾಗಿದ್ದರು. ಈ ಪರಿಣಾಮವಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು, ಶೆಟ್ಟಿಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ತುಂಬಿದೆ.

‘ಜಿಲ್ಲೆಯ ಅಂತರ್ಜಲದ ಅಭಿವೃದ್ಧಿಗೂ ಮಾಧುಸ್ವಾಮಿ ಆಲೋಚಿಸಿದ್ದರು. ಈ ಸಣ್ಣ ಇಲಾಖೆಯೇ ಅವರಿಗೆ ದೊಡ್ಡದಾಗಿ ಕಂಡಿತ್ತು. ಸಣ್ಣ ನೀರಾವರಿ ವಿಚಾರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಕಲಬುರ್ಗಿಯಲ್ಲಿ ಇತ್ತೀಚೆಗೆ ಸಚಿವರನ್ನು ಕಾಂಗ್ರೆಸ್‌ ಶಾಸಕರೇ ಸನ್ಮಾನಿಸಿದ್ದರು’ ಎಂದು ಸಚಿವರ ಆಪ್ತರು ನುಡಿಯುವರು.

‘ಮಾಧುಸ್ವಾಮಿ ಸಚಿವರಾದ ನಂತರವೇ ಜಿಲ್ಲೆಗೆ ಹೇಮಾವತಿ ನೀರು ಸಮರ್ಪಕವಾಗಿ ಹರಿಯುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ಹಂಚಿಕೆ ಆಗಿರುವ ಪೂರ್ಣ ಪ್ರಮಾಣದ ನೀರನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗೆ ಪ್ರಮುಖವಾಗಿ ಕೇಂದ್ರೀಕರಿಸಿ ಕೆಲಸ ಮಾಡುತ್ತಿದ್ದರು. ಈ ಕಾರಣದಿಂದ ಅವರು ಬೇಸರಗೊಂಡಿದ್ದಾರೆ’ ಎಂದು ಆಪ್ತಮೂಲಗಳು ಮಾಹಿತಿ ನೀಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT