ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 10 ರಂದು ರಾಷ್ಟ್ರವ್ಯಾಪ್ತಿ ಅಂಗನವಾಡಿ ಬಂದ್

ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನೆ: ಪತ್ರಿಕಾಗೋಷ್ಠಿಯಲ್ಲಿ ಜಿ.ಕಮಲ ಹೇಳಿಕೆ
Last Updated 5 ಜುಲೈ 2018, 17:28 IST
ಅಕ್ಷರ ಗಾತ್ರ

ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರದಾದ್ಯಂತ ಅಂಗನವಾಡಿ ನೌಕರರು ಜುಲೈ 10 ರಂದು ಅಂಗನವಾಡಿ ಬಂದ್ ಮಾಡಿ ಆಯಾ ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ.ಕಮಲ ತಿಳಿಸಿದ್ದಾರೆ.

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಯೋಜನೆಯ ಅನುದಾನ ಕಡಿತ, ಖಾಸಗೀಕರಣ, ಖಾಸಗಿ ಎಲ್‌ಕೆಜಿ, ಯುಕೆಜಿ ತೆರೆಯಲು ವಿರೋಧಿಸಿ, ಕನಿಷ್ಠ ವೇತನ, ಖಾತ್ರಿ ಪಿಂಚಣಿ ಮುಂಬಡ್ತಿಯಲ್ಲಿ ಮಿಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಭಾರತ ಕಾರ್ಮಿಕ ಸಂಘಗಳ ಕೆಂದ್ರ (ಸಿಐಟಿ)ಯು ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಖಾಸಗಿ ಶಾಲೆಗಳ ರೀತಿ ಸರ್ಕಾರಿ ಶಾಲೆಗಳಲ್ಲಿಯೂ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ತೆರೆದರೆ, ಅಂಗನವಾಡಿಗಳು ಮುಚ್ಚುವ ಸ್ಥಿತಿ ತಲುಪಲಿವೆ. ಆದ್ದರಿಂದ ಅಂಗನವಾಡಿಗಳನ್ನೇ ಮೇಲ್ದರ್ಜೆಗೇರಿಸಿ, ಅಲ್ಲಿನ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.

ಐಸಿಡಿಎಸ್‌ ಯೋಜನೆಯ ಕೇಂದ್ರ ಸರ್ಕಾರ 2010 ರಿಂದ ಯಾವುದೇ ಅನುದಾನವನ್ನು ಹೆಚ್ಚಳ ಮಾಡಿಲ್ಲ. ಹಾಗಾಗಿ ಒಂದು ಮಾತೃಪೂರ್ಣ ಯೋಜನೆಯ ಕಡತಕ್ಕೆ ಕನಿಷ್ಠ ₹ 300 ಗೌರವ ಧನ ನೀಡಬೇಕು. ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆರಿಗೆ ರಜೆ, ಖಾಯಿಲೆಗಳು ಬಂದಾಗ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.

ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಪಾಂಡುಚೇರಿಗಳಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಕನಿಷ್ಠ ವೇತನ 11 ರಿಂದ 12 ಸಾವಿರವಿದೆ. ಹಾಗಾಗಿ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ₹ 18 ಸಾವಿರ ವೇತನ ನೀಡಬೇಕು. ಜೊತೆಗೆ ಖಾತ್ರಿ ಪಿಂಚಿಣಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಮಿನಿ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವಷ್ಟೇ ಗೌರವ ಧನ ನಿಗಧಿ ಮಾಡಬೇಕೆಂಬುದು ನಮ್ಮ ಹೋರಾಟವಾಗಿದೆ ಎಂದು ಕಮಲ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಭಾನು, ಉಪಾಧ್ಯಕ್ಷೆ ಎಸ್.ಡಿ.ಪಾವರ್ತಮ್ಮ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಗೊಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT